ಟ್ರಂಪ್ ವಾಗ್ದಂಡನೆ ಸೆನೆಟ್‍ಗೆ; ಕಾಂಗ್ರೆಸ್‍ನಲ್ಲಿ ಅಂಗೀಕಾರ

0
250

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಜ. 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಗೆ ವಾಗ್ದಂಡನೆ ವಿಧಿಸುವ ಜನಪ್ರತಿನಿಧಿ ಸಭೆಯ ನಿರ್ಧಾರವು ಮೇಲ್ಮನೆ ಸನೆಟ್‍ಗೆ ಹಸ್ತಾಂತರಿಸಲು ಮತದಾನ ನಡೆಸಲಾಗಿದ್ದು 228 ಮಂದಿ ಬೆಂಬಲಿಸಿದ್ದಾರೆ ಮತ್ತು 193 ಮಂದಿ ವಿರೋಧಿಸಿದ್ದಾರೆ. ಒಟ್ಟು 435 ಜನಪ್ರತಿನಿಧಿಗಳು ಕಾಂಗ್ರೆಸ್‍ನಲ್ಲಿದ್ದಾರೆ. ಮಂಗಳವಾರದಿಂದ ಸೆನೆಟ್‍ನಲ್ಲಿ ವಾಗ್ದಂಡನೆ ಪ್ರಸ್ತಾವ ಚರ್ಚೆಗೆ ಬರಲಿದೆ.

ಇಂದು ಪ್ರಸ್ತಾವವನ್ನು ಅಧಿಕೃತವಾಗಿ ಸೆನೆಟ್‍ಗೆ ಕಳುಹಿಸುವ ಪ್ರಕ್ರಿಯೆಗಳು ನಡೆದಿವೆ. ಅಧಿಕಾರ ದುರುಪಯೋಗ, ಕಾಂಗ್ರೆಸ್ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಹೊರಿಸಿ ಕಳೆದ ತಿಂಗಳು ಟ್ರಂಪ್‍ರನ್ನು ಜನಪ್ರತಿನಿಧಿ ಸಭೆ ವಾಗ್ದಂಡನೆ ವಿಧಿಸಿತ್ತು. ಸೆನೆಟ್‍ನಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ಜಸ್ಟಿಸ್ ಅಧ್ಯಕ್ಷತೆಯಲ್ಲಿ ವಾಗ್ದಂಡನೆ ಕ್ರಮಗಳು ಆರಂಭವಾಗಲಿದೆ. ಸೆನೆಟ್ ಸದಸ್ಯರು ಮತ್ತು ಜ್ಯೂರಿಗಳು ಆಯ್ಕೆಯಾದ ಪ್ರತಿನಿಧಿ ಸಭಾ ಸದಸ್ಯರು, ಪ್ರಾಸಿಕ್ಯೂಟರ್ ಗಳು ವಾಗ್ದಂಡನೆ ಪ್ರಕ್ರಿಯೆಯ ವೇಳೆ ಇರಲಿದ್ದಾರೆ. ಮೂರರಲ್ಲಿ ಎರಡರಷ್ಟು ಬಹುಮತದಿಂದ ಟ್ರಂಪ್‍ರನ್ನು ತಪ್ಪಿತಸ್ತರೆಂದು ಸೆನೆಟ್ ಘೋಷಿಸಿದರೆ ಅವರು ಅಧ್ಯಕ್ಷ ಸ್ಥಾನ ಕಳಕೊಳ್ಳುವರು.

ರಿಪಬ್ಲಿಕನ್ ಪಾರ್ಟಿಗೆ ಸೆನೆಟ್‍ನಲ್ಲಿ ಬಹುಮತ ಇದೆ. ನೂರು ಮಂದಿಯ ಸೆನೆಟ್‍ನಲ್ಲಿ 67 ಮಂದಿ ಬೆಂಬಲಿಸಿದರೆ ಮಾತ್ರ ಪ್ರಸ್ತಾವ ಪಾಸು ಆಗಲಿದೆ. ಆದರೆ ಡೆಮಕ್ರಾಟಿಕ್‍ಗಳಿಗೆ ಕೇವಲ 47 ಮಂದಿ ಸದಸ್ಯರಿದ್ದಾರೆ. ಆದ್ದರಿಂದ ಅಲ್ಲಿ ಪ್ರಸ್ತಾವ ಪಾಸು ಆಗುವ ಸಾಧ್ಯತೆಗಳಿಲ್ಲ. 2020ರ ಅಧ್ಯಕ್ಷ ಚುನಾವಣೆಯ ಪ್ರಧಾನ ಎದುರು ಸ್ಪರ್ಧಿ ಮಾಜಿ ಉಪಾಧ್ಯಕ್ಷ ಜೊ ಬೈಡನ್ ಮತ್ತು ಅವರ ಮಗನ ವಿರುದ್ಧ ತನಿಖೆ ಘೋಷಿಸಲು ಸರಕಾರದ ಪ್ರಭಾವ ಬಳಸಿ ಯುಕ್ರೇನ್ ಸರಕಾರದ ಮೇಲೆ ಒತ್ತಡ ಹಾಕಿದ ಆರೋಪ ಟ್ರಂಪ್ ಮೇಲಿದ್ದು ವಾಗ್ದಂಡನೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಆರಂಭಿಸಿತ್ತು. ಕಾಂಗ್ರೆಸ್ ಇಂಟಲಿಜೆನ್ಸ್ ಸಮಿತಿ ಜ್ಯುಡಿಶಿಯರಿ ಸಮಿತಿಯ ವಾರಗಳ ಪ್ರಕ್ರಿಯೆ ಬಳಿಕ ಪ್ರಸ್ತಾವ ಕಾಂಗ್ರೆಸ್‍ನಲ್ಲಿ ಪಾಸಾಗಿತ್ತು.