ನೇಪಾಳಿಯಂತೆ ನಟಿಸಲು ವಾರಣಾಸಿಯ ವ್ಯಕ್ತಿಗೆ 1,000 ರೂ. ನೀಡಿದ್ದ ಹಿಂದುತ್ವ ಸಂಘಟನೆ: ಪ್ರಕರಣ ಭೇದಿಸಿದ ಪೊಲೀಸರು

0
1437

ಸನ್ಮಾರ್ಗ ವಾರ್ತೆ

ವಾರಣಾಸಿ,ಜು.19: ನೇಪಾಳಿ ಎನ್ನಲಾದ ವ್ಯಕ್ತಿಯ ತಲೆ ಬೋಳಿಸಿ ಹಲ್ಲೆ ನಡೆಸಿದ ಪ್ರಕರಣದ ಹಿಂದಿನ ರಹಸ್ಯವನ್ನು ಭೇದಿಸುವಲ್ಲಿ ಇದೀಗ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.

ಜುಲೈ 16 ರಂದು ಚಿತ್ತಿಸಿದ ವಿಡಿಯೋದಲ್ಲಿ ನೇಪಾಳಿ ಪ್ರಜೆಗೆ ಹಿಂದುತ್ವ ಗುಂಪೊಂದು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆಯೂ, ‘ಪಿಕೆ ಒಲಿ ಮುರ್ದಾಬಾದ್’ ಹೇಳಿಸಿತ್ತು. ಈ ಘಟನೆಯಲ್ಲಿ ವಿಶ್ವ ಹಿಂದೂ ಸೇನಾದ ಕನ್ವೀನರ್ ಪಾಠಕ್ ಎಂಬಾತನು ನೇಪಾಳಿಗಳಿಗೆ ಈ ಗತಿ ಕಾಣಿಸುವ ಮೂಲಕ ನೇಪಾಳ ಪ್ರಧಾನಿಗೆ ಭಗವಾನ್ ಶ್ರೀ ರಾಮನ ಬಗ್ಗೆ ಮಾತನಾಡಲು ಧೈರ್ಯ ಬಾರದಂತೆ ಮಾಡಬೇಕು ಎಂದು ಕರೆ ನೀಡಿದ್ದನು.

ಈ ಘಟನೆಯು ತದನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಗೆ ಕಾರಣವಾಗಿತ್ತು. ಆದರೆ, ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ವಾರಣಾಸಿಯ ಸ್ಥಳೀಯ ವ್ಯಕ್ತಿಗೆ 1000 ರೂಪಾಯಿ ನೀಡಿ ತಾವು ಹೇಳಿದ ರೀತಿಯಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾಗಿ ವಿಚಾರಣೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಸಂತ್ರಸ್ತನಾದ ವ್ಯಕ್ತಿಯ ಗುರುತಿನ ಚೀಟಿ ಪರಿಶೀಲಿಸಿದ ಬಳಿಕ ಆತ ವಾರಣಾಸಿಯ ನಿವಾಸಿಯೆಂಬುದನ್ನು ಪೊಲೀಸರು ದೃಢೀಕರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಲೆ ಬೋಳಿಸಿದ ಕ್ಷೌರಿಕನ ಸಹಿತ ಆರು ಜನರನ್ನು ಬಂಧಿಸಿದ್ದು, ಮುಖ್ಯ ಆರೋಪಿ ಅರುಣ್ ಪಾಠಕ್ ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ಆತನ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.