ತ್ರಿವಳಿ ತಲಾಕ್ ಬಿಲ್: ಕೇಂದ್ರ‌ ಸರಕಾರದ ಉದ್ದೇಶವನ್ನು ಪ್ರಶ್ನಿಸಿದ ಜಮಾಅತೆ ಇಸ್ಲಾಮೀ ಹಿಂದ್

0
675

ನವದೆಹಲಿ: ಕೇಂದ್ರ ಸರಕಾರವು ತ್ರಿವಳಿ ತಲಾಕ್ ಮಸೂದೆಯನ್ನು ಜಾರಿಗೊಳಿಸಲು ಹೊರಟಿರುವುದರ ಹಿಂದಿನ ಉದ್ದೇಶವನ್ನು ಜಮಾಅತೆ ಇಸ್ಲಾಮೀ ಹಿಂದ್ ಪ್ರಶ್ನಿಸಿದೆ.

ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರ ಅಧ್ಯಕ್ಷರಾದ ಮೌಲಾನ ಜಲಾಲುದ್ದೀನ್ ಉಮರಿಯವರು “ಕೇಂದ್ರ ಸರಕಾರವು ತ್ರಿವಳಿ ತಲಾಕ್ ಬಿಲ್ ಗೆ ಸಂಬಂಧಿಸಿ ಮುಸ್ಲಿಮ್ ಸಮುದಾಯದ ಪಂಡಿತರ, ಧಾರ್ಮಿಕ ನೇತಾರರ, ಶರೀಅತ್ ತಜ್ಞರ, ಮುಸ್ಲಿಮ್ ಧಾರ್ಮಿಕ ಸಂಘಟನೆಗಳ, ಅಥವಾ ಮುಸ್ಲಿಮ್ ಮಹಿಳಾ ಸಂಘಟನೆಗಳ ಸದಸ್ಯರೊಂದಿಗಾಗಲಿ ಇದಲ್ಲದೇ ವಿರೋಧ ಪಕ್ಷದವರೊಂದಿಗಾಗಲಿ ಯಾವುದೇ ರೀತಿಯಲ್ಲಿ ಚರ್ಚಿಸುವುದನ್ನು ಇದುವರೆಗೂ ಅನಿವಾರ್ಯ ವೆಂದು ಪರಿಗಣಿಸದೇ ಇರುವುದು ನಿಜಕ್ಕೂ ಸೋಜಿಗದ ವಿಷಯ”ಎಂದು ನುಡಿದರು.

“ಕೇಂದ್ರ ಸರಕಾರವು ತ್ರಿವಳಿ ತಲಾಕ್ ಮಸೂದೆಯನ್ನು ಬೆಂಬತ್ತಿರುವುದರ ಹಿಂದಿರುವ ಉದ್ದೇಶವಾದರೂ ಏನು?”ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ರಾಜ್ಯ ಸಭೆಯಲ್ಲಿ ಈ ಮಸೂದೆಯ ವಿರುದ್ದ ವಿರೋಧ ಪಕ್ಷಗಳು ತಳೆದ ನಿಲುವನ್ನು ಅವರು ಸ್ವಾಗತಿಸಿದರಲ್ಲದೇ, ಸುಪ್ರೀಂ ಕೋರ್ಟ್ ತ್ರಿವಳಿ ತಲಾಕನ್ನು ಕಾನೂನು ಬಾಹಿರ ಗೊಳಿಸಿದ ನಂತರ ಕೇಂದ್ರ ಸರಕಾರವು ತ್ರಿವಳಿ ತಲಾಕ್ ಮಸೂದೆಯ ಬೆಂಬತ್ತಿ ಅದನ್ನು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸೇರಿಸಲು ಹೊರಟಿರುವುದು ನಿಜಕ್ಕೂ ರಾಜಕೀಯ ಹಿತಾಸಕ್ತಿ ಪ್ರೇರಿತ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಅಸ್ಸಾಂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮಾತನಾಡಿದ ಜೆ.ಐ.ಹಿಂದ್ ನ ಉಪ ರಾಷ್ಟ್ರಾಧ್ಯಕ್ಷರಾದ ನುಸ್ರತ್ ಅಲಿಯವರು ಮಾತನಾಡುತ್ತಾ, “ನೆರಯ ದೇಶಗಳ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಪೌರತ್ವ ನೀಡಲು ಹೊರಟಿರುವ ಎಮ್.ಹೆಚ್. ಎ ಹೊರಿಡಿಸಿರುವ ಪೌರತ್ವ ಕಾಯ್ದೆಯ ಪ್ರಕಟಣೆಯನ್ನು ನಾವು ನಿರಾಕರಿಸುತ್ತೇವೆ. ಸಾಂವಿಧಾನಾತ್ಮಕವಾಗಿ ಈ ನಿಲುವುಗಳು ತಾರತಮ್ಯ ಪೂರ್ಣವಾದವುಗಳು” ಎಂದು ಅವರು ನುಡಿದರು. ಪತ್ರಿಕಾ ಗೋಷ್ಟಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ಪ್ರಧಾನ ಕಾರ್ಯದರ್ಶಿಯಾದ ಡಾ|ಸಲೀಮ್ ಇಂಜಿನೀಯರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.