ಆರೋಪಿಗಳ ಖುಲಾಸೆ: ‘ಹಾಗಿದ್ದರೆ ನನ್ನ ತಂದೆಯನ್ನು ಕೊಂದವರು ಯಾರು?’- ಪೆಹ್ಲೂಖಾನ್‍ ಪುತ್ರನ ಪ್ರಶ್ನೆ

0
1562

ಸನ್ಮಾರ್ಗ ವಾರ್ತೆ

ನೂಹ್(ಹರಿಯಾಣ, ಆ.16: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ತಂದೆ ಪೆಹ್ಲೂಖಾನ್‍ರನ್ನು ಗೋರಕ್ಷಕ ಗೂಂಡಾಗಳು ಹೊಡೆದು ಕೊಂದದ್ದನ್ನು ಪ್ರತ್ಯಕ್ಷ ಕಂಡಿದ್ದೇನೆ. 2017 ಎಪ್ರಿಲ್ ಒಂದರಂದು ಘಟನೆ ನಡೆದಿದೆ. ಎರಡು ದಿವಸಗಳ ಬಳಿಕ ಆಸ್ಪತ್ರೆಯಲ್ಲಿ ತಂದೆ ಮೃತಪಟ್ಟರು. ಜನರ ಗುಂಪಿಗೆ ಬಲಿಯಾದ ಪೆಹ್ಲೂಖಾನ್‍ನ ಹಿರಿಯ ಮಗ 28 ವರ್ಷದ ಇರ್ಷಾದ್ ಎರಡು ವರ್ಷಗಳ ಬಳಿಕವೂ ಅಸಹಾಯಕನಾಗಿ ‘ನನ್ನ ತಂದೆಯನ್ನು ಕೊಂದದ್ದು ಯಾರು?’ ಎಂದು ಹತಾಶೆಯಿಂದ ಪ್ರಶ್ನಿಸುತ್ತಿದ್ದಾರೆ. ಪ್ರಕರಣದ ಎಲ್ಲ ಆರೋಪಿಗಳನ್ನು ಸಂಶಯದ ಬಲದಲ್ಲಿ ಕೋರ್ಟು ಬಿಡುಗಡೆಗೊಳಿಸಿದೆ. ಹಾಗಿದ್ದರೆ ನನ್ನ ತಂದೆಯನ್ನು ಕೊಂದದ್ದು ಯಾರು ಎಂದು ಇರ್ಷಾದ್ ಖಾನ್ ಅಲವತ್ತುಕೊಂಡರು.

ಅಂದು ನೂರಾರು ಮಂದಿ ನಮ್ಮನ್ನು ಸುತ್ತುವರಿದರು. ದನಗಳನ್ನು ಕಸಾಯಿಖಾನೆಗೆ ಕೊಂಡು ಹೋಗುತ್ತಿಲ್ಲ ಎಂದು ಹೇಳಿ ಬೇಡಿಕೊಂಡರು ಅವರೆಲ್ಲ ಕ್ರೂರವಾಗಿ ಹೊಡೆದರು. ಅದನ್ನು ವೀಡಿಯೊದಲ್ಲಿ ಚಿತ್ರೀಕರಿಸಿದರು. ಆದರೆ ಕೋರ್ಟಿನ ತೀರ್ಪಿನಲ್ಲಿ ಯಾರೂ ಆರೋಪಿಗಳಲ್ಲ. ಈ ತೀರ್ಪು ಗರಬಡಿದು ನಿಲ್ಲುವಂತೆ ಮಾಡಿತು. ಹಾಗಿದ್ದರೆ ತಂದೆ ಸಹಜವಾಗಿ ಮೃತಪಟ್ಟರೇ? ಎಂದು ಇರ್ಷಾದ್ ಪ್ರಶ್ನಿಸಿದ್ದಾನೆ.

ಪೊಲೀಸರು ಬಹಳಷ್ಟು ವಿಷಯಗಳಿಗೆ ಉತ್ತರ ನೀಡಬೇಕಿದೆ ಪೆಹ್ಲೂಖಾನ್‍ರ ಹದಿಮೂರು ವರ್ಷದ ಪುತ್ರಿ ಹುನಿಜಾ ಹೇಳಿದ್ದಾಳೆ. ಮೇವಾತ್‍ನ ಹಾಲುತ್ಪಾದಕ ರೈತ ಪೆಹ್ಲೂಖಾನ್(55)ರನ್ನು ಹೊಡೆದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾದ ಆರು ಮಂದಿಯನ್ನು ರಾಜಸ್ಥಾನದ ಅಲ್ವಾರ್ ಅಡಿಶನಲ್ ಜಿಲ್ಲಾ ಕೋರ್ಟು ಖುಲಾಸೆ ಗೊಳಿಸಿದೆ. ಸಂಶಯದ ಅನುಕೂಲ ನೀಡಿ ಕೋರ್ಟು ಬಿಡುಗಡೆಗೊಳಿಸಿತು.

ಪೆಹ್ಲೂಖಾನ್‍ರನ್ನು ಜನರ ಗುಂಪು ಹೊಡೆಯುತ್ತಿರುವ ವೀಡಿಯೊವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟು ಹೇಳಿದೆ. ಪ್ರಕರಣಕ್ಕೆ ಪೆಹ್ಲೂಖಾನ್‍ರ ಇಬ್ಬರು ಪುತ್ರ ಸಹಿತ ನಲ್ವತ್ತು ಸಾಕ್ಷಿಗಳಿದ್ದರು. ಆದರೂ ಕೋರ್ಟು ಬಿಡುಗಡೆಗೊಳಿಸಿ ತೀರ್ಪು ನೀಡಿತು.ಆದರೂ ಕಾನೂನು ವ್ಯವಸ್ಥೆಯಲ್ಲಿ ನಮಗೆ ಈಗಲೂ ವಿಶ್ವಾಸ ಇದೆ ಎಂದು ಗುಡ್‍ಗಾಂವ್‍ನಿಂದ ಎಪ್ಪತ್ತು ಕಿಲೋಮೀಟರ್ ದೂರದ ಜೈಸಿಂಗ್‍ಪುರಿಯ ತಮ್ಮ ಮನೆಯಲ್ಲಿ ಇರ್ಷಾದ್ ಮತ್ತು ಸಹೋದರರು ಹೇಳಿದರು.