ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ ಎಂದು ಅಲ್ಲಾಹ್ ಹೇಳಿರುವುದೇಕೆಂದರೆ…

0
1054

ಖದೀಜ ನುಸ್ರತ್, ಅಬು ಧಾಬಿ

ಆರೋಗ್ಯವೆನ್ನುವುದು ಅಲ್ಲಾಹನು ನೀಡಿದ ಅತಿ ದೊಡ್ಡ ಅನುಗ್ರಹವಾಗಿದೆ. ಅದನ್ನು ಕಾಪಾಡ ಬೇಕಾಗುದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಸ್ಲಾಂ ಧರ್ಮವು ತನ್ನ ಅನುಯಾಯಿಗಳಿಗೆ ಕೇವಲ ವಿಶ್ವಾಸ, ಕರ್ಮ, ಆಚಾರ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ತಮ್ಮ ದೈನಂದಿನ ಜೀವನದಲ್ಲಿ ಬೇಕಾದ ಹಲವಾರು ವೈಜ್ಞಾನಿಕ ನಿಯಮ ಹಾಗು ಆರೋಗ್ಯಕರವಾದ ಸಲಹೆಗಳನ್ನುನೀಡುತ್ತದೆ.

ಪ್ರವಾದಿ ಮುಹಮ್ಮದ್(ಸ) ಮತ್ತು ಸಹಾಬಿಗಳು ಮದೀನ ಕಾಲಘಟ್ಟದಲ್ಲಿ ಆರೋಗ್ಯಯುತ ಜೀವನ ನಡೆಸುತ್ತಿದ್ದರು. ನಾಲ್ವರು ಖಲೀಫರ ಕಾಲದಲ್ಲಿಯೂ ಅಲ್ಲಿ ಯಾವುದೇ ಮಾರಕ ರೋಗಗಳಿರಲಿಲ್ಲ. ಅವರ ಆರೋಗ್ಯದ ರಹಸ್ಯವೇನೆಂದರೆ ಹಸಿವಾದಾಗ ಮಾತ್ರ ಆಹಾರ ಸೇವಿಸುತ್ತಿದ್ದರು. ಮಿತವಾಗಿ ಆಹಾರ ಸೇವಿಸುತ್ತಿದ್ದರು. ವಾರದಲ್ಲಿ ಎರಡು ದಿನ ಮತ್ತು ತಿಂಗಳಿನಲ್ಲಿ ಮೂರು ದಿನ ಉಪವಾಸ, ಇನ್ನಿತರ ಕೆಲವು ವಿಶೇಷ ದಿನಗಳಲ್ಲಿ, ರಂಝಾನ್ ತಿಂಗಳಿನಲ್ಲಿ ಉಪವಾಸ ಹೀಗೆ ವರ್ಷದಲ್ಲಿ ಹಲವಾರು ದಿನ ಉಪವಾಸ ಆಚರಿಸುತ್ತಿದ್ದರು. ಖರ್ಜೂರಗಳನ್ನು ಸೇವಿಸುತ್ತಿದ್ದರು. ಪ್ರವಾದಿ(ಸ) ಮತ್ತು ಸಹಾಬಿಗಳು ಕೇವಲ ಖರ್ಜೂರ ಮತ್ತು ನೀರಿನಿಂದ ಎಷ್ಟೋ ಹಗಲು ರಾತ್ರಿ ಕಳೆದಿದ್ದರು.

ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತೇವೋ ಆ ಮಣ್ಣಿನಲ್ಲಿ ಬೆಳೆಯುವ ಆಹಾರವು ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿರುತ್ತದೆ.

“ಹೇ ಜನರೇ, ಭೂಮಿಯಲ್ಲಿರುವ ಧರ್ಮಸಮ್ಮತ ಹಾಗೂ ಶುದ್ಧ ವಸ್ತುಗಳನ್ನು ನೀವು ಉಣ್ಣಿರಿ.” (ಅಲ್ ಬಕರಃ:168) ಸೃಷ್ಠಿಕರ್ತನು ನಿಷಿದ್ಧಗೊಳಿಸಿದ ಹಂದಿ, ಮದ್ಯ ಲಹರಿ ಪದಾರ್ಥಗಳೆಲ್ಲವೂ ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದೇ ರೀತಿ ಸೃಷ್ಟಿಕರ್ತನು ಧರ್ಮಸಮ್ಮತಗೊಳಿಸಿದ ಆಹಾರವೆಲ್ಲವೂ ನಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ.

ನಮ್ಮ ಹಿಂದಿನ ತಲೆಮಾರು ಅಕ್ಕಿ, ಗೋಧಿ, ಧಾನ್ಯ, ಹಸಿರು ತರಕಾರಿ, ಮೀನು, ತಾಜಾ ಹಣ್ಣುಗಳನ್ನು ತಿಂದು ಆರೋಗ್ಯವಾಗಿ ಸುಮಾರು 70-80 ವರ್ಷದವರೆಗೆ ಮಧುಮೇಹ, ರಕ್ತದ ಒತ್ತಡ, ಕೊಲೆಸ್ಟ್ರಾಲ್ ಗಳಿಲ್ಲದೇ ಆರೋಗ್ಯವಾಗಿ ಜೀವಿಸಿದ್ದರೆಂಬುದಕ್ಕೆ ನಾವೇ ಸಾಕ್ಷಿಯಾಗಿದ್ದೇವೆ. ಹಿಂದೆ ಒಂದು ಕುಟುಂಬದಲ್ಲಿ ಆರೆಂಟು ಅಥವಾ ಹತ್ತು ಮಕ್ಕಳಿದ್ದಾಗ ಮನೆಯಲ್ಲಿ ಬೇಯಿಸಿದ ಎಲ್ಲಾ ವಸ್ತುಗಳನ್ನು ತಿನ್ನುತ್ತಿದ್ದರು. ಮಾತ್ರವಲ್ಲ ಪುರುಷರು ಮತ್ತು ಮಹಿಳೆಯರೆಂಬ ವ್ಯತ್ಯಾಸವಿಲ್ಲದೆ ಬೆವರು ಸುರಿಸಿ ದೈನಂದಿನ ಕೆಲಸಕಾರ್ಯಗಳನ್ನು ಮಾಡುತ್ತಿದ್ದರು. ಇದರಿಂದ ದೇಹಕ್ಕೆ ಅತ್ಯುತ್ತಮ ವ್ಯಾಯಾಮವು ದೊರಕುತಿತ್ತು.

21 ನೆಯ ಶತಮಾನವು ವಿವಿಧ ರೀತಿಯ ಕೋಳಿ ಮತ್ತು ಮಾಂಸಗಳ ಪದಾರ್ಥ ಹಾಗೂ ಫ್ರೈ ತಿಂಡಿಗಳು, ತರಕಾರಿಯ ಸಲಾಡ್, ಹಣ್ಣುಗಳ ಪುಡ್ಡಿಂಗ್ ಗಳ ಕ್ರಾಂತಿಯನ್ನೇ ಉಂಟು ಮಾಡಿದೆ ಎನ್ನಬಹುದು. ಸಾಮಾಜಿಕ ತಾಣಗಳ ಆಗಮನದಿಂದ ಸ್ತ್ರೀಯರಲ್ಲಿ ವಿವಿಧ ರೀತಿಯ ಅಡುಗೆಯಲ್ಲಿ ಪೈಪೋಟಿ ಉಂಟಾಯಿತು. ಅದರೊಂದಿಗೆ ಅದು ಬೇಡ ಇದು ಬೇಡ ಎಂದು ಹಲವು ಬಗೆಯನ್ನು ತಿನ್ನದ ಹೊಸ ಮಕ್ಕಳ ಸಂಖ್ಯೆಯು ಹೆಚ್ಚಾಯಿತು. ಹೋಟೆಲ್ ನ ಆಹಾರ ಮತ್ತು ಫಾಸ್ಟ್ ಫುಡ್ ಗಳಿಗೆ ಬೇಡಿಕೆಯೂ ಹೆಚ್ಚಾಯಿತು. ಇದರಿಂದಾಗಿ ತುಂಬಾ ಹೋಟೆಲ್ ಗಳು ಆರಂಭವಾದವು. ನಂತರ ಅವರ ಮಧ್ಯೆ ಸ್ಪರ್ಧೆ ಹೆಚ್ಚಾಯಿತು. ಆದ್ದರಿಂದ ಆಹಾರದ ಗುಣಮಟ್ಟ ಕಡಿಮೆಯಾಯಿತು. ಹೋಟೆಲ್ ನಲ್ಲಿ ಉಪಯೋಗಿಸುವಂತಹ ಕಡಿಮೆ ದರ್ಜೆಯ ಫುಡ್ ಕಲರ್, ಸೋಯ ಸಾಸ್, ಅಜ್ಜಿನೊಮೊಟ್ಟೊದಂತಹ ಮಿಶ್ರಣಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಸಾಮಾನ್ಯ ತರಕಾರಿಯಾದ ಬಟಾಟೆಯು ಕಟ್ಲೆಟ್, ಚಿಪ್ಸ್, ಪ್ರೆಂಚ್ ಫ್ರೈ ಯ ರೂಪ ತಾಳಿದಾಗ ಅದಕ್ಕೆ ಬೇಡಿಕೆ ಹೆಚ್ಚಾಯಿತು. ಐಸ್ ಕ್ರೀಮ್, ಚೊಕಲೇಟ್, ಕೇಕ್, ಸಾಫ್ಟ್ ಡ್ರಿಂಕ್, ಎಣ್ಣೆಯಲ್ಲಿ ಕಾಯಿಸಿದ ತಿಂಡಿಗಳು, ವ್ಯಾಯಾಮವಿಲ್ಲ ಜೀವನ, ಫಾಸ್ಟ್ ಪುಡ್ ಗಳು ನಮ್ಮನ್ನು ಫಾಸ್ಟ್ ಡೆತ್ ನ ಕಡೆಗೆ ಕೊಂಡೊಯ್ಯುತ್ತಿದೆ.

ಆಹಾರ ಶೈಲಿಯು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ತಲೆಮಾರಿನಿಂದ ತಲೆಮಾರಿಗೆ ಭಿನ್ನವಾಗಿರುತ್ತದೆ. ಮಾನವನು ಹೊಸ ಹೊಸ ರುಚಿಯನ್ನು ಆಸ್ವಾದಿಸಲು ಇಷ್ಟಪಡುತ್ತಾನೆ. ನಮ್ಮ ತಾತಂದಿರು ಏನನ್ನು ತಿನ್ನುತ್ತಿದ್ದರೋ ಅದನ್ನು ಈಗ ನಾವು ಇಷ್ಟಪಡುವುದಿಲ್ಲ. ಅದೇ ರೀತಿ ನಮ್ಮ ಹೊಸ ತಲೆಮಾರಿಗೂ ಹೊಸ ಬೇಡಿಕೆಗಳಿರಬಹುದು.

ಮನೆಯವರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ರೀತಿಯ ಅಡುಗೆಗಳನ್ನು ಮನೆಯಲ್ಲೇ ತಯಾರಿಸಬೇಕು. ಒಮ್ಮೆ ಅಲ್ಪ ಸ್ವಲ್ಪ ಉಪ್ಪು, ಸಕ್ಕರೆ, ರುಚಿ ಹೆಚ್ಚು ಕಡಿಮೆಯಾದರೂ ಯಾವುದೇ ಲೋಪದೋಷಗಳನ್ನು ಹೇಳದೆ ಕೃತಜ್ಞತಾಭಾವದಿಂದ ಅದನ್ನು ಉಣ್ಣಬೇಕು. ಉಪ್ಪು ಸಕ್ಕರೆ ಕಡಿಮೆಯಾದ ಆಹಾರವನ್ನು ಯಾವಾಗಲಾದರೊಮ್ಮೆ ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಯಾವುದೇ ದೊಡ್ಡ ಏರುಪೇರಾಗುವುದಿಲ್ಲ. ನಮ್ಮ ಸುತ್ತ ಮುತ್ತ ಬ್ಯಾಂಕಿನಲ್ಲಿ ಲಕ್ಷಗಟ್ಟಲೆ ಹಣ ಉಳಿತಾಯವಿರುವ ಕೇವಲ ಔಷಧಿಗಳನ್ನು ಮಾತ್ರ ಸೇವಿಸಲು ಭಾಗ್ಯವಿರುವ ಅದೆಷ್ಟೋ ಶ್ರೀಮಂತರು ಇದ್ದಾರೆ.

ಓರ್ವ ವೈದ್ಯರ ಮಾತಿನಂತೆ ದಿನಕ್ಕೆ ಒಂದು ಬಾರಿ ಆಹಾರ ಸೇವಿಸುವವನು ರೋಗಿ, ಎರಡು ಬಾರಿ ಸೇವಿಸುವವನು ಯೋಗಿ, ಮೂರು ಬಾರಿ ಸೇವಿಸುವವನು ಭೋಗಿ, ನಾಲ್ಕು ಬಾರಿ ಸೇವಿಸುವವರು ಸಮಾಜ ದ್ರೋಹಿ. ಒಂದು ದಿನದಲ್ಲಿ ಎರಡು ಕಡೆ ಮದುವೆಗೆ ಹೋದರೆ ಒಂದು ಕಡೆ ಮಾತ್ರ ಊಟ ಮಾಡಿದರೆ ಸಾಕು. ಎರಡೂ ಕಡೆ ಉಣ್ಣ ಬೇಕೆಂದಿಲ್ಲ. ಆಹಾರವೆಂಬುದು ನಮಗೆ ಮಾತ್ರ ಇರುವುದಲ್ಲ. ಸಮಾಜದಲ್ಲಿ ಎಲ್ಲರ ಹಕ್ಕು ಇದೆ. “ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಂಡು ಮಲಗುವವನು ಸತ್ಯವಿಶ್ವಾಸಿಯಲ್ಲ.” ಎಂಬ ಪ್ರವಾದಿ ವಚನ ನಮಗೆಲ್ಲರಿಗೂ ತಿಳಿದಿದೆ.

ಇನ್ನೊಂದು ಪ್ರವಾದಿ ವಚನದಲ್ಲಿ ಈ ರೀತಿ ಇದೆ: “ಒಬ್ಬ ಸತ್ಯ ವಿಶ್ವಾಸಿಯು ಹಸಿದಿರುವ ಇನ್ನೊಬ್ಬ ಸತ್ಯವಿಶ್ವಾಸಿಗೆ ಉಣಬಡಿಸಿದರೆ ಅಲ್ಲಾಹನು ಪುನರುತ್ಥಾನ ದಿನ ಆತನಿಗೆ ಸ್ವರ್ಗದ ಆಹಾರವನ್ನು ಉಣಿಸುವನು. ಒಬ್ಬ ಸತ್ಯ ವಿಶ್ವಾಸಿಯು ದಾಹದಿಂದ ನರಳುತ್ತಿರುವ ಓರ್ವ ಸತ್ಯ ವಿಶ್ವಾಸಿಗೆ ನೀರು ಕುಡಿಸಿದರೆ ಅಲ್ಲಾಹನು ಪುನರುತ್ಥಾನ ದಿನ , ಆತನಿಗೆ ಮುದ್ರೆ ಹಾಕಿರುವ ಅತ್ಯುನ್ನತ ಮಟ್ಟದ ಪಾನೀಯವನ್ನು ಕುಡಿಸುವನು.”

ಮದುವೆ, ಪಾರ್ಟಿ ಎಂದು ಇದ್ದವರನ್ನೇ ಕರೆದು ಕರೆದು ತಿನ್ನಿಸುವಾಗ ಸಮಾಜದಲ್ಲಿ ಹಸಿವಿನಿಂದ ನರಳುವವರನ್ನು ನಾವು ಒಮ್ಮೆಯಾದರೂ ಯೋಚಿಸಿದ್ದಿದೆಯೇ? ಬರ್ತ್ ಡೇ ಪಾರ್ಟಿ ಅಥವಾ ಇತರ ಯಾವುದೇ ಪಾರ್ಟಿಯಲ್ಲಿ ಪ್ರದರ್ಶಿಸಲ್ಪಡುವ ಕೇಕ್ ನಿಂದ ಯಾವುದೇ ಪೌಷ್ಠಿಕಾಂಶ ಸಿಗುತ್ತದೆಯೇ? ಕೇವಲ 2-3 ನಿಮಿಷದ ಕ್ಷಣಿಕ ಸುಖಕ್ಕಾಗಿ ಬ್ರಾಂಡೆಡ್ ಕಾಫಿ, ಐಸ್ ಕ್ರೀಮ್ ಅಥವಾ ದುಬಾರಿಯಾದ ಇನ್ನಾವುದೇ ಆಹಾರದ ರುಚಿ ಹೀರುವಾಗ ಒಂದೆರಡು ಅಲ್ಲ, ಹತ್ತಿಪ್ಪತ್ತು ಬಾರಿಯಾದರೂ ಯೋಚಿಸಬೇಕು. ವೈದ್ಯರು ನಮ್ಮ ಆಹಾರಕ್ಕೆ ಕಡಿವಾಣ ಹಾಕುವುದಕ್ಕಿಂದ ಮುಂಚೆ ನಾವೇ ನಿಯಂತ್ರಿಸಬೇಕು. ತಿನ್ನಲಿಕ್ಕಾಗಿ ಜೀವಿಸುವವರಲ್ಲ. ಜೀವಿಸಲಿಕ್ಕಾಗಿ ಮಿತವಾಗಿ ತಿನ್ನುವವರಾಗಬೇಕು.

ಹೊಟ್ಟೆಯಲ್ಲಿ ಮೂರನೇ ಒಂದು ಭಾಗ ಆಹಾರ, ಒಂದು ಭಾಗ ನೀರು ಹಾಗೂ ಇನ್ನೊಂದು ಭಾಗವನ್ನು ಖಾಲಿ ಬಿಡಬೇಕು

.ಆಹಾರವನ್ನು ಔಷಧಿಯಾಗಿ ತಿನ್ನಿರಿ. ಅನ್ಯಥಾ ಔಷಧಿಯನ್ನು ಆಹಾರದ ಹಾಗೆ ತಿನ್ನಬೇಕಾಗಬಹುದು.

ಸೃಷ್ಠಿಕರ್ತನು ಭೂಮಿಯಲ್ಲಿರುವ ಎಲ್ಲಾ ಸೃಷ್ಠಿಗಳಿಗೆ ಆಹಾರವನ್ನು ಒದಗಿಸಿರುವನು. ಆದರೆ ಕೆಲವರು ಮಾಡುವಂತಹ ದುಂದುವೆಚ್ಚದಿಂದ ಎಲ್ಲರಿಗೂ ಆಹಾರ ಸಿಗುವುದಿಲ್ಲ.
“ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ. ಅಲ್ಲಾಹ್ ಮಿತಿಮೀರುವವರನ್ನು ಮೆಚ್ಚುವುದಿಲ್ಲ.”