ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆಗೊಳಿಸಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ಆಗ್ರಹ

0
832

ಸನ್ಮಾರ್ಗ ವಾರ್ತೆ

ಕಳೆದ ವರ್ಷ ಅಂಗೀಕರಿಸಿದ ದೇಶದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಬಂಧನಕ್ಕೊಳಗಾದ ಜನರನ್ನು “ತಕ್ಷಣ” ಬಿಡುಗಡೆ ಗೊಳಿಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ಗುಂಪು ಆಗ್ರಹಿಸಿದೆ.

“ಸಿಎಎ ವಿರುದ್ಧ ಖಂಡಿಸುವ ಮತ್ತು ಪ್ರತಿಭಟಿಸುವ ಹಕ್ಕನ್ನು ಚಲಾಯಿಸಿದ್ದರಿಂದ ಅನೇಕ ವಿದ್ಯಾರ್ಥಿಗಳನ್ನು ಹಾಗೂ ಹೋರಾಟಗಾರರನ್ನು ಬಂಧಿಸಲಾಗಿದೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರ ಕಚೇರಿಯು ಶುಕ್ರವಾರ ಪ್ರಕಟನೆಯನ್ನು ಹೊರಡಿಸಿದೆ.

ಧರ್ಮದ ಆಧಾರದ ಮೇಲೆ ಭಾರತೀಯ ಪೌರತ್ವದ ಹಕ್ಕುಗಳ ನಿರ್ಣಯವು ಭಾರತದಾದ್ಯಂತ ಸಾಮೂಹಿಕ ಪ್ರತಿಭಟನೆಗೆ ಕಾರಣವಾಗಿತ್ತು. ಕೆಲವೊಂದು ಪ್ರತಿಭಟನೆಗಳು ಮುಸ್ಲಿಂ ಮಹಿಳೆಯರ ನೇತೃತ್ವದಲ್ಲಿ ನಡೆದವು ಅಲ್ಲದೇ, ಈ ವೇಳೆ ತೀವ್ರವಾದ ಪೊಲೀಸ್ ದಬ್ಬಾಳಿಕೆಯು ನಡೆದಿತ್ತೆಂದು ತಜ್ಞರು ಆರೋಪಿಸಿದ್ದಾರೆ.

ಸಿಎಎ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯ ಸಂದರ್ಭದಲ್ಲಿ, ರಾಜಧಾನಿ ನವದೆಹಲಿಯಲ್ಲಿ ಫೆಬ್ರವರಿಯಲ್ಲಿ ಮಾರಕ ಹಿಂಸಾಚಾರ ಭುಗಿಲೆದ್ದಿತು, ಇದರಲ್ಲಿ 53 ಜನರು ಹತರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಕೊಲ್ಲಲ್ಪಟ್ಟರು.

ನವದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವಾರು ಸಿಎಎ ವಿರೋಧಿ ಕಾರ್ಯಕರ್ತರನ್ನು ಬಂಧಿಸಲಾಯಿತು ಮತ್ತು ನಂತರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಹೇರಲಾಯ್ತು.

“ದ್ವೇಷ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ” ಯ ಆರೋಪ ಹೊತ್ತಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರು ಹಾಗೂ ಕೆಲವು ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಯುಎನ್ ಮಾನವ ಹಕ್ಕುಗಳ ತಜ್ಞರು ಹೇಳಿದ್ದಾರೆ.

ಸಿಎಎ ಪರ ರ್ಯಾಲಿಯಲ್ಲಿ ಫೆಡರಲ್ ಮಂತ್ರಿಯೊಬ್ಬರು “ದೇಶದ್ರೋಹಿಗಳನ್ನು ಶೂಟ್ ಮಾಡಿ” ಘೋಷಣೆಗಳನ್ನು ಎತ್ತಿದ್ದರು. ಈಶಾನ್ಯ ದೆಹಲಿಯ ಬಿಜೆಪಿ ಶಾಸಕರೊಬ್ಬರು ಫೆಬ್ರವರಿ ಹಿಂಸಾಚಾರದ ಸ್ಥಳದಲ್ಲಿ ಪ್ರತಿಭಟನಾಕಾರರನ್ನು ಬೀದಿಗಿಳಿಸುವುದಾಗಿ ಬೆದರಿಕೆ ಹಾಕಿದ್ದರು.

ಸಿಎಎ ವಿರೋಧಿ ಹೋರಾಟದಲ್ಲಿ ಬಂಧನಕ್ಕೊಳಗಾದ 11 ಮಂದಿಯನ್ನು ಯುಎನ್ ತಜ್ಞರು ಹೆಸರಿಸಿದ್ದು, ಈ 11 ಪ್ರಕರಣಗಳಲ್ಲಿ “ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಆರೋಪಗಳಿವೆ” ಮತ್ತು ಬಂಧನದಲ್ಲಿದೆ “ಚಿತ್ರಹಿಂಸೆ ಮತ್ತು ಕೆಟ್ಟದಾಗಿ ನಡೆದುಕೊಳ್ಳುವಿಕೆಯು ಆಗಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಆರೋಪಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.