ಭಯೋತ್ಪಾದಕ ಪಟ್ಟಿಯಿಂದ ಸುಡಾನ್ ಹೆಸರು ತೆರವುಗೊಳಿಸಿದ ಅಮೆರಿಕ

0
365

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಭಯೋತ್ಪಾದಕರನ್ನು ಬೆಂಬಲಿಸುವ ದೇಶದ ಪಟ್ಟಿಯಿಂದ ಸುಡಾನ್ ದೇಶದ ಹೆಸರನ್ನು ಅಮೆರಿಕ ಅಧಿಕೃತವಾಗಿ ತೆರವುಗೊಳಿಸಿದೆಯೆಂದು ವರದಿಯಾಗಿದೆ. ಸೋಮವಾರದಿಂದ ಅಮೆರಿಕದ ನಿರ್ಧಾರ ಜಾರಿಗೊಳ್ಳಲಿದೆ. ಕಳೆದ 27 ವರ್ಷಗಳಿಂದ ಅಮೆರಿಕ ಸುಡಾನನ್ನು ಭಯೋತ್ಪಾದಕ ಪಟ್ಟಿಯಲ್ಲಿರಿಸಿತ್ತು. ಸೋಮವಾರ ಸುಡಾನಿನಲ್ಲಿರುವ ಅಮೆರಿಕನ್ ದೂತವಾಸವನ್ನು ಉದ್ಧರಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಟ್ರಂಪ್ ಸರಕಾರ ಸುಡಾನನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದೆಂದು ಈ ಹಿಂದೆಯೆ ಘೋಷಿಸಿತ್ತು.

ಇದಕ್ಕೆ ಸಂಬಂಧಿಸಿದ ಅಮೆರಿಕ ಕಾಂಗ್ರೆಸ್‍ನ 45 ದಿವಸಗಳ ಪ್ರಕಟಣೆ ಅವಧಿ ಕೊನೆಗೊಂಡಿತ್ತು. ಇಂದಿನಿಂದ ಸುಡಾನನ್ನು ಭಯೋತ್ಪಾದಕ ಪಟ್ಟಿಯಿಂದ ತೆರವುಗೊಳಿಸಲಾಗಿದೆ ಎಂದು ಅಮೆರಿಕ ಸ್ಟೇಟ್ ಕಾರ್ಯದರ್ಶಿ ಅಧಿಕೃತವಾಗಿ ಸಹಿಹಾಕಿದೆ ಎಂದು ಸುಡಾನ್ ದೂತವಾಸ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದೆ.

ಸುಡಾನಿನಲ್ಲಿ ಈಗ ಆಡಳಿತನಡೆಸುವ ಸರಕಾರವು ಸುಡಾನ್ ಅಮೆರಿಕದ ಭಯೋತ್ಪಾದಕ ಪಟ್ಟಿಯಿಂದ ಹೊರಗುಳಿಯುವುದಕ್ಕೆ ಮೊದಲ ಆದ್ಯತೆ ನೀಡಿತ್ತು. ಡೊನಾಲ್ಡ್ ಟ್ರಂಪ್ ಸರಕಾರ ಜನುವರಿಯಲ್ಲಿ ವೈಟ್ ಹೌಸ್‍ನಿಂದ ಹೊರಬರುವ ಮೊದಲೇ ತೀರ್ಮಾನವನ್ನು ಜಾರಿಗೊಳಿಸಿದೆ.