ಅರ್ಮಿನ್ ವೋಲ್ಫ್ ಎಂಬ ಉಗ್ರವಾದಿ ಮತ್ತು ವಿಲಿಮಿಸ್ಕಿ ಎಂಬ ದೇಶಪ್ರೇಮಿ

0
907

ಸನ್ಮಾರ್ಗ ಸಂಪಾದಕೀಯ

ಆಸ್ಟ್ರಿಯಾದಲ್ಲಿ ಇತ್ತೀಚೆಗೆ ನಡೆದಿರುವ ಮತ್ತು ನಡೆಯುತ್ತಿರುವ ಬೆಳವಣಿಗೆಗಳು ಭಾರತೀಯ ಪರಿಸ್ಥಿತಿಗೆ ಬಹಳವಾಗಿ ಹೋಲುತ್ತದೆ. ಯುರೋಪಿಯನ್ ಯೂನಿಯನ್‍ನ ಸದಸ್ಯ ರಾಷ್ಟ್ರವಾಗಿರುವ ಆಸ್ಟ್ರಿಯಾದಲ್ಲಿ ಮೈತ್ರಿ ಸರಕಾರವಿದೆ. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾವು ಈ ಮೈತ್ರಿ ಸರಕಾರದ ಪಾಲುದಾರ ಪಕ್ಷ. ಯುರೋಪಿಯನ್ ಯೂನಿಯನ್‍ನ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಿರುವ ಈ ಪಕ್ಷದ ಹೆರಾಲ್ಡ್ ವಿಲಿಮಿಸ್ಕಿಯನ್ನು ಇತ್ತೀಚೆಗೆ ಅಲ್ಲಿನ ಹೆಸರಾಂತ ಟಿವಿ ನಿರೂಪಕ ಅರ್ಮಿನ್ ವೋಲ್ಫ್ ಸಂದರ್ಶನ ನಡೆಸಿದರು. ಅರ್ಮಿನ್ ವೋಲ್ಫ್ ರು ಆಸ್ಟ್ರಿಯಾದ ಅತ್ಯಂತ ಗೌರವಾನ್ವಿತ ಮತ್ತು ಜನಪ್ರಿಯ ಟಿ.ವಿ. ನಿರೂಪಕ. ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾ ಪಕ್ಷವು ನಡೆಸುತ್ತಿರುವ ಚುನಾವಣಾ ಪ್ರಚಾರ ವೈಖರಿಯನ್ನು ಸಂದರ್ಶನದ ವೇಳೆ ವಿಲಿಮಿಸ್ಕಿಯವರಲ್ಲಿ ವೋಲ್ಫ್ ಪ್ರಶ್ನಿಸಿದರು. ಮುಖ್ಯವಾಗಿ, ಇಸ್ಲಾಮೋಫೋಬಿಯ(ಇಸ್ಲಾಮ್ ಭೀತಿ)ವನ್ನು ಬಿತ್ತುವ ಮತ್ತು ಜನಾಂಗೀಯವಾದವನ್ನು ಬೆಳೆಸುವ ವ್ಯಂಗ್ಯ ಚಿತ್ರವನ್ನು ಪಕ್ಷದ ಪ್ರಕಟಣೆಗಳಲ್ಲಿ ಬಳಸಿರುವುದನ್ನು ಅವರು ಬೊಟ್ಟು ಮಾಡಿದರು. ವಿಲಿಮಿಸ್ಕಿಯವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಅರ್ಮಿನ್ ವೋಲ್ಫ್ ಅವರು ಹಿಟ್ಲರ್ ಕಾಲದ ಚಿತ್ರಗಳನ್ನು ಅವರ ಮುಂದೆ ಪ್ರದರ್ಶಿಸಿದರು. ಯಹೂದಿಯರನ್ನು ಇದೇ ರೀತಿಯಲ್ಲಿ ಹಿಟ್ಲರ್ ಬಿಂಬಿಸಿರುವುದನ್ನು ಎತ್ತಿ ಹಿಡಿದರು. ಈ ಎರಡರಲ್ಲಿ ಏನು ವ್ಯತ್ಯಾಸವಿದೆ ಎಂದು ಅವರು ಪ್ರಶ್ನಿಸಿದರು. ತಕ್ಷಣ ವಿಲಿಮಿಸ್ಕಿ ಸಿಟ್ಟಾದರು. ನೀನಿದರ ಪರಿಣಾಮವನ್ನು ಎದುರಿಸುವೆ ಎಂದು ಬೆದರಿಕೆ ಹಾಕಿದರು. ಅಂದಿನಿಂದ ಅಸ್ಟ್ರಿಯಾದ ವೈಸ್ ಚಾನ್ಸಲರ್ ಹೈನ್ ಕ್ರಿಸ್ಚಿಯನ್ ಸ್ಟ್ರಾಚೆಯೂ ಸೇರಿದಂತೆ ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾದ ರಾಜಕಾರಣಿಗಳು ಮತ್ತು ಬೆಂಬಲಿಗರು ಅತ್ಯಂತ ನಿಂದನೀಯ ಭಾಷೆಯಲ್ಲಿ ಅರ್ಮಿನ್ ವೋಲ್ಫ್ ರನ್ನು ಜರೆಯುತ್ತಿದ್ದಾರೆ. ಅವನು ಎಡಪಂಥೀಯ ಉಗ್ರಗಾಮಿ, ದೇಶದ್ರೋಹಿ ಎಂದೆಲ್ಲಾ ಅಪಮಾನಕರ ಭಾಷೆಯಲ್ಲಿ ಜರೆಯುತ್ತಿರುವವರಲ್ಲದೇ, ವೋಲ್ಫ್ ರನ್ನು ವಜಾ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಹಾಗಂತ,

ಕಳೆದ ಶುಕ್ರವಾರ ಆಚರಿಸಲಾದ ವಿಶ್ವ ಪತ್ರಿಕಾ ದಿನಾಚಣೆಯ ಆಸುಪಾಸಿನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿರುವುದನ್ನು ನಾವು ಅಚ್ಚರಿಯಿಂದ ನೋಡಬೇಕಿಲ್ಲ. ಬಲಪಂಥೀಯ ವಿಚಾರಧಾರೆಯು ಟೀಕೆಯನ್ನೇ ಒಪ್ಪದ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ರಾಷ್ಟ್ರಗಳು ಸಾಕ್ಷ್ಯ ವಹಿಸಿವೆ. ಟೀಕೆಗೆ ಪ್ರತಿಯಾಗಿ ನಿಂದನೆ, ಅವಮಾನ, ಬೆದರಿಕೆ, ಹಲ್ಲೆ ಮತ್ತು ಚಾರಿತ್ರ್ಯಹರಣದ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಹಂಚುವುದು ಇತ್ಯಾದಿಗಳನ್ನು ಎಗ್ಗಿಲ್ಲದೇ ಮಾಡಲಾಗುತ್ತಿದೆ. ವಿಶ್ವ ಪತ್ರಿಕಾ ದಿನಾಚಣೆಯ ಸಮಯದಲ್ಲೇ `ರಿಪೋರ್ಟರ್ಸ್ ವಿದೌಟ್ ಬಾರ್ಡ್‍ರ್ಸ್’ ಸಂಸ್ಥೆಯ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ವಿವಿಧ ರಾಷ್ಟ್ರಗಳ ಸ್ಥಾನಮಾನ ಹೇಗಿದೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 2018ರಲ್ಲಿ 11ನೇ ಸ್ಥಾನದಲ್ಲಿದ್ದ ಆಸ್ಟ್ರಿಯಾವು ಈಗ 16ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕುಸಿತ ಕಾಣಲಿದೆ ಎಂದು ಈಗಾಗಲೇ ತಜ್ಞರು ಹೇಳುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಭಾರತದ ಸ್ಥಾನಮಾನವೂ ಕುಸಿತದ ದಾರಿಯಲ್ಲೇ ಸಾಗಿದೆ. ಒಟ್ಟು 180 ರಾಷ್ಟ್ರಗಳ ಮೇಲೆ `ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆಯು ಅಧ್ಯಯನ ನಡೆಸುತ್ತಿದ್ದು ಅದರಲ್ಲಿ 2017ರಲ್ಲಿ ಭಾರತವು 136ನೇ ಸ್ಥಾನದಲ್ಲಿತ್ತು. 2018ಕ್ಕಾಗುವ ಎರಡು ಸ್ಥಾನಗಳ ಕುಸಿತವನ್ನು ಕಂಡು 138ಕ್ಕೆ ಇಳಿಯಿತು. ಈಗ 140ನೇ ಸ್ಥಾನದಲ್ಲಿದೆ.

ವಿಶ್ವ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಮತ್ತು ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿರುವ ಭಾರತವು ಪತ್ರಿಕಾ ಸ್ವಾತಂತ್ರ್ಯದ ಪಟ್ಟಿಯಲ್ಲಿ 140ನೇ ಸ್ಥಾನದಲ್ಲಿರುವುದು ಖಂಡಿತ ಅವಮಾನಕರ ಸಂಗತಿ. ಇದಕ್ಕೆ ಕಾರಣವೇನು ಅನ್ನುವುದನ್ನು ಅವಲೋಕಿಸಬೇಕಾದ ತುರ್ತು ಅಗತ್ಯ ಈಗಿನದು. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ನೆಲೆಸಿರುವ ವಾತಾವರಣವನ್ನು ಗಂಭೀರವಾಗಿ ಅವಲೋಕಿಸಿದರೆ ಇದಕ್ಕೆ ಒಂದು ಹಂತದವರೆಗೆ ಉತ್ತರ ಲಭ್ಯವಾಗಬಹುದು. ಆಡಳಿತ ಪಕ್ಷವಾದ ಬಿಜೆಪಿಯ ರಾಜಕಾರಣಿಗಳು ಮತ್ತು ಬೆಂಬಲಿಗರ ಭಾಷೆ ಈ ಐದು ವರ್ಷಗಳಲ್ಲಿ ಎಷ್ಟು ಕಳಪೆ ದರ್ಜೆಯನ್ನು ಹೊಂದಿವೆ ಎಂದರೆ, ಭಾರತದ ಭವ್ಯ ಸಂಸ್ಕೃತಿಗೆ ಯಾವ ಮಟ್ಟದಲ್ಲೂ ಅದು ತಾಳೆಯಾಗಲಾರದು. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರೆ ಪ್ರತಿಯಾಗಿ ಬೈಗುಳು ನಿಂದನೆ, ಅಮಾನ, ಬೆದರಿಕೆಗಳೇ ಸಿಗುತ್ತವೆ. ಬಿಜೆಪಿಗೆ ಸಂಬಂಧಿಸಿ ಮಾಧ್ಯಮಗಳು ಯಾವ ತನಿಖಾ ಬರಹವನ್ನೂ ಬರೆಯಬಾರದು ಎಂಬ ರೀತಿಯ ವರ್ತನೆಯೊಂದು ಬಿಜೆಪಿ ಮತ್ತು ಅದರ ಬೆಂಬಲಿಗರಲ್ಲಿದೆ. ಅಮಿತ್ ಶಾ ಅವರ ಮಗನಿಗೆ ಸಂಬಂಧಿಸಿದ ತನಿಖಾ ವರದಿ, ರಕ್ಷಣಾ ಸಲಹೆಗಾರ ಅಜಿತ್ ಧೋವಲ್‍ರ ಮಕ್ಕಳಿಗೆ ಸಂಬಂಧಿಸಿದ ವರದಿ ಮತ್ತು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಬಿಜೆಪಿ ಮತ್ತು ಅದರ ಬೆಂಬಲಿಗ ಗುಂಪು ಹೇಗೆ ಸ್ವೀಕರಿಸಿದೆ ಎಂಬುದು ಈಗ ಜಗಜ್ಜಾಹೀರು. ಬೋಫೋರ್ಸ್ ಅವ್ಯವಹಾರವನ್ನು ಭಾರೀ ಉತ್ಸಾಹದಿಂದ ದೇಶದೆಲ್ಲೆಡೆ ಹಂಚಿದ್ದ ಪಕ್ಷವೇ ರಫೇಲ್ ಮತ್ತಿತರ ವ್ಯವಹಾರಗಳ ಬಗ್ಗೆ ವರದಿಯನ್ನಾಗಲಿ, ಟೀಕೆಯನ್ನಾಗಲಿ ಸಹಿಸುವುದಿಲ್ಲ ಎಂದರೆ ಏನರ್ಥ? ಮುಸ್ಲಿಮರ ಬಗೆಗೆ ಬಿಜೆಪಿ ನಾಯಕರು ಮತ್ತು ಅದರ ಬೆಂಬಲಿಗರು ಆಗಾಗ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನೂ ಇಲ್ಲಿ ಪರಿಶೀಲನೆಗೊಡ್ಡಬಹುದು. ಮುಸ್ಲಿಮ್ ನಿಂದನೆಯನ್ನೇ ರಾಜಕೀಯ ರಣ ತಂತ್ರವಾಗಿ ಬಿಜೆಪಿ ಸ್ವೀಕರಿಸಿಕೊಂಡಿದೆ ಅನ್ನುವುದನ್ನು ಅಚ್ಚರಿಯ ರೀತಿಯಲ್ಲಿ ಇವತ್ತು ಹೇಳಬೇಕಿಲ್ಲ. ಈ ದೇಶದ ಪ್ರತಿ ಪ್ರಜೆಗೂ ಅದು ಗೊತ್ತಿದೆ. ಮುಸ್ಲಿಮ್ ವಿರೋಧಿ ಭಾಷಣ ಮಾಡಿದವರು, ಮಸೀದಿ ಒಡೆದ ಆರೋಪ ಇರುವವರು, ಮುಸ್ಲಿಮರ ಮತವೇ ಬೇಕಾಗಿಲ್ಲ ಅನ್ನುವವರು… ಹೀಗೆ ವಿಭಿನ್ನ ದಾಟಿಯಲ್ಲಿ ಮುಸ್ಲಿಮ್ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸುವವರನ್ನೇ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಅದೇವೇಳೆ, ಹಿಂದೂ ಧರ್ಮವನ್ನು ಅವಮಾನಿಸುವ, ಹಿಂದೂ ಧರ್ಮದ ಆಚರಣೆಗಳನ್ನು ಪ್ರಶ್ನಿಸುವ ಮತ್ತು ಮಂದಿರದಂಥ ಆರಾಧನಾಲಯಗಳನ್ನು ಒಡೆದ ಆರೋಪ ಇರುವವರಿಗೆ ಅದು ಟಿಕೆಟನ್ನು ನೀಡುತ್ತಲೂ ಇಲ್ಲ. ತನ್ನ ವಿರುದ್ಧದ ಟೀಕೆಯನ್ನು ಸಹಿಸಲು ಸಿದ್ಧರಿರದ ಮತ್ತು ಅಲ್ಪಸಂಖ್ಯಾತರನ್ನು ಟೀಕಿಸಿದರೆ ಪಾರಿತೋಷಕ ಕೊಡುವ ನೀತಿಯೊಂದನ್ನು ಬಿಜೆಪಿ ಅಳವಡಿಸಿಕೊಂಡಿದೆ ಅನ್ನುವುದಕ್ಕೆ ಇವೂ ಸಹಿತ ನೂರಾರು ಆಧಾರಗಳು ಇವೆ. ಉಗ್ರ ಬಲಪಂಥೀಯ ವಿಚಾರಧಾರೆ ಎಂದರೆ ಹೀಗೆಯೇ. ಅದು ಟೀಕೆಯನ್ನು ಸಹಿಸುವುದಿಲ್ಲ. ಬಹುಸಂಖ್ಯಾತ ಪಕ್ಷಪಾತಿಯಾಗಿ ಮತ್ತು ಅಲ್ಪಸಂಖ್ಯಾತ ವಿರೋಧಿಯಾಗಿ ಅದು ಗುರುತಿಸಿಕೊಳ್ಳುತ್ತದೆ. ಟೀಕೆಗೆ ಪ್ರತಿಯಾಗಿ ನಿಂದನೆ ಮತ್ತು ಅಪಾಹಾಸ್ಯವನ್ನು ನೀಡುತ್ತದೆ. ವಿರೋಧಿಗಳನ್ನು ಸಂದರ್ಭಾನುಸಾರ ಉಗ್ರವಾದಿಯೆಂದೋ, ಪರಾವಲಂಬಿಯೆಂದೋ, ನುಸುಳುಕೋರರು, ವಲಸೆಗಾರರೆಂದೋ ಕರೆದು, ಜರೆದು ತನ್ನ ಪರವಾದ ರಾಜಕೀಯ ವಾತಾವರಣವನ್ನು ನಿರ್ಮಿಸಿಕೊಳ್ಳ ಬಯಸುತ್ತದೆ. ಕಳೆದ ಐದು ವರ್ಷಗಳಲ್ಲಿ ಈ ದೇಶದ ವಿವಿಧ ಪತ್ರಿಕೆಗಳ ಪುಟಗಳಲ್ಲಿ ಪ್ರಕಟವಾದ ಸುದ್ದಿ-ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಚರ್ಚೆಗಳು ಇದಕ್ಕೆ ಉತ್ತಮ ಪುರಾವೆಯಾಗಿದೆ.

ಆಸ್ಟ್ರೀಯಾದ ಟಿವಿ ನಿರೂಪಕ ಅರ್ಮಿನ್ ವೋಲ್ಫ್ ಇದರ ಇತ್ತೀಚಿನ ಉದಾಹರಣೆ ಅಷ್ಟೇ. ಭಾರತದಲ್ಲಂತೂ ವಿಲಿಮಿಸ್ಕಿಯಂಥ ರಾಜಕಾರಣಿಗಳು ಮತ್ತು ಪ್ರತಿಭಟನಾ ನಿರತ ಅವರ ಬೆಂಬಲಿಗರಂಥವರು ಧಾರಾಳ ಇದ್ದಾರೆ.