ತ್ರಿವಳಿ ತಲಾಕ್ ಮತ್ತು ಶಬರಿಮಲೆ: ಬಿಜೆಪಿಯ ಎರಡು ಮುಖ

0
824

ಸಂಪಾದಕೀಯ

ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಕರೆದು ಅದರ ಮೇಲೆ ನಿಷೇಧ ಹೇರಿದ ಸುಪ್ರೀಮ್ ಕೋರ್ಟು, ಅದೇ ರೀತಿಯಲ್ಲಿ ಮತ್ತು ಅಷ್ಟೇ ಬಲಯುತವಾದ ಪದಗಳಲ್ಲಿ ಶಬರಿಮಲೆಯಲ್ಲಿರುವ ಆಚರಣೆಯನ್ನು ಪ್ರಶ್ನಿಸಿತು. 50 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸದಂತೆ ಹೇರಲಾಗಿದ್ದ ಶತಮಾನಗಳಷ್ಟು ಹಳೆಯದಾದ ನಿಷೇಧವನ್ನು ಅದು ರದ್ದುಪಡಿಸಿತಲ್ಲದೇ ಎಲ್ಲ ವಯೋಮಾನದ ಮಹಿಳೆಯರಿಗೂ ಅದು ದೇಗುಲವನ್ನು ಮುಕ್ತವಾಗಿರಿಸಿತು. ತಮಾಷೆ ಏನೆಂದರೆ, ಈ ಎರಡೂ ತೀರ್ಪುಗಳ ವಿಷಯದಲ್ಲಿ ಬಿಜೆಪಿ ತಳೆದಿರುವ ನಿಲುವು.

ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಜಯ ಘೋಷದೊಂದಿಗೆ ಸ್ವಾಗತಿಸಿತ್ತು. ತೀರ್ಪು ಬಂದ ಮರುಕ್ಷಣವೇ ಅದು ತಲಾಕ್ ಕಾನೂನನ್ನು (ಮುಸ್ಲಿಮ್ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಕಾಯ್ದೆ 2017) ರಚಿಸಿತು. ಈ ವಿಷಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಕೋರುವಷ್ಟು ವ್ಯವಧಾನವೂ ಅದಕ್ಕಿರಲಿಲ್ಲ. ಅವಸರವಸರವಾಗಿಯೇ ರಚಿಸಲಾದ ಕಾನೂನನ್ನು ಅವಸರವಸರವಾಗಿಯೇ ಲೋಕಸಭೆಯಲ್ಲಿ ಮಂಡಿಸಿತು. ಪಾಸೂ ಮಾಡಿಸಿಕೊಂಡಿತು. ‘ತ್ರಿವಳಿ ತಲಾಕ್ ಹೇಳಿದ ಪುರುಷನನ್ನು ಮೂರು ವರ್ಷಗಳ ಕಾಲ ಜಾಮೀನಿಲ್ಲದೆ ಜೈಲಲ್ಲಿಡಲು ಅವಕಾಶ ಇರುವುದೂ’ ಸೇರಿ ಪ್ರಸ್ತಾವಿತ ಕಾನೂನಿನಲ್ಲಿರುವ ದೋಷಗಳ ಬಗ್ಗೆ ಪ್ರತಿಪಕ್ಷಗಳೂ ಸೇರಿದಂತೆ ದೇಶದಾದ್ಯಂತ ಅನೇಕಾರು ಸಂಘಟನೆಗಳು, ತಜ್ಞರು ಮತ್ತು ಮುಸ್ಲಿಮ್ ಮಹಿಳೆಯರೂ ಇದೇ ಸಂದರ್ಭದಲ್ಲಿ ಪ್ರಶ್ನೆಗಳನ್ನೆತ್ತಿದ್ದರು. ದೇಶದ ಅನೇಕಾರು ಕಡೆ ಮುಸ್ಲಿಮ್ ಮಹಿಳೆಯರ ನೇತೃತ್ವದಲ್ಲಿ ಪ್ರಸ್ತಾವಿತ ಕಾನೂನಿನ ವಿರುದ್ಧ ಪ್ರತಿಭಟನೆಗಳೂ ನಡೆದುವು. ಆದರೆ

ಬಿಜೆಪಿ ಈ ಎಲ್ಲ ಪ್ರತಿಕ್ರಿಯೆಗಳನ್ನು ಸಾರಾಸಗಟು ತಿರಸ್ಕರಿಸಿತು. ಮಾತ್ರವಲ್ಲ, ಅದೇ ದೋಷಪೂರ್ಣ ಮಸೂದೆಯನ್ನು ರಾಜ್ಯಸಭೆಯಲ್ಲೂ ಮಂಡಿಸಿತು. ರಾಜ್ಯಸಭೆ ಈ ಮಸೂದೆಯನ್ನು ಒಪ್ಪಿಕೊಳ್ಳದೇ ಹೋದಾಗ ಅಧ್ಯಾದೇಶದ ಮೂಲಕ ಬಲವಂತವಾಗಿ ಆ ಕಾನೂನನ್ನು ಜಾರಿಮಾಡಿತು. ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ‘ಮುಸ್ಲಿಮ್ ಮಹಿಳಾ ವಿಮೋಚಕ’ ಎಂದು ಘೋಷಿಸಿಕೊಂಡರು. ಕಾಂಗ್ರೆಸನ್ನು ‘ಮುಸ್ಲಿಮ್ ಪುರುಷರ ಪಕ್ಷ’ ಎಂದು ಲೇವಡಿ ಮಾಡಿದರು. ತ್ರಿವಳಿ ತಲಾಕ್ ಕಾಯ್ದೆಯನ್ನು ಬಿಜೆಪಿಯು ತನ್ನ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಂಡಿತು. ಇದೇ ಬಿಜೆಪಿ ಇವತ್ತು ಕೇರಳದಲ್ಲಿ ಬೀದಿಗಿಳಿದಿದೆ. ಬೀದಿಗಿಳಿಯುವಂತೆ ಜನರನ್ನು ಪ್ರಚೋದಿಸುತ್ತಿದೆ. ಸುಪ್ರೀಮ್ ಕೋರ್ಟ್‍ನ ಶಬರಿಮಲೆ ತೀರ್ಪಿನ ವಿರುದ್ಧ ಅಧ್ಯಾದೇಶವನ್ನು ತನ್ನಿ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. 50 ವರ್ಷಕ್ಕಿಂತ ಕೆಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಅವರು ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸದ ಭಾಗ ಎಂದು ಕರೆದಿದ್ದಾರೆ. ಅಕ್ಟೋಬರ್ 7ರಂದು ಬಿಜೆಪಿಯ ಯುವ ಮೋರ್ಚಾವು ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಮುಷ್ಕರಕ್ಕೆ ಕರೆಕೊಟ್ಟಿತ್ತು. ಸುಪ್ರೀಮ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರುವ ತಿರುವಾಂಕೂರು ದೇವಸ್ಯಂ ಬೋರ್ಡ್‍ನ ನಿಲುವನ್ನು ಖಂಡಿಸಿ ಬೋರ್ಡ್‍ನ ಅಧ್ಯಕ್ಷ ಪದ್ಮಕುಮಾರ್ ರ ಮನೆಗೆ ಯುವಮೋರ್ಚಾವು ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಯುವಮೋರ್ಚಾದ ಅಧ್ಯಕ್ಷ ಪ್ರಕಾಶ್ ಬಾಬು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಇದನ್ನೇ ನೆಪ ಮಾಡಿಕೊಂಡ ಯುವಮೋರ್ಚಾ ಮುಷ್ಕರಕ್ಕೆ ಕರೆಕೊಟ್ಟಿತ್ತು. ಬಿಜೆಪಿಯ ಮಹಿಳಾ ಘಟಕವಾದ ಮಹಿಳಾ ಮೋರ್ಚಾವು ರಾಜ್ಯದ ಬೇರೆ ಬೇರೆ ಕಡೆ ಪ್ರತಿಭಟನೆ ನಡೆಸುತ್ತಿದೆ. ಸುಪ್ರೀರ್ಮ್ ಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು ಮತ್ತು ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮಹಿಳೆಯರಿಗಿರುವ ನಿರ್ಬಂಧವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿಯ ಬೇಡಿಕೆ. ಇದು ಏನು?

ಈ ದ್ವಂದ್ವವನ್ನು ಯಾವ ಹೆಸರಿನಿಂದ ಕರೆಯಬೇಕು? ಬೂಟಾಟಿಕೆ, ಇಬ್ಬಂದಿತನ, ಹಿಪಾಕ್ರಸಿ, ಮಹಿಳಾ ವಿರೋಧಿ, ಧರ್ಮ ವಿರೋಧಿ? ನಿಜವಾಗಿ,

ತ್ರಿವಳಿ ತಲಾಕ್ ಮತ್ತು ಶಬರಿಮಲೆ ತೀರ್ಪುಗಳು ಸರ್ವಾನುಮತದ್ದೇನೂ ಅಲ್ಲ. ತ್ರಿವಳಿ ತಲಾಕ್ ವಿವಾದವನ್ನು ಬಗೆಹರಿಸಲು ಸುಪ್ರೀಮ್ ಕೋರ್ಟು ಐವರು ನ್ಯಾಯಾಧೀಶರ ಪೀಠವನ್ನು ರಚಿಸಿತ್ತು. ಈ ಐವರಲ್ಲಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಇತರ ಮೂವರಿಗಿಂತ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಕರೆಯಲು ಇವರಿಬ್ಬರೂ ನಿರಾಕರಿಸಿದರೆ, ಉಳಿದ ಮೂವರು ಅಸಾಂವಿಧಾನಿಕವೆಂದು ಕರೆದರು. ಶಬರಿಮಲೆ ತೀರ್ಪೂ ಇದಕ್ಕಿಂತ ಭಿನ್ನವಲ್ಲ. ಈ ವಿವಾದವನ್ನು ಪರಿಶೀಲಿಸಲು ಐವರು ನ್ಯಾಯಾಧೀಶರ ಪೀಠವನ್ನು ರಚಿಸಲಾಗಿತ್ತು. ಮಹಿಳಾ ಪ್ರವೇಶಕ್ಕಿರುವ ನಿರ್ಬಂಧಕ್ಕೆ ನಾಲ್ಕು ಮಂದಿ ನ್ಯಾಯಾಧೀಶರು ಅಸಮ್ಮತಿ ಸೂಚಿಸಿದರೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಿರ್ಬಂಧವನ್ನು ಅಸಮಾನತೆ ಎಂಬುದಕ್ಕಿಂತ ಧಾರ್ಮಿಕ ಆಚರಣಾ ವಿಧಾನವಾಗಿ ಅವರು ವ್ಯಾಖ್ಯಾನಿಸಿದರು. ಆದ್ದರಿಂದ, ಈ ಎರಡೂ ತೀರ್ಪುಗಳ ಪರ ಮತ್ತು ವಿರುದ್ಧ ಅಭಿಪ್ರಾಯಗಳನ್ನು ಅಸಹಜವೆಂದೋ ಅಸೂಕ್ಷ್ಮವೆಂದೋ ಭಾವಿಸಬೇಕಿಲ್ಲ. ಆದರೆ, ಅದಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳಲ್ಲಿ ಪ್ರಾಮಾಣಿಕತೆ ಇರಬೇಕು ಅಷ್ಟೇ.

ತ್ರಿವಳಿ ತಲಾಕ್ ಮತ್ತು ಶಬರಿಮಲೆ ಎರಡೂ ಮಹಿಳೆಯರಿಗೆ ಸಂಬಂಧಿಸಿದ್ದು. ತ್ರಿವಳಿ ತಲಾಕ್‍ನಿಂದ ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ವಾದಿಸುವಂತೆಯೇ ಶಬರಿಮಲೆಯ ನಿರ್ಬಂಧದಿಂದ ಹಿಂದೂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದೂ ವಾದಿಸಬಹುದು ಅಥವಾ ಈ ಎರಡನ್ನೂ ಧರ್ಮಸೂಕ್ಷ್ಮ ವಿಷಯವಾಗಿ ಪರಿಗಣಿಸಬಹುದು. ಮಾತ್ರವಲ್ಲ, ಆಯಾ ಧರ್ಮಗಳು ಆಂತರಿಕವಾಗಿ ಇವನ್ನು ಬಗೆಹರಿಸಿಕೊಳ್ಳಲಿ ಎಂದೂ ಹೇಳಬಹುದು. ಆದರೆ, ಈ ವಿಷಯದಲ್ಲಿ ಬಿಜೆಪಿಯ ನಿಲುವು ಸೋಗಲಾಡಿತನದ್ದು, ಕೋಮು ಪಕ್ಷಪಾತಿತನದ್ದು. ಮುಸ್ಲಿಮ್ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ವಿಷಯದಲ್ಲಿ ಬಿಡುಬೀಸಾಗಿ ಮಾತಾಡುವ ಹಾಗೂ ಅವರ ಪಾಲಿನ ಮಸೀಹನಂತೆ ಫೋಸು ಕೊಡುವ ಇದೇ ಬಿಜೆಪಿ ಹಿಂದೂ ಮಹಿಳೆಯರಿಗೆ ಸಂಬಂಧಿಸಿ ಅಂಥದ್ದೇ ಪ್ರಶ್ನೆ ಎದುರಾದಾಗ ಹಿಂದೂ ಪುರುಷರ ಪಕ್ಷದಂತೆ ವರ್ತಿಸುತ್ತಿದೆ. ಧರ್ಮಸೂಕ್ಷ್ಮದ ಮಾತಾಡುತ್ತಿದೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಮುಸ್ಲಿಮ್ ಪುರುಷರನ್ನು 3 ವರ್ಷ ಜೈಲಿಗಟ್ಟುವುದಕ್ಕಾಗಿ ಅಧ್ಯಾದೇಶದ ಮೊರೆ ಹೋದ ಇದೇ ಪಕ್ಷವು ಶಬರಿಮಲೆಯಲ್ಲಿ ಮಹಿಳೆಗಿರುವ ನಿರ್ಬಂಧವನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕಾಗಿ ಅಧ್ಯಾದೇಶವನ್ನು ಹೊರಡಿಸುವಂತೆ ಒತ್ತಾಯಿಸುತ್ತಿದೆ. ಮುಸ್ಲಿಮ್ ಮಹಿಳೆಯರ ಬಗ್ಗೆ ಇಷ್ಟೊಂದು ಕಾಳಜಿ ಮತ್ತು ಮುತುವರ್ಜಿಯನ್ನು ತೋರುವ ಬಿಜೆಪಿಯು ಹಿಂದೂ ಮಹಿಳೆಯರ ಬಗ್ಗೆ ಯಾಕೆ ಹಿಮ್ಮುಖವಾಗಿ ಚಲಿಸುತ್ತಿದೆ? ಮುಸ್ಲಿಮ್ ಮಹಿಳೆಯರ ವಿಮೋಚನೆಯಂತೆಯೇ ಹಿಂದೂ ಮಹಿಳೆಯರ ವಿಮೋಚನೆಯೂ ಆಗಬೇಡವೇ? ಮಹಿಳೆಯರಿಗೆ ಸಂಬಂಧಿಸಿ ಬಿಜೆಪಿಯ ಈ ದ್ವಂದ್ವಕ್ಕೆ ಕಾರಣವೇನು?

ಮುಸ್ಲಿಮರನ್ನು ಹೇಗಾದರೂ ಮಾಡಿ ಸತಾಯಿಸುವುದು ಮತ್ತು ಅವರ ಆಚರಣಾ ಪದ್ಧತಿಯನ್ನು ನಾಲಾಯಕ್ಕು ಎಂದು ಬಿಂಬಿಸುವುದು ಅದರ ಏಕಮಾತ್ರ ಗುರಿಯೇ? ಆ ಕಾರಣದಿಂದಲೇ ಅದು ತ್ರಿವಳಿ ತಲಾಕನ್ನು ಎತ್ತಿಕೊಂಡಿತೇ? ಅಧ್ಯಾದೇಶ ಹೊರಡಿಸುವುದಕ್ಕೂ ಇದುವೇ ಕಾರಣವೇ? ಮುಸ್ಲಿಮರನ್ನು ತರಾಟೆಗೆತ್ತಿಕೊಂಡಷ್ಟೂ ಮತಗಳು ಹೆಚ್ಚಾಗುತ್ತವೆ ಎಂಬ ನೀತಿಯ ಭಾಗವೇ ಈ ಅಧ್ಯಾದೇಶ? ಒಂದುವೇಳೆ, ಇದಲ್ಲ ಎಂದಾದರೆ, ತ್ರಿವಳಿ ಮತ್ತು ಶಬರಿಮಲೆ ಎರಡನ್ನೂ ಆಯಾ ಧರ್ಮಗಳ ಆಂತರಿಕ ವಿಷಯವಾಗಿ ಅದಕ್ಕೆ ಪರಿಗಣಿಸಬಹುದಿತ್ತಲ್ಲವೇ? ಅದನ್ನು ಇತ್ಯರ್ಥಪಡಿಸುವುದಕ್ಕೆ ಆಯಾ ಧರ್ಮಗಳಿಗೆ ಅವಕಾಶ ಒದಗಿಸಬಹುದಿತ್ತಲ್ಲವೇ? ಧರ್ಮಸೂಕ್ಷ್ಮವೆಂಬುದು ತ್ರಿವಳಿಗೂ ಶಬರಿಮಲೆಗೂ ಏಕಪ್ರಕಾರವಾಗಿ ಅನ್ವಯಿಸಬಹುದಿತ್ತಲ್ಲವೇ? ಯಾಕೆ ಬೆಣ್ಣೆ ಮತ್ತು ಸುಣ್ಣ ನೀತಿ?

ಬಿಜೆಪಿಗೆ ಮುಸ್ಲಿಮ್ ಮಹಿಳೆಯರ ಹಿತ ಮುಖ್ಯವಲ್ಲ ಎಂಬುದಕ್ಕೆ ಶಬರಿಮಲೆ ಅತ್ಯುತ್ತಮ ಉದಾಹರಣೆ.