ಅಮಿತ್ ಶಾ ರ‌್ಯಾಲಿಗೆ 8 ಅಡಿ ದೊಣ್ಣೆಯೊಂದಿಗೆ ಬನ್ನಿ- ಬಿಜೆಪಿ ನಾಯಕನ ವೀಡಿಯೊ ಬಹಿರಂಗ

0
531

ಕೊಲ್ಕತಾ,ಮೇ 17: ಬಿಜೆಪಿ ಅಧ್ಯಕ್ಷ ಅಮಿತ್ ಶಾರ ರ‌್ಯಾಲಿಯ ಬಳಿಕ ಕೊಲ್ಕತಾದಲ್ಲಿ ಗಲಭೆ ಸೃಷ್ಟಿಸಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಅದಕ್ಕೆ ಪೂರ್ವಸಿದ್ಧತೆ ನಡೆಸಲಾಗಿತ್ತು ಎಂಬುದಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನು ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ವೀಡಿಯೊದಲ್ಲಿ ಗಲಭೆಗೆ ಸಂಬಂಧಿಸಿದ ಸ್ಪಷ್ಟ ಪುರಾವೆಗಳಿವೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅಮಿತ್‍ ಶಾರ ರ‌್ಯಾಲಿಗೆ ವಾಟ್ಸಪ್ ಗ್ರೂಪ್ ಮಾಡಿ ಗಲಭೆಗೆ ಕರೆ ನೀಡಿದ್ದು ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಈತನ ವಿರುದ್ಧ 24 ಕ್ರಿಮಿನಲ್ ಕೇಸುಗಳು ಇವೆ-” ನಮ್ಮ ವಾಟ್ಸಪ್ ಗ್ರೂಪ್‍ನ ಎಲ್ಲರೂ ನಾಳೆ ಯಾವ ಬೆಲೆ ತೆತ್ತಾದರೂ ಗಲಭೆ ಸೃಷ್ಟಿಸಬೇಕು ಎಂದು ಕರೆ ನೀಡಿದ ವೀಡಿಯೊವನ್ನು ಈತ ಅಮಿತ್‍ ಶಾರ ರ‌್ಯಾಲಿಯ ಮುಂಚಿನ ದಿವಸ ವಾಟ್ಸಪ್ ಗ್ರೂಪ್‍ನಲ್ಲಿ ಹಾಕಿದ್ದಾನೆ.

“ಅಮಿತ್ ಶಾರಿಗೆ ನಾಳೆ ಒಂದು ಕಾರ್ಯಕ್ರಮ ಇದೆ. ರೋಡ್ ಶೋ. ನೀವು ಅದರಲ್ಲಿ ಪ್ರಧಾನ ಪಾತ್ರ ವಹಿಸುವವರಿದ್ದೀರಿ. ಪೊಲೀಸರನ್ನು ಮತ್ತು ತೃಣಮೂಲ ಗೂಂಡಾಗಳನ್ನು ಎದುರಿಸಲು ಎಂಟು ಅಡಿ ಉದ್ದದ ದೊಣ್ಣೆಯೊಂದಿಗೆ ಬನ್ನಿರಿ. ನಿಮ್ಮನ್ನೆಲ್ಲ ಈ ವಾಟ್ಸಪ್ ಗ್ರೂಪ್‍ಗೆ ಸೇರಿಸಿದ್ದು ಯಾಕೆಂದು ಗೊತ್ತಿದೆಯಲ್ಲ. ಹಾಗೆ ಮಾಡದಿದ್ದರೆ ಎಲ್ಲರನ್ನೂ ಹೊರ ಹಾಕುವೆ” ಹೀಗೆ 53 ಸೆಕೆಂಡಿನ ವೀಡಿಯೊದಲ್ಲಿ ರಾಕೇಶ್ ಸಿಂಗ್ ಹೇಳಿದ್ದಾನೆ. ಬಿಜೆಪಿ ಗಲಭೆಗೆ ಸಂಚು ನಡೆಸಿದ್ದು ಬಹಿರಂಗವಾದೊಡನೆ ವೀಡಿಯೊ ತನ್ನದೇ ಆದರೂ ಧ್ವನಿಯನ್ನು ತಿರುಚಲಾಗಿದೆ ಎಂದು ರಾಕೇಶ್ ಸಿಂಗ್ ಸ್ಪಷ್ಟೀಕರಣ ನೀಡಿದ್ದಾನೆ. ಧ್ವಜ ಕಟ್ಟಲು ಕೋಲನ್ನು ತರಲು ಹೇಳಿದ್ದೆ ಎಂದು ರಾಕೇಶ್ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ.