ತಮಿಳುನಾಡು: ಮತದಾರರ ಪಟ್ಟಿಯಿಂದ 12 ಲಕ್ಷ ಮುಸ್ಲಿಮ್ ಮತದಾರರು ಮಾಯ!

0
2093

ಚೆನ್ನೈ: ತಮಿಳುನಾಡು ಮತದಾರರ ಪಟ್ಟಿಯಿಂದ 12 ಲಕ್ಷ ಮುಸ್ಲಿಮ್ ಮತದಾರರ ಹೆಸರುಗಳು ಮಾಯವಾಗಿರುವುದರ ಕುರಿತು ಸರಿಯಾದ ತನಿಖೆ ನಡೆಯಬೇಕೆಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ತಮಿಳುನಾಡಿನ 25,000 ಮಸೀದಿಗಳಿಂದ ಮತದಾರರ ಮಾಹಿತಿಯನ್ನು ಕಲೆಹಾಕಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ಹೇಳಿಕೆ ನೀಡಿದ್ದು ಈ ದಾಖಲೆಗಳಂತೆ ಪರಿಶಿಲನೆ ನಡೆಸಿದಾಗ ಮತದಾರರ ಪಟ್ಟಿಯಲ್ಲಿ ಸರಿಸುಮಾರು ಹನ್ನೆರಡು ಲಕ್ಷ ಮುಸ್ಲಿಮ್ ಮತದಾರರ ಹೆಸರುಗಳು ಇಲ್ಲದಿರುವುದನ್ನು ಬಹಿರಂಗ ಪಡಿಸಿದ್ದಾರೆ. ಈ ಹಿಂದೆ 2018 ರಲ್ಲಿಯೇ ಇತ್ತಿಚೆಗಿನ ತಿಂಗಳುಗಳಲ್ಲಿ ನಡೆದ ಕರ್ನಾಟಕ ರಾಜ್ಯ ಚುನಾವಣೆ ಮತದಾರರ ಪಟ್ಟಿಯಲ್ಲಿ ಮುಸ್ಲಿಮ್ ಮತದಾರರ ಹೆಸರುಗಳು ಇಲ್ಲವಾಗಿರುವ ಕುರಿತು ದೂರುಗಳು ಕೇಳಿಬಂದಿದ್ದವು. ನವದೆಹಲಿಯ ದಿ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡಿಬೇಟ್ ಇನ್ ಡೆವಲಪ್ಮೆಂಟ್( CRDDP ) ಬಿಡುಗಡೆಗೊಳಿಸಿದ ಅಪ್ಲಿಕೇಶನ್ ಒಂದರಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಸರಿಸುಮಾರು 18 ಲಕ್ಷ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕಾಣೆಯಾದ ಅಥವಾ ಅವರಿಗೆ ಮತದಾನ ಚೀಟಿಯನ್ನೇ ವಿತರಸದಿರುವುದು ಬೆಳಕಿಗೆ ಬಂದಿತ್ತು.
ಇದಲ್ಲದೇ ಮಧ್ಯಪ್ರದೇಶದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ನಕಲಿ ಮತದಾರರು ಮತದಾರರ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಕುರಿತು ಕಾಂಗ್ರೆಸ್ ಆರೋಪಿಸಿತ್ತು . ಆದರೆ ಭಾರತೀಯ ಚುನಾವಣಾ ಆಯೋಗವು ಈ ಆರೋಪವನ್ನು ತಳ್ಳಿಹಾಕಿತು.
2019 ರಲ್ಲಿ ನಡೆಯಲಿರುವ ಚುನಾವಣೆಯ ಅವಧಿಯ ದಿಕ್ಕು ಈ ರೀತಿಯ ಸಮಸ್ಯೆಗಳಿಗೆ ತುತ್ತಾಗುವುದೋ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ಈ ಘಟನಾವಳಿಗಳ ಕುರಿತು ಸಾಮಾಜಿಕ‌ ಕಾರ್ಯಕರ್ತರು ಎಚ್ಚರಿಸಿದ್ದು ದಕ್ಷಿಣ ಭಾರತದಾದ್ಯಂತ ಮತದಾರರ ಪಟ್ಟಿ ಪರಿಶೀಲನೆ ಮತ್ತು ದತ್ತಾಂಶ ಸಂಗ್ರಹಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇನ್ನು ಉತ್ತರ ಭಾರತದಲ್ಲಿ ಯಾವ ರೀತಿಯ ಬೆಳವಣಿಗೆಗಳು ಕಂಡು ಬರುವವೋ ಕಾದು ನೋಡಬೇಕಿದೆ.