ಮಂಜೇಶ್ವರ ಚುನಾವಣೆಯಲ್ಲಿ ಯುಡಿಎಫ್‌ನ ಪ್ರಚಂಡ ಗೆಲುವಿನ ಹಿಂದೆ

0
1023

ಮಂಜೇಶ್ವರ ಉಪಚುನಾವಣೆಯ ಫಲಿತಾಂಶ ನಿರೀಕ್ಷಿತವೇ!?. ಈ ಗೆಲುವು, ಸಂಧಾನ, ಪರಿಶ್ರಮ ಮತ್ತು ಕೋಮುವಾದಿಗಳನ್ನು ಹಿಮ್ಮೆಟ್ಟಿಸುವ ಉದ್ದೇಶದ ಕಾರಣಕ್ಕೆ ಜಾತ್ಯಾತೀತರು ನೀಡಿದ ಕೊಡುಗೆಯೇ?, ಅಥವಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂವತ್ತು ವರ್ಷಗಳ ಎಡರಂಗದ ಪಾರಮ್ಯವನ್ನು ಮುರಿದ ಯುಡಿಎಫ್‌ನ ಗೆಲುವಿನ ಮುಂದುವರಿಕೆಯೇ?

ಯುಡಿಎಫ್ ಈ ಬಾರಿ ಗಳಿಸಿದ ಒಟ್ಟು ಮತಗಳು ಕೇವಲ ಐದು ತಿಂಗಳ ಹಿಂದೆ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತಾನ್ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಡೆದ ಮತಗಳಿಗಿಂತ ಈ ಬಾರಿ 2810 ಮತಗಳಷ್ಟು ಕಡಿಮೆ ಮತ ಬೀಳಲು ಕಾರಣವೇನು? ಈ ಚುನಾವಣೆಯಲ್ಲಿ ಹೊಸತಾಗಿ ಮತದಾನದ ಅವಕಾಶ ಪಡೆದವರ ಮತಗಳು ಎಡರಂಗ ಮತ್ತು ಬಿಜೆಪಿ ಪಾಲಾಯಿತೇ?.

ಬಿಜೆಪಿಯ ಸೋಲಿನ ಅಂತರ ಕಳೆದ ವಿಧಾನಸಭಾ ಚುನಾವಣೆ ಗಿಂತ 89 ಪಟ್ಟು ಹೆಚ್ಚಾಗಿದ್ದರೂ(89×89=7923) ಬಿಜೆಪಿ ಪಡೆದ ಮತಗಳಲ್ಲಿ ಕಳೆದ ಬಾರಿಗಿಂತ 390 ಮತಗಳ ಹೆಚ್ಚಳ ಕಂಡು ಬರುತ್ತದೆ. ಎಡರಂಗ ಮೂರನೇ ಸ್ಥಾನದಿಂದ ಮೇಲೇಳದಿದ್ದರೂ ಈ ಸಲ 5437 ಮತಗಳನ್ನು ಹೆಚ್ಚುವರಿಯಾಗಿ ಪಡೆದಿವೆ. ಈ ಲೆಕ್ಕಾಚಾರದ ಪ್ರಕಾರ ಯುಡಿಎಫ್ ಇನ್ನೂ ಹೆಚ್ಚಿನ ಬಹುಮತವನ್ನು ದಾಖಲಿಸ ಬೇಕಿತ್ತಲ್ಲವೇ?.

ಮತದಾರರ ನಿಲುವು ಪಾರ್ಲಿಮೆಂಟ್ ಚುನಾವಣೆಗೂ ವಿಧಾನಸಭೆಯ ಚುನಾವಣೆಗೂ ಒಂದೇ ರೀತಿಯಲ್ಲಿರುವುದು ತೀರಾ ಅಪರೂಪ. ಕೇರಳದಲ್ಲಂತೂ ವ್ಯತ್ಯಸ್ಥವಾಗಿರುವುದು ಸರ್ವೇ ಸಾಮಾನ್ಯ.ಆದ್ದರಿಂದ ಪಾರ್ಲಿಮೆಂಟ್ ಚುನಾವಣೆಯ ಫಲಿತಾಂಶದೊಂದಿಗೆ ಹೋಲಿಸಿ ನೋಡುವುದರಲ್ಲಿ ಅರ್ಥವಿಲ್ಲ ಎಂಬ ವಾದ ಸರಿಯೇ?.

ಅಭ್ಯರ್ಥಿಯ ಧರ್ಮ ಮತ್ತು ಪಕ್ಷದ ಕಾರಣಕ್ಕೆ ಗೆಲುವು ಮತ್ತು ಗೆಲವಿನ ಅಂತರದಲ್ಲಿ ವ್ಯತ್ಯಾಸಗಳಾಗುವುದು ಸಹಜವೇ?. ಹೀಗೆ ಪ್ರಶ್ನೆ-ಸಂಶಯ, ಸ್ಪಷ್ಟೀಕರಣ ಗಳು ಮಂಜೇಶ್ವರ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ತಕ್ಷಣದಿಂದ ಚರ್ಚೆಗೆ ಗ್ರಾಸವಾಗುತ್ತಿವೆ.ಕೇರಳದ ರಾಜಕಾರಣ ಕುರಿತು ಸಿಂಹಾವಲೋಕನ ನಡೆಸಿದರೆ ವಾಸ್ತವ ತೆರೆದು ಕೊಳ್ಳುತ್ತದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ, ಇತ್ತೀಚಿನ ದಿನಗಳಲ್ಲಿ, ಬಲಪಂಥೀಯ ಒಲವುಳ್ಳವರ ಆಡಂಬೊಲದಂತೆ ಕಂಡು ಬರುತ್ತಿತ್ತು. ಕರ್ನಾಟಕದ ಕರಾವಳಿಯಂತೆ,
ಧರ್ಮದ ಹೆಸರಿನಲ್ಲಿ ಹಲ್ಲೆ- ಕೊಲೆಗಳು ಮಂಜೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಾಗ ನಡೆಯುತ್ತಿತ್ತು. ಇದರ ಲಾಭವನ್ನು ಬಿಜೆಪಿ ತನ್ನ ಶಕ್ತಿ ವರ್ಧನಕ್ಕೆ ಬಳಸಿ ಕೊಳ್ಳುತ್ತಲೂ ಬಂದಿದೆ. ಬಹುಕಾಲದಿಂದಲೂ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ನಿಕಟ ಸ್ಪರ್ಧೆ ಕೊಡಲು ಸಾಧ್ಯವಾದದ್ದು ಮತ್ತು ಎಡರಂಗವನ್ನು ಮೂರನೇ ಸ್ಥಾನಕ್ಕೆ ತಳ್ಳಲು ಬಿಜೆಪಿಗೆ ಸಾಧ್ಯವಾದದ್ದು ಧರ್ಮ ರಾಜಕಾರಣದ ಫಲಶ್ರುತಿಯೇ ಆಗಿತ್ತು!.

ಈ ಹಿಂದಿನ ಯಾವ ಶಾಸಕರೂ ಮಾಡದಷ್ಟು ಅಭಿವೃದ್ಧಿಯನ್ನು ಮಂಜೇಶ್ವರ ಕ್ಷೇತ್ರದಲ್ಲಿ, ಮಾಡಿ ತೋರಿಸಿದ ಶಾಸಕ ದಿವಂಗತ ಅಬ್ದಲ್ ರಝಾಕ್ ಯಾನೆ ರದ್ದುಚ್ಚ, ಕಳೆದ ಬಾರಿ ನಡೆದ ವಿಧಾನಸಭೆಗೆ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಕಂಡ ಮೇಲಂತೂ ಬಿಜೆಪಿ ಇಲ್ಲಿ ಗೆಲ್ಲುವ ಸಾಧ್ಯತೆ, ಕಡೆಗಣಿಸಲಾಗದಷ್ಟು ಶಕ್ತವಾಗಿತ್ತು. ಮುಸ್ಲಿಂ ಲೀಗ್ ಅಥವಾ ಯುಡಿಎಫ್ ಮಂಜೇಶ್ವರದಲ್ಲಿ ವಿಜಯ ಸಾಧಿಸುವುದು ಕಷ್ಟ ಸಾಧ್ಯ ಎಂಬ ವಿಮರ್ಶೆ ರಾಜಕೀಯ ವಲಯದಲ್ಲಿ ಕೇಳಿ ಬರ ತೊಡಗಿತ್ತು. ಬಹಿರಂಗವಾಗಿ ಇದನ್ನು ಯುಡಿಎಫ್ ಮುಖಂಡರು ಒಪ್ಪಲು ಸಿದ್ಧರಿಲ್ಲದಿದ್ದರೂ ಆಂತರಿಕ ಚರ್ಚೆಯಲ್ಲಿ ಅಲ್ಲಗಳೆಯುತ್ತಿರಲಿಲ್ಲ.

‘ರದ್ದುಚ್ಚ’ ಎರಡನೇ ಬಾರಿಗೆ ಗೆದ್ದದ್ದು ಖೊಟ್ಟಿ(ನಕಲಿ) ಮತದಾನದಿಂದ ಎಂದು ಬಿಜೆಪಿ ಆರೋಪಿಸಿ ಫಲಿತಾಂಶವನ್ನು ರದ್ದು ಪಡಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಮುಸ್ಲಿಮರೊಳಗಿನ ಪ್ರಮುಖ ಧಾರ್ಮಿಕ ಸಂಘಟನೆಯೊಂದು ಮುಸ್ಲಿಂ ಲೀಗಿನ ಮೇಲಿನ ದ್ವೇಷದಿಂದ, ಬಿಜೆಪಿ ಅಭ್ಯರ್ಥಿಗೆ ಅಥವಾ ಎಡರಂಗದ ಅಭ್ಯರ್ಥಿಗೆ ಮತದಾನ ನಡೆಸುವಂತೆ ರಹಸ್ಯ ಕಾರ್ಯಾಚರಣೆ ನಡೆಸಿರುವುದರಿಂದ ‘ರದ್ದುಚ್ಚ’ರ ಮತಗಳಿಕೆಯಲ್ಲಿ ಇಳಿಮುಖವಾಗಲು ಕಾರಣವೆಂದೂ, ಈ ಬಾರಿಯೂ ಅದು ಆವರ್ತಿಸಲಿದೆ ಎಂಬ ವದಂತಿಯೂ ಇತ್ತು.

ಎಸ್ .ಡಿ..ಪಿ.ಐ ಕೂಡಾ ಮುಸ್ಲಿಂ ಲೀಗ್ ಮತ್ತು ಅದರ ಪೋಷಕ ಸಂಸ್ಥೆಯಂತಿರುವ ಸುನ್ನೀ ಸಂಘಟನೆ ತನ್ನನ್ನು ಸಾರ್ವಜನಿಕವಾಗಿ ಟೀಕಿಸಿ ಬಹಿಷ್ಕರಿಸುವಂತೆ ಕರೆ ನೀಡುವುದರಿಂದ ಲೀಗಿಗೆ ಸೋಲಿನ ರುಚಿ ತೋರಿಸಲು ಕಳೆದ ಬಾರಿ ನಡೆಸಿದಂತೆ ಈ ಬಾರಿಯೂ ತನ್ನದೇ ಆದ ರಹಸ್ಯ ಕಸರತ್ತು ನಡೆಸಿದೆ ಎಂದೂ ಅಂದಾಜಿಸುವವರಿದ್ದರು. ಇನ್ನೊಂದೆಡೆ ಮಂಜೇಶ್ವರದಲ್ಲಿ ಬಿಜೆಪಿಯ ದೈತ್ಯ ಬೆಳವಣಿಗೆ ಎಡ ರಂಗವನ್ನೂ ಚಿಂತೆಗೀಡು ಮಾಡಿತ್ತು. ಲೋಕಸಭೆಯ ಸ್ಥಾನವೂ ಕೈ ತಪ್ಪಿರುವುದರಿಂದ ಈ ಚುನಾವಣೆಯನ್ನು ಗೆಲ್ಲಲೇ ಬೇಕೆಂಬ ಹಠದಲ್ಲಿತ್ತು.

ಲೀಗ್, ನಕಲಿ ಮತದಾನದ ಮೂಲಕ ಗೆಲುವು ಸಾಧಿಸಿದೆ ಎಂಬ ತನ್ನ ದೂರಿನ ತೀರ್ಪು ವಿಳಂಬವಾಗುತ್ತಿರುವುದರಿಂದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಮಂಜೇಶ್ವರವನ್ನು ಲೀಗಿನಿಂದ ಕಸಿದುಕೊಳ್ಳಲೇ ಬೇಕೆಂದು ಹಿಂದುತ್ವದೊಂದಿಗೆ ಸ್ಧಳೀಯ ಆದ್ಯತೆಗಳನ್ನೂ ತನ್ನ ಚುನಾವಣಾ ವಿಷಯವಾಗಿಸಿ ಕೊಳ್ಳಲು ನಿರ್ಧರಿಸಿತ್ತು. ಹೀಗಿರುವಾಗಲೇ ಪಾದರಸ ದಂತೆ ಕ್ರಿಯಾಶೀಲರಾಗಿದ್ದ ಶಾಸಕ ‘ರದ್ದುಚ್ಚ’ ಅಕಾಲಿಕ ಮರಣಕ್ಕೆ ತುತ್ತಾದರು.

ಬಿಜೆಪಿಗೆ, ತನ್ನ ಪಕ್ಷದ ಶಾಸಕನನ್ನು ಕಾಣುವ ಭರವಸೆ ಈಡೇರಿ ಸಿಗುವ ದಿನಗಳು ಬಂದೇ ಬಿಟ್ಟವು ಎಂದನಿಸಿರ ಬೇಕು, ಚುನಾವಣಾ ಫಲಿತಾಂಶದ ತನ್ನ ತಕರಾರು ಅರ್ಜಿಯನ್ನು ಹಿಂದಕ್ಕೆ ಪಡೆದು, ಉಪಚುನಾವಣೆಯನ್ನು ಎದುರಿಸಲು ಯುದ್ಧೋಪಾಧಿಯಲ್ಲಿ ತಯಾರಿ ನಡೆಸಿತು.
ರದ್ದುಚ್ಚರ ಅಗಲಿಕೆಯ ಬಳಿಕ ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿಯ ಅಟ್ಟಹಾಸ ಹಿಂದೆಂದಿಗಿಂತಲೂ ತೀವ್ರಗೊಂಡವು. ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್ ಜಯ ಸಾಧಿಸಿದರೂ, ಕೇರಳದ 20 ಕ್ಷೇತ್ರಗಳ ಪೈಕಿ 19 ಸ್ಥಾನಗಳಲ್ಲಿ ಯುಡಿಎಫ್ ಪಾಲಾಗಿದ್ದರೂ, ಕೇಂದ್ರದಲ್ಲಿ ಎರಡನೇ ಬಾರಿಗೆ ನರೇಂದ್ರ ಮೋದಿ ಸರಕಾರ ಅಸ್ಥಿತ್ವ ಪಡೆದ ಕಾರಣದಿಂದ ಮಂಜೇಶ್ವರ ಕ್ಷೇತ್ರವನ್ನು ಗೆದ್ದು ಕೊಳ್ಳುವ ಬಿಜೆಪಿಯ ಆತ್ಮವಿಶ್ವಾಸ ಇನ್ನೂ ದೃಡವಾಯಿತು. ಸಾಲದಕ್ಕೆ ನೆರೆಯ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆಯಾದದ್ದು, ಒಂದೊಮ್ಮೆ ಕಾಸರಗೋಡು ಜಿಲ್ಲೆಯ ಬಿಜೆಪಿ ಉಸ್ತುವಾರಿಯೂ ಆಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿರುವುದು, ಮಂಜೇಶ್ವರ ಉಪಚುನಾವಣೆಯನ್ನು ಗೆಲ್ಲುವ ಬಿಜೆಪಿಯ ಶ್ರಮಕ್ಕೆ ಆನೆಬಲ ನೀಡಿತು.

ಅಕ್ಟೋಬರ್ 21ರಂದು ಮಂಜೇಶ್ವರ ಉಪಚುನಾವಣೆ ಎಂದು ಚುನಾವಣಾ ಆಯೋಗ ಘೋಷಣೆಮಾಡುತ್ತಿದ್ದಂತೆ ಬಿಜೆಪಿಯ ಉತ್ಸಾಹಕ್ಕೆ ಪಾರವೇ ಇಲ್ಲದಂತಾಯಿತು,
ಸ್ಥಳೀಯರನ್ನು ಅದರಲ್ಲೂ ದಕ್ಷಿಣಕನ್ನಡದ ಬಿಜೆಪಿ ಮತ್ತು ಸಂಘ ಪರಿಪಾರದೊಂದಿಗೆ ನಿಕಟ ಸಂಪರ್ಕವನ್ನಿಟ್ಟ, ಮೇಲ್ಜಾತಿಗೆ ಸೇರಿದ ವ್ಯಕ್ತಿ ಅಭ್ಯರ್ಥಿಯಾಗಬೇಕೆಂಬ ಬೇಡಿಕೆಯನ್ನು ಹೈಕಮಾಂಡಿನ ಮುಂದಿಟ್ಟಿತು.

ಎಡರಂಗ ಮತ್ತು ಯುಡಿಎಎಫ್ ಪರವಾಗಿರುವ ಹಿಂದೂಗಳ ಮತ ಸೆಳೆಯಲೂ ಇದರಿಂದ ಸಾಧ್ಯವಾಗಲಿದೆ ಎಂದು ವರಿಷ್ಠರನ್ನು ನಂಬಿಸಲಾಯಿತು. ಮಂಜೇಶ್ವರ ಕ್ಷೇತ್ರದ ಸ್ಥಳೀಯ ನೇತಾರರ ಒತ್ತಾಸೆಗೆ ನಳಿನ್ ಕುಮಾರ್‌ರ ಬೆಂಬಲವೂ ಸಿಕ್ಕಿತು. ಒಂದು ವಿಶ್ವಾಸನೀಯ ಮೂಲದ ಪ್ರಕಾರ ತನ್ನ ಆಪ್ತನೂ ತನ್ನದೇ ಶೈಲಿಯ ಉಗ್ರದೇಶ ಪ್ರೇಮದ ಭಾಷಣಗಾರನೂ, ಆದ ರವೀಶ್ ತಂತ್ರಿ ಕುಂಟಾರು, ಅಭ್ಯರ್ಥಿಯಾಗಲು ಸಂಘದ ವರಿಷ್ಠರನ್ನು ಒಲಿಸಿ, ಅಗತ್ಯ ಕ್ರಮ ಜರುಗಿಸಿದ್ದೇ ಸಂಸದ ಕಟೀಲ್ ರಂತೆ!

ಇತ್ತ ಮುಸ್ಲಿಂ ಲೀಗಿನಲ್ಲೂ ‘ರದ್ದುಚ್ಚ’ ರ ಸ್ಥಾನ ತುಂಬಲು ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಾಗ ತೊಡಗಿತು. ಒಬ್ಬರಿಗೆ ‘ಅಸ್ತು’ ಎಂದರೆ ಇತರ ಆಕಾಂಕ್ಷಿಗಳ ಮತ್ತು ಬೆಂಬಲಿಗರ ಅಸಹಕಾರದ ಅಪಾಯವೂ ಇಲ್ಲದಿರಲಿಲ್ಲ. ಇದನ್ನು ಮನಗಂಡ
ಮುಸ್ಲಿಂ ಲೀಗಿನ ನಿಸ್ಸೀಮ ತಂತ್ರಗಾರ, ಹಿರಿಯ ನಾಯಕ ಕುಂಞಾಲಿ ಕುಟ್ಟಿ, ಪಾನಕ್ಕಾಡ್ ತಂಗಳರನ್ನು ಒಪ್ಪಿಸಿ, ಎಲ್ಲರೂ ಒಪ್ಪುವ ಸರ್ವ ಸಮ್ಮತ ಅಭ್ಯರ್ಥಿಯಾಗಿ ಮುಸ್ಲಿಂ ಲೀಗಿನ ಕಾಸರಗೋಡು ಜಿಲ್ಲಾಧ್ಯಕ್ಷರಾದ ಎಂ.ಸಿ. ಖಮರುದ್ದೀನರನ್ನು ಚುನಾವಣಾ ಕಣಕ್ಕಿಳಿಸಿಯೇ ಬಿಟ್ಟರು.
‘ರದ್ದುಚ್ಚ’ ರ ಉತ್ತರಾಧಿಕಾರಿಯಾಗಲು ಎಲ್ಲ ರೀತಿಯಿಂದಲೂ ಸಮರ್ಥರಾದ, ,ಸರಳ ಸಜ್ಜನಿಕೆ ಯ ಗುಣ ಸ್ವಭಾವದ ಎಂ.ಸಿ.ಕಮರುದ್ದೀನ್ ಮುಸ್ಲಿಂಲೀಗಿಗಷ್ಟೇ ಅಲ್ಲ ಯುಡಿಎಫ್ ನ ಎಲ್ಲಾ ಅಂಗ ಪಕ್ಷಗಳಿಗೂ ಇಷ್ಟವಾದರು.

ಲೀಗನ್ನು ವಿರೋಧಿಸುವ ಸುನ್ನಿ ಸಂಘವೊಂದರ ವರಿಷ್ಠರಿಗೂ ಕಮರುದ್ದೀನ್ ಅಪಥ್ಯವಾಗಿ ಕಾಣದೆ ಅಲ್ಲೂ ಚರ್ಚೆಗಳು ಶುರುವಿಟ್ಟು ಕೊಂಡವು. ಬಿಜೆಪಿ ಮತ್ತು ಸಂಘ ಪರಿವಾರದ ಮುಸ್ಲಿಂ ವಿರೋಧಿ ಕೃತ್ಯಗಳಿಗೆ ಶಕ್ತ ಉತ್ತರ ನಮ್ಮಿಂದಷ್ಟೇ ಸಾಧ್ಯ ಎಂದು ಹೇಳುತ್ತಿದ್ದವರು ಮತ್ತು ಈ ಬಾರಿ ಮಂಜೇಶ್ವರದಲ್ಲಿ ತಮ್ಮ ಸ್ಪರ್ಧೆ ಖಚಿತ ಎಂದು ಭಾಷಣ ಕುಟ್ಟುತ್ತಾ ಬಂದ ಎಸ್ ಡಿ ಪಿ ಐ ಪಕ್ಷದವರು ಎಂ.ಸಿ.ಖಮರುದ್ದೀನ್ ರ ಅಭ್ಯರ್ಥಿತನ ಘೋಷಣೆಯಾಗುತ್ತಿದ್ದಂತೆ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲನೆ ನಡೆಸುತ್ತಿರುವ ಸುದ್ದಿಯೂ ಬಂತು!. ಎಸ್ ಡಿ ಪಿಐ ಸ್ಪರ್ಧಿಸಿದರೆ ಬಿಜೆಪಿಗೆ ಲಾಭ, ತಪ್ಪಿದರೆ ಎಡರಂಗದ ಗೆಲುವಿಗೆ ಸೋಪಾನ ಎಂಬ ಭಯ ಮುಸ್ಲಿಂ ಲೀಗಿನ ಸಾಂಪ್ರದಾಯಿಕ ಮತದಾರಲ್ಲಿದ್ದವು.

ಮುಸ್ಲಿಮರ ಅನೈಕ್ಯತೆಯ ಲಾಭ ಪಡೆಯಲು,ಮತ್ತು ಬಿಜೆಪಿ ಪರವಾಗಿರುವ ಮತವನ್ನೂ ಸೆಳೆಯಲು, ಬಂಟ ಸಮಾಜದ, ಜನಪರ ಕಾಳಜಿಯ ಕಾಮ್ರೇಡ್ ಶ್ರೀ ಎಂ.ಶಂಕರ್ ರೈ ಯವರನ್ನು ಎಡರಂಗ ತನ್ನ ಅಭ್ಯರ್ಥಿಯನ್ನಾಗಿಸುತ್ತಿದ್ದಂತೆ ಜಾತ್ಯಾತೀತ ಮತಗಳು ಎಡರಂಗಕ್ಕೆ ಬೀಳಲಿದೆ ಎಂಬ ಅಭಿಪ್ರಾಯ ದಟ್ಟವಾಯಿತು. ಈ ಹಂತದಲ್ಲೇ,
ಯುದ್ಧ ಗೆಲ್ಲುವ ಆವೇಶದಿಂದ, ಸರ್ವ ಸಜ್ಜಿತ ಸಿದ್ಧತೆಯೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತವರ ತಂಡ ಮಂಜೇಶ್ವರದ ಮೂಲೆ ಮೂಲೆಗೂ ದೌಡಾಯಿಸಿತು.
ಎಂ.ಸಿ .ಖಮರುದ್ದೀನ್ ಎಂಬ ಹೆಸರಿನ ವ್ಯಕ್ತಿಯೊಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿಸಿ ಯುಡಿಎಫ್ ಪರವಿರುವ ಮತದಾರರ ಧಿಕ್ಕು ತಪ್ಪಿಸುವ ಷಡ್ಯಂತ್ರಕ್ಕೆ ನಿರ್ದೇಶನವನ್ನು ಕೊಟ್ಟರು.

ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಕ್ಷೇತ್ರದ ಉದ್ದಕ್ಕೂ ಹೋಗಿ ಭಾಷಣದ ಮೇಲೆ ಭಾಷಣ ಬಿಗಿದರು. ಎಲ್ಲಾ ಕಡೆಯೂ
‘ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ದಿನಗಳಷ್ಟೇ ಉಳಿದಿವೆ. ಎನ್ಆರ್‌ಸಿ ಜಾರಿಗೆ ಇಷ್ಟರಲ್ಲೇ ಬರಲಿದೆ ಎಂದರು. ಹಿಂದೂಗಳೆಲ್ಲರೂ, ಮೋದಿಜೀಯ ಕೈ ಬಲ ಪಡಿಸಲು ಒಂದಾಗಿ ನಿಲ್ಲುವ ಈ ಪರ್ವ ಕಾಲದಲ್ಲಿ ಮಂಜೇಶ್ವರ ಕ್ಷೇತ್ರ, ಇನ್ನೊಂದು ಕಾಶ್ಮೀರ ವಾಗುವುದನ್ನು ತಡೆಯದೇ ಹೋದಲ್ಲಿ ಹಿಂದುತ್ವಕ್ಕೆ ಅಪಾಯ ಒದಗಲಿವೆ ಎಂದು ವ್ಯಾಖ್ಯಾನ ನೀಡಿದರು. ಯುಡಿಎಫ್, ಎಲ್‌ಡಿಎಫ್‌ಗಳಲ್ಲಿದ್ದವರೂ ಹಿಂದುತ್ವದ ಉಳಿವಿಗಾಗಿ ಮಂಜೇಶ್ವರದಲ್ಲಿ ಬಿಜೆಪಿಗೆ ಮತದಾನ ನಡೆಸುವ ಅನಿವಾರ್ಯತೆ ಇದೆ ಎಂದು ಹೇಳಿ, ಅಲ್ಪಸಂಖ್ಯಾತರನ್ನು, ಢೋಂಗಿ ಜಾತ್ಯಾತೀತರ ಬೆಂಬಲದ ಯುಡಿಎಫ್ ವಿರುದ್ಧ ಅಬ್ಬರದ ಪ್ರಚಾರ ನಡೆಸಿದರು.

ಇಷ್ಟೇ ಸಾಕಾಯಿತು! ಸಣ್ಣ ಪುಟ್ಟ ಮನಸ್ತಾಪಗಳನ್ನೇ ಬೆಟ್ಟದಷ್ಟಾಗಿಸಿ ಪರಸ್ಪರ ವೈರತ್ವದಿಂದ ಸಿಡಿಯುತ್ತಿದ್ದ, ವಿವಿಧ ಪಕ್ಷ-ಸಂಘಗಳ ಪಾಲಾಗಿದ್ದ ಮುಸ್ಲಿಮರು ಕಟೀಲರ ಪಡಿಯಚ್ಚಿನಂತಿರುವ ರವೀಶ ತಂತ್ರಿ ಗೆಲ್ಲಲೇಬಾರದೆಂಬ ಗಟ್ಟಿ ನಿರ್ಧಾರಕ್ಕೆ ಬಂದೇ ಬಿಟ್ಟರು.

ಎ.ಪಿ. ಇಕೆ. ಜಮಾಅತ್ , ಸಲಫಿ, ಎಸ್.ಡಿ.ಪಿ.ಐ, ವೆಲ್ಫೇರ್ ಪಾರ್ಟಿ, ಇನ್ನೂ ಅನೇಕ ಸಣ್ಣ ಪುಟ್ಟ ಸಂಘಟನೆಗಳೂ ಇದೇ ಮೊದಲ ಬಾರಿಗೆ ಸಮನ್ವಯ ಸಮಿತಿಯಂತೆ, ಬಿಜೆಪಿಯ ಸೋಲಿಗೆ ಕಾರ್ಯ ಪ್ರವೃತ್ತವಾದದ್ದು ಇನ್ನೂ ವಿಶೇಷ. ಇದು ಸಂಧಾನದ ಪರಿಣಾಮವೋ,
ಅಥವಾ ಬಿಜೆಪಿ ಮತ್ತು ನಳಿನ್ ಕುಮಾರ್ ಕಟೀಲ್ ರ ಕೋಮು ಪ್ರಚೋದಕ ಮಾತುಗಳಿಗೆ ಉತ್ತರವಾಗಿತ್ತೋ ಏನೋ, ಬಿಜೆಪಿಯ ವರ್ಷಗಳ ತಯಾರಿಗೆ ತೀವ್ರವಾದ ಹಿನ್ನಡೆಯನ್ನುಂಟು ಮಾಡಿದ್ದು, ಈ ಸಂಘಟಿತ ಹೋರಾಟ ಎಂಬುವುದು ಮಾತ್ರ ನೂರಕ್ಕೆ ನೂರು ಸತ್ಯ.

ಕಾಸರಗೋಡು ಮುಸ್ಲಿಂ ಲೀಗಿನ ನಾಯಕರ ಮತ್ತು ಕಾರ್ಯಕರ್ತರಷ್ಟೇ ಹುರುಪಿನೊಂದಿಗೆ ಜಿಲ್ಲೆಯ ಯುಡಿಎಫ್ ನಾಯಕರು-ಕಾರ್ಯಕರ್ತರೂ ಖಮರುದ್ದೀನರ ಪರ ಪ್ರಚಾರದಲ್ಲಿ ನಿರತರಾಗುತ್ತಿದ್ದಂತೆ, ಪಕ್ಕದ ದಕ್ಷಿಣಕನ್ನಡದ ಕಾಂಗ್ರೇಸ್ ಮುಖಂಡರು, ಪದಾಧಿಕಾರಿಗಳು ಕರ್ನಾಟಕದ ಮಾಜೀ ಸಚಿವರುಗಳಾದ ಯು.ಟಿ.ಖಾದರ್ ಮತ್ತು ರಮಾನಾಥ್ ರೈ ನೇತೃತ್ವದಲ್ಲಿ ಮನೆ ಮನೆಪ್ರಚಾರಕ್ಕಿಳಿದ್ದದ್ದು, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಕರ್ನಾಟಕದ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯರ ಭೇಟಿ ಹಾಗೂ ಬೃಹತ್ ಸಾರ್ವಜನಿಕ ಸಭೆಗಳು ನಡೆದ ಮೇಲಂತೂ ಕೋಮುವಾದವನ್ನು ವಿರೋಧಿಸುವ ಜಾತ್ಯಾತೀತ ಮನಸ್ಸುಗಳಿಗೆ ಬಿಜೆಪಿಯ ನಾಗಲೋಟಕ್ಕೆ ತಡೆಯೊಡ್ಡಲು ಯುಡಿಎಫ್ ನಿಂದ ಮಾತ್ರ ಸಾಧ್ಯ ಎಂಬ ಮನವರಿಕೆ ದೃಢವಾಯಿತು.

ಫಲಿತಾಂಶ ಹೊರ ಬಿದ್ದಾಗ ನಳಿನ್ ಕುಮಾರ್ ಕಟೀಲ್‌ರ ಉಗ್ರ ಭಾಷಣ, ಬಿಜೆಪಿಯ ಮತಗಳನ್ನು ಹೆಚ್ಚಿಸುವ ಬದಲು ಯುಡಿಎಫ್ ಅಭ್ಯರ್ಥಿಯ ಗೆಲುವಿಗೆ ಕಾರಣವಾದವು ಎಂದು ರಾಜಕೀಯ ವಿಶ್ಲೇಷಕರೇ ಹೇಳುವಂತಾಯಿತು. ಮುಸ್ಲಿಂ ಲೀಗ್ ಅಭ್ಯರ್ಥಿಗೆ ಜಾತ್ಯಾತೀತ ಮನಸ್ಸುಳ್ಳವರ ಮತ ಚಲಾವಣೆಯಾಗಿರುವ ಖಚಿತತೆಯೂ ಎದ್ದು ಕಾಣುತ್ತಿವೆ. ಎಡ ಪಕ್ಷಗಳ ಮತದಾರರ ಮತಗಳೂ ತಾವರೆ ಮುದುಡಿ ಹೋಗಲು ಏಣಿ ಏರಿರುವ ಸಾಧ್ಯತೆಗಳೂ ಇಲ್ಲವೆನ್ನುವಂತಿಲ್ಲ. ಸಾವಿರಾರು ಸಂಖ್ಯೆಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಕರ್ತರ ನಿಷ್ಕಳಂಕ ದುಡಿಮೆಯ ಶ್ರಮ ಈ ಗೆಲುವಿನಲ್ಲಿರುವುದು ಮೇಲ್ನೋಟಕ್ಕೇ ಗುರುತಿಸಲು ಸಾಧ್ಯವಿದೆ.

-ಫಾರೂಕ್ ಉಳ್ಳಾಲ್.