ತ್ರಿವಳಿ ತಲಾಕ್ ಮಸೂದೆ ಎನ್ ಡಿ ಎ ಮೈತ್ರಿಕೂಟದ ಭಾಗವಲ್ಲ, ಸಂಸತ್ತಿನಲ್ಲಿ ನಾವು ಬೆಂಬಲಿಸಲ್ಲ: ಬಿಜೆಪಿಗೆ ಮೈತ್ರಿಪಕ್ಷದಿಂದ ತಿರುಗೇಟು

0
301

ಹೊಸದಿಲ್ಲಿ, ಜೂ.14: ಜೆಡಿಯು ತ್ರಿವಳಿ ತಲಾಕ್ ಮಸೂದೆಯ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು ಸಂಸತ್ತಿನಲ್ಲಿ ಮಂಡಿಸಲಾಗುವ ಹೊಸ ಮಸೂದೆಯನ್ನು ಜೆಡಿಯು ವಿರೋಧಿಸಲಿದೆ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಂ ರಜಕ್ ತಿಳಿಸಿದ್ದಾರೆ. ಮೋದಿ ಸರಕಾರ ಮುಂದಿನ ಸಂಸತ್ ಅಧಿವೇಶನದಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡಿಸಲಿದೆ. ಈ ಕುರಿತು ಪ್ರಧಾನಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಿರ್ಧರಿಸಿತ್ತು. ರಾಜ್ಯಸಭೆಯಲ್ಲಿಯೂ ಮಸೂದೆ ಈ ಸಲ ಪಾಸಾಗುವ ನಿರೀಕ್ಷೆ ಸರಕಾರದ್ದಾಗಿದೆ.

ತ್ರಿವಳಿ ತಲಾಕ್ ಎನ್‍ಡಿಎಗೆ ಸಂಬಂಧಿಸಿದ್ದಲ್ಲ. ತ್ರಿವಳಿ ತಲಾಕ್ ವಿಷಯದಲ್ಲಿ ಈ ಹಿಂದೆಯೂ ಜೆಡಿಯು ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಇದು ಸಮಾಜಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಇದನ್ನು ಸಮಾಜವೇ ನಿರ್ಧರಿಸಬೇಕು. ಇದನ್ನು ಸಂಸತ್ತಿನಲ್ಲಿ ತೀರ್ಮಾನಿಸುವಂತಿಲ್ಲ ಎಂದು ಬಿಹಾರದ ಸಚಿವರೂ ಆಗಿರುವ ಶ್ಯಾಂ ರಜಕ್ ಹೇಳಿದ್ದಾರೆ. ಕಳೆದ ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಪಾಸಾಗಿತ್ತು. ಆದರೆ ರಾಜ್ಯಸಭೆಯಲ್ಲಿ ತಿರಸ್ಕೃತಗೊಂಡಿತ್ತು.