ಇರಾನ್ ವಿರುದ್ಧ ಅಮೆರಿಕ ದಿಗ್ಬಂಧನ: ಜಾಗತಿಕ ದೇಶಗಳಿಂದ ತೀವ್ರ ವಿರೋಧ

0
226

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್/ಟೆಹ್ರಾನ್,ಸೆ.21: ಜಾಗತಿಕ ರಾಷ್ಟ್ರಗಳೊಂದಿಗೆ 2015ರಲ್ಲಿ ಇರಾನ್ ಅಣು ಒಪ್ಪಂದಕ್ಕೆ ಸಹಿ ಮಾಡಿರುವುದನ್ನು ಹಿಂಪಡೆದು ವಿಶ್ವಸಂಸ್ಥೆಯ ಮೂಲಕ ಪುನಃ ಇರಾನ್ ಮೇಲೆ ದಿಗ್ಬಂಧನ ಹೇರಲು ಅಮೆರಿಕ ನಡೆಸಿದ ಪ್ರಯತ್ನ ವಿಫಲವಾಗಿದ್ದು, ಇದಾದ ನಂತರ ಅಮೆರಿಕ ಇರಾನ್ ವಿರುದ್ಧ ದಿಗ್ಬಂಧನ ತಾನೇ ಘೋಷೀಸಿಕೊಂಡಿದೆ.

ಅಮೆರಿಕದ ಕ್ರಮವನ್ನು ಅದರ ಮಿತ್ರ ದೇಶಗಳಾದ ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಸಹಿತ ಜಾಗತಿಕ ದೇಶಗಳು ವಿರೋಧಿಸಿವೆ.

ಅಮೆರಿಕ ಮುಂದಿಟ್ಟ ಕಾಲಾವಧಿ ಕಳೆದಿದೆ. ಇರಾನ್ ವಿರುದ್ಧ ದಿಗ್ಬಂಧನ ಜಾರಿಗೊಂಡಿದೆ ಎಂದು ಸ್ಟೇಟ್ ಕಾರ್ಯದರ್ಶಿ ಮೈಕ್ ಪೊಂಪಿಯೋ ಘೋಷಿಸಿದರು. ದಿಗ್ಬಂಧನವನ್ನು ಉಲ್ಲಂಘಿಸಿದ ದೇಶಗಳು ಶಿಕ್ಷಾ ಕ್ರಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ಬೆದರಿಕೆ ಹಾಕಿದ್ದಾರೆ.

ಒಂದು ತಿಂಗಳ ಹಿಂದೆ ಅಮೆರಿಕ ಸ್ನಾಪ್‍ಬಾಕ್(ಇರಾನ್ ವಿರುದ್ಧ ದಿಗ್ಬಂಧನಗಳು ಮರು ಹೇರಿಕೆಯ ಹಕ್ಕು) ಉಪಯೋಗಿಸಲು ರಕ್ಷಾ ಸಮಿತಿಗೆ ಪತ್ರ ಬರೆದಿತ್ತು. ಆದರೆ, 2015ರಲ್ಲಿ ಸಹಿ ಹಾಕಿದ್ದ ಅಣು ಒಪ್ಪಂದದಿಂದ 2018ರಲ್ಲಿ ಅಮೆರಿಕ ಏಕಪಕ್ಷೀಯವಾಗಿ ಹಿಂದೆ ಸರಿದಿತ್ತು. ಆದುದರಿಂದ ಸ್ನಾಪ್ ಬಾಕ್ ಉಪಯೋಗಿಸುವ ಹಕ್ಕು ಅಮೆರಿಕಕ್ಕೆ ಇಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯರಾದ ಬ್ರಿಟನ್, ಫ್ರಾನ್ಸ್, ರಷ್ಯ, ಚೀನ ದೇಶಗಳು ಮತ್ತು ಒಪ್ಪಂದದ ಭಾಗವಾದ ಜರ್ಮನಿಯು ಹೇಳಿದೆ.

ಕಾನೂನಾತ್ಮಕವಾಗಿ ಹಕ್ಕು ಹೊಂದಿಲ್ಲದ ಕಾರಣದಿಂದ ಅಮೆರಿಕದ ಪತ್ರವನ್ನು ಭದ್ರತಾ ಸಮಿತಿ ಪರಿಗಣಿಸಲಿಲ್ಲ. ಅಕ್ಟೋಬರ್ 18ಕ್ಕೆ ಇರಾನ್ ವಿರುದ್ಧ ಆಯುಧ ದಿಗ್ಬಂಧನ ಕೊನೆಗೊಳ್ಳುತ್ತಿದ್ದು ದಿಗ್ಬಂಧನವನ್ನು ಮುಂದುವರಿಸುವ ಅಮೆರಿಕದ ಯತ್ನ ವಿಫಲವಾಗಿದೆ. ಇದು ಸ್ನಾಪ್ಬಾಕ್ ಉಪಯೋಗಿಸಲು ಅಮೆರಿಕಕ್ಕೆ ಕಾರಣವಾಗಿತ್ತು.

ಅಮೆರಿಕದ ಕ್ರಮ ಹೊರ ಬಂದೊಡನೆ ಇರಾನ್ ಕರೆನ್ಸಿ ರಿಯಾಲ್‍ನ ಮೌಲ್ಯದಲ್ಲಿ ಭಾರೀ ಇಳಿಕೆಯಾಗಿದೆ.