ಉತ್ತರ ಕೊರಿಯದಿಂದ ಮಿಲಿಟರಿ ಶಕ್ತಿ ಪ್ರದರ್ಶನ: ಜಗತ್ತಿಗೆ ಸವಾಲಾದ ಅತ್ಯಾಧುನಿಕ ಬ್ಯಾಲಿಸ್ಟಿಕ್ ಮಿಸೈಲ್‍ಗಳು!

0
236

ಸನ್ಮಾರ್ಗ ವಾರ್ತೆ

ಸೋಲ್: ಸಮುದ್ರಾಂತರ ವಾಹಿನಿಗಳನ್ನು ಉಪಯೋಗಿಸಿ ಹಾರಿಸಬಹುದು ಎಂದು ಶಂಕಿಸಲಾದ ಅತ್ಯಾಧುನಿಕ ಬ್ಯಾಲಿಸ್ಟಿಕ್ ಮಿಸೈಲ್‍ಗಳನ್ನು ಉತ್ತರ ಕೊರಿಯ ಪ್ರದರ್ಶಿಸಿದ್ದು ಜಗತ್ತಿನ ಮುಂದೆ ಹೊಸ ಸವಾಲನ್ನು ಅದು ಒಡ್ಡಿದೆ. ಗುರುವಾರ ರಾತ್ರೆ ರಾಜಧಾನಿ ಪ್ಯೊಂಗ್ಯಾಂಗ್‍ನಲ್ಲಿ ನಡೆದ ಪರೇಡ್‍ನಲ್ಲಿ ಈ ಅಯುಧಗಳನ್ನು ಪ್ರದರ್ಶಿಸಲಾಗಿದೆ.

ಕೆಲವು ದಿನಗಳಿಂದ ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜೊಂಗ್ ಉನ್‍ರವರು ಭಾಗವಹಿಸಿದ್ದ ರಾಷ್ಟ್ರೀಯ ಸಮ್ಮೇಳನದ ಕೊನೆಯ ದಿನ ಆಯುಧ ಪ್ರದರ್ಶನ ನಡೆದಿದೆ. ಕಪ್ಪು ಕೋಟು ಟೋಪಿ ಧರಿಸಿದ ಕಿಮಗ ಜೊಂಗ್, ಕಿಮ್ ಸೂಂಗ್ ಚೌಕದಲ್ಲಿ ಪರೇಡನ್ನು ವೀಕ್ಷಿಸಿದ್ದಾರೆ.

ಭಾರೀ ಭದ್ರತೆಯಲ್ಲಿ ಪರೇಡ್ ನಗರದಲ್ಲಿ ನಡೆದಿದ್ದು ಮಿಸೈಲ್‍ಗಳು ಒಂದೊಂದೇ ಬೀದಿಯಲ್ಲಿ ಸಾಗಿದ್ದನ್ನು ವೀಕ್ಷಕರು ಆವೇಶದಿಂದ ನೋಡಿದ್ದಾರೆ. ಇದು ಉತ್ತರ ಕೊರಿಯ ಸೇನಾ ಶಕ್ತಿಯನ್ನು ಎತ್ತಿ ತೋರಿಸುವ ಪರೇಡ್ ಆಗಿತ್ತು. ಪುಕ್‍ಗುಕ್ಸೊಂಗ್-5 ಎಂದು ಹೊಸ ಬ್ಯಾಲಸ್ಟಿಕ್ ಮಿಸೈಲ್‍ಗೆ ಹೆಸರಿರಿಸಲಾಗಿದೆ. ಕಳೆದ ಅಕ್ಟೋಬರಿನಲ್ಲಿ ಪುಕ್‍ಗುಕ್ಸೊಂಗ್-4ನ್ನು ಪ್ರದರ್ಶಿಸಲಾಗಿತ್ತು.

ಹೊಸ ಮಿಸೈಲ್ ಹಿಂದಿನ ಮಿಸೈಲಿಗಿಂತ ದೂರ ಸಂಚರಿಸಬಲ್ಲದು. ಕ್ಯಾಲಿಫೋರ್ನಿಯದ ಜೇಮ್ಸ್ ಮಾರ್ಟನ್ ಸೆಂಟರ್ ಫಾರ್ ನಾನ್ ಪ್ರೊಲಿಫರೇಶನ್ ಸ್ಟಡೀಸ್‍ನ ಮೈಕಲ್ ಡ್ಯುಟ್ಸ್‌ಮೆನ್ ಹೇಳಿದ್ದಾರೆ. ಹೆಚ್ಚು ಸಾಮರ್ಥ್ಯದ ರಾಕೆಟ್‍ಗಳು ಕೂಡ ಪ್ರದರ್ಶನದಲ್ಲಿತ್ತು. ದಕ್ಷಿಣ ಕೊರಿಯ ಮಾತ್ರವಲ್ಲ ಜಪಾನ್ ಮೇಲೆ ದಾಳಿ ಮಾಡುವ ಶಕ್ತಿಯಿರುವ ಆಯುಧ ಭಂಡಾರ ಉತ್ತರ ಕೊರಿಯದಲ್ಲಿದೆ ಎನ್ನಲಾಗಿದೆ. ಆದರೆ ಬಹಳ ಸಮಯದಿಂದ ಉತ್ತರ ಕೊರಿಯ ಹೇಳುತ್ತಿರುವ ಖಂಡಾಂತರ ಬ್ಯಾಲಿಸ್ಟಿಕ್ ಮಿಸೈಲ್‍ಗಳು ಪ್ರದರ್ಶನಕ್ಕೆ ಬಂದಿಲ್ಲ. ಇದಕ್ಕೆ ಅಮೆರಿಕದ ಮೇಲೆ ಅಣು ಆಯುಧ ವರ್ಷಿಸುವ ಶಕ್ತಿ ಇದೆ ಎಂದು ಉತ್ತರ ಕೊರಿಯ ಹೇಳುತ್ತಾ ಬಂದಿದೆ. ಉತ್ತರ ಕೊರಿಯದ ಆರ್ಥಿಕತೆ ಭಾರೀ ಬಿಕ್ಕಟ್ಟಿನಲ್ಲಿದೆ ಎಂದು ಅಧ್ಯಕ್ಷ ಕಿಮ್ ಜೊಂಗ್ ಉನ್ ರಾಷ್ಟ್ರೀಯ ಸಮ್ಮೇಳನದಲ್ಲಿ ಬಹಿರಂಗವಾಗಿ ಸಮ್ಮತಿಸಿದ್ದರು.

ಈ ಪರೇಡ್ ಅಮೆರಿಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬರುವ ಜೊ ಬೈಡನ್‍ರಿಗೆ ಶಕ್ತ ಸಂದೇಶ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಉತ್ತರ ಕೊರಿಯದ ಹತ್ತಿರದ ದೇಶಗಳಾದ ದಕ್ಷಿಣ ಕೊರಿಯ, ಜಪಾನ್‍ನಲ್ಲಿ ಅಮೆರಿಕದ ಸೈನಿಕ ನೆಲೆಗಳಿವೆ.