ಭಾರತೀಯ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ: ಕೇಂದ್ರ ಸರಕಾರಕ್ಕೆ ಟ್ವಿಟ್ಟರ್ ಸ್ಪಷ್ಟನೆ

0
458

ಸನ್ಮಾರ್ಗ ವಾರ್ತೆ

ನವದೆಹಲಿ: ರೈತರ ಪ್ರತಿಭಟನೆ ಮತ್ತು ಪ್ರಚೋದನಕಾರಿ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ ಎಂಬ ಆರೋಪದ ಮೇಲೆ 1,178 ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಟ್ವಿಟ್ಟರ್‌ಗೆ ಆದೇಶಿಸಿತ್ತು.

ಈ ಹಿನ್ಬೆಲೆಯಲ್ಲಿ ಟ್ವಿಟ್ಟರ್ ಇಂದು ತನ್ನ ನಿಲುವನ್ನು ವ್ಯಕ್ತಪಡಿಸಿದ್ದು ಒಂದು ವಿಭಾಗದ ಖಾತೆಗಳ ಮೇಲೆ ನಿರ್ಬಂಧ ಹೇರುವಿಕೆಯು “ಭಾರತೀಯ ಸಂವಿಧಾನವು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಗೆ ಕಾರಣವಾಗುವುದರಿಂದ ಮಾಧ್ಯಮಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಖಾತೆಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂಬುದಾಗಿ ಸ್ಪಷ್ಟನೆ ನೀಡಿದೆ‌.

ಪಾಕಿಸ್ತಾನ ಮತ್ತು ಖಲಿಸ್ತಾನಿ ಬಳಕೆದಾರರಿಗೆ ಸೇರಿದ 1,178 ಟ್ವಿಟ್ಟರ್ ಹ್ಯಾಂಡಲ್‌ಗಳನ್ನು ತೆಗೆದುಹಾಕುವಂತೆ ಸರ್ಕಾರವು ಟ್ವಿಟರ್‌ಗೆ ಸೂಚಿಸಿತ್ತು. ಕಳೆದ ನವೆಂಬರ್‌ನಿಂದ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಸರಕಾರವು ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ತಾವು ಕೈಗೊಂಡಿರುವ ಕ್ರಮಗಳ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ತನ್ನ ನಿಲುವನ್ನು ಇಂದು ಸ್ಪಷ್ಟಪಡಿಸಿದೆ