ಇಂದು ಚುನಾವಣೆ: ಮುಂದಿನ ಅಮೆರಿಕ ಅಧ್ಯಕ್ಷರು ಯಾರು?

0
567

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ನ.3: ಅಮೆರಿಕ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು ಡೊನಾಲ್ಡ್ ಟ್ರಂಪ್ ಇನ್ನೊಂದು ಅವಧಿಗೆ ಮುಂದುವರಿಯುವರೇ, ಅಥವಾ ಅವರ ಪ್ರತಿಸ್ಪರ್ಧಿ ಜೊ ಬೈಡನ್ ಅಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲುವರೇ ಎಂಬುದು ತೀರ್ಮಾನವಾಗಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕ್ ಪಾರ್ಟಿ ಅಭ್ಯರ್ಥಿ. ಜೊಬೈಡನ್ ಡೆಮಕ್ರಾಟಿಕ್ ಪಾರ್ಟಿ ಅಭ್ಯರ್ಥಿಯಾಗಿದ್ದಾರೆ. ಪ್ರತಿಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ಇಬ್ಬರೂ ಅಭ್ಯರ್ಥಿಗಳು ಗೆಲ್ಲುವ ಕುರಿತು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೋ ಬೈಡನ್ ಯೋಜನೆಗಳು ಅಮೆರಿಕವನ್ನು ಜೈಲಾಗಿ ಬದಲಾಯಿಸಬಹುದು. ತೀವ್ರ ಎಡ ಕಲಹಕಾರರಿಗೆ ಅವರು ಬೆಂಕಿಯಿಡಲು, ಕೊಳ್ಳೆ ಹೊಡಲು ಸೌಕರ್ಯ ಮಾಡಿಕೊಡುವರೆಂದು ಟ್ರಂಪ್ ಟೀಕಿಸಿದರು. ಆದರೆ ದ್ವೇಷದ ಬೆಂಕಿಯನ್ನು ನಿಯಂತ್ರಿಸಲಾಗುವುದು ಎಂದು ಜನತೆಗೆ ಜೋ ಬೈಡನ್ ಭರವಸೆ ನೀಡಿದ್ದು ಟ್ರಂಪ್‍ಗೆ ಸ್ಥಾನದಿಂದ ಕೆಳಗಿಳಿಯುವ ಸಮಯ ಆಗಿದೆ ಎಂದು ಹೇಳಿದ್ದಾರೆ.

ಇಷ್ಟರಲ್ಲೇ 93 ದಶಲಕ್ಷ ಮಂದಿ ಮತದಾನ ಮಾಡಿಯಾಗಿದೆ. ಬೈಡನ್‍ರಿಗೆ ಟ್ರಂಪ್‍‌ಗಿಂತ ಮುನ್ನಡೆಯಿದೆ ಎಂದು ಮೊದಲ ಹಂತದ ಸೂಚನೆಗಳಿವೆ ಎಂದು ನಿರೀಕ್ಷಕರು ಹೇಳುತ್ತಿದ್ದಾರೆ. ಆದರೆ ಚುನಾವಣೆಯ ದಿನದ ಬಳಿಕ ಬರುವ ಟಪಾಲು ಮತಗಳ ಎಣಿಕೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ. ಬೈಡನ್‍ರಿಗೆ ಸ್ಪಷ್ಟ ಬಹುಮತ ಸಿಕ್ಕಿದರೆ ಇಂತಹ ಕಾನೂನು ಕ್ರಮದಿಂದ ಫಲಿತಾಂಶವನ್ನು ಬುಡಮೇಲುಗೊಳಿಸಲು ಆಗುವುದಿಲ್ಲ. ಆದ್ದರಿಂದ ಮತ ಹಾಕಲು ಯಾರೂ ಉದಾಸೀನ ತೋರಿಸಬೇಡಿ ಎಂದು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಮತದಾರರಿಗೆ ಮನವಿ ಮಾಡಿದ್ದಾರೆ.

ರಾಷ್ಟ್ರವಾದಿಗಳ ಮತ್ತು ಬಲಪಂಥೀಯರ ಸಂಪೂರ್ಣ ಬೆಂಬಲ ಟ್ರಂಪ್‍ಗಿದೆ. ಕಳೆದ ಚುನಾವಣೆಯಲ್ಲಿ ತನಗೆ ಬಹುಮತ ತಂದು ಕೊಟ್ಟ ರಾಜ್ಯಗಳು ಈ ಸಾರಿಯು ತನ್ನ ಜೊತೆ ನಿಲ್ಲುತ್ತದೆ ಎಂಬ ತುಂಬು ಭರವಸೆಯನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.

ನ್ಯೂನತೆಗಳನ್ನು ಬಹಿರಂಗವಾಗಿ ಎತ್ತಿತೋರಿಸುವ ಅಭಿಯಾನ ನಡೆಸುತ್ತಿರುವ ಲಿಂಕನ್ ಪ್ರಾಜೆಕ್ಟ್ ಒಕ್ಕೂಟ ಟ್ರಂಪ್‍ರಿಗೆ ದೊಡ್ಡ ಬೆದರಿಕೆಯಾಗಿದೆ. ಕೊರೋನ ಸಮಸ್ಯೆ ವಿಲೇವಾರಿಯಲ್ಲಿ ಟ್ರಂಪ್ ಸರಕಾರದಿಂದಾದ ಲೋಪ, ನಿರುದ್ಯೋಗ, ಜನಾಂಗೀಯ ದಾಳಿ ಇತ್ಯಾದಿ ಚುನಾವಣೆಯಲ್ಲಿ ಪ್ರಧಾನ ಚರ್ಚಾ ವಿಷಯವಾಗಿದೆ.