ಕೃಷಿ ಕಾನೂನುಗಳ ವಿರುದ್ಧ ತೀವ್ರಗೊಂಡ ರೈತ ಹೋರಾಟ: ‘ಗೆಲುವು, ಇಲ್ಲವೇ ಸಾವು’- ಕಿಸಾನ್ ಪರೇಡ್ ನಿಶ್ಚಿತ ಎಂದ ರೈತರು

0
475

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.8: ವಿವಾದಿತ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಸರಕಾರದೊಂದಿಗೆ ನಡೆಸಿದ ಎಂಟನೆ ಚರ್ಚೆಯು ವಿಫಲವಾದ ಹಿನ್ನೆಲೆಯಲ್ಲಿ ಒಂದೋ ಕಾನೂನು ಹಿಂದೆ ಪಡೆಯಬೇಕು ಇಲ್ಲದಿದ್ದರೆ ಸಾವು ಬರಬೇಕು ಎಂದು ಘೋಷಿಸಿರುವುದು ವರದಿಯಾಗಿದೆ. ಇದೇ ವೇಳೆ ರೈತರು ಗಣರಾಜ್ಯೋತ್ಸವದಂದು ಹಮ್ಮಿಕೊಂಡಿರುವ ಕಿಸಾನ್ ರ್ಯಾಲಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜನವರಿ 15ರಂದು ಸರಕಾರ ಬರೆದಿರುವ ಒಂಬತ್ತನೆಯ ಚರ್ಚೆಗೆ ಹೋಗಬೇಕೇ ಬೇಡವೇ ಎಂದು ಹನ್ನೊಂದನೇ ತಾರೀಕಿಗೆ ತೀರ್ಮಾನಿಸುವುದಾಗಿ ರೈತರು ಹೇಳಿದ್ದಾರೆ.

ಗೆಲುವು ಇಲ್ಲ ಸಾವು ಎಂಬ ಪ್ಲೇಕಾರ್ಡ್‌ ನೊಂದಿಗೆ ರೈತರು ಚರ್ಚೆಗೆ ಬಂದಿದ್ದರು. ಕೃಷಿ ಕಾನೂನು ಹಿಂಪಡೆಯುವ ತೀರ್ಮಾನವಿಲ್ಲದ್ದಕ್ಕಾಗಿ ಪ್ರತಿಭಟಿಸಿ ರೈತರು ಮೌನ ಆಚರಿಸಿದರು ನಂತರ ಎರಡು ಪಕ್ಷಗಳಲ್ಲಿ ವಾಗ್ವಾದ ನಡೆಯಿತು. ಈ ತಿಂಗಳು ಹನ್ನೊಂದನೆ ತಾರೀಕಿಗೆ ಕೋರ್ಟು ಕೇಸು ಪರಿಗಣಿಸಲಿದೆ ಎಂದು ಸರಕಾರ ಹೇಳಿದಾಗ ಅದಕ್ಕೆ ನಾವು ಯಾರೂ ಕೋರ್ಟಿಗೆ ಹೋಗಿಲ್ಲ ಎಂದು ರೈತರು ಹೇಳಿದರು.

ಕೃಷಿ ಕಾನೂನು ಪಂಜಾಬ್, ಹರಿಯಾಣಕ್ಕೆ ಮಾತ್ರ ಮಾಡಿದ್ದಲ್ಲ ಎಂದು ಸರಕಾರದ ಪ್ರತಿನಿಧಿಗಳು ಹೇಳಿದರು. ಚರ್ಚೆಯ ಮುಂಚಿನ ದಿನ ಸಿಖ್ ಪುರೋಹಿತರೊಬ್ಬರನ್ನು ಕರೆತಂದು ಮಧ್ಯಸ್ಥಿಕೆಯಲ್ಲಿ ಪರಿಹಾರ ಕಂಡು ಹುಡುಕುವ ಪ್ರಯತ್ನವೂ ವಿಫಲವಾಗಿತ್ತು.

ಕಾನೂನಿನ ಕುರಿತು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಚರ್ಚೆಯ ಬಳಿಕ ಹೇಳಿದರು. ಕಾನೂನು ಹಿಂದೆ ಪಡೆಯುವುದಲ್ಲದೆ ಬೇರೇನಾದರೂ ಮಾರ್ಗಗಳಿವೆಯೇ ಎಂದು ಕೇಳಿದಾಗ ಇಲ್ಲವೆಂದು ರೈತರು ಹೇಳಿದರು. ಆದ್ದರಿಂದ ಹದಿನೈದನೆ ತಾರೀಕಿಗೆ ಪುನಃ ಚರ್ಚೆ ನಡೆಸೋಣವೆಂದು ಹೇಳಿ ಚರ್ಚೆಗೆ ವಿರಾಮ ಹಾಕಲಾಗಿದೆ ಎಂದು ತೋಮರ್ ಹೇಳಿದರು.