ಜನರ ಮನ ಗೆದ್ದ ಆ ಓಟ…: ಪೋಲಿಸರೊಬ್ಬರ ಪ್ರಾಮಾಣಿಕತೆಗೆ ಪ್ರಶಂಸೆಯ ಸುರಿಮಳೆ

0
1112

ಸನ್ಮಾರ್ಗ ವಾರ್ತೆ

ಹೈದರಾಬಾದ್: ಟ್ರಾಫಿಕ್ ಬ್ಲಾಕ್‌ನಲ್ಲಿ ಸಿಲುಕಿದ ಆ್ಯಂಬುಲೆನ್ಸ್ ಗೆ ಸುಗಮ ಸಂಚಾರ ಒದಗಿಸಲು ಪೋಲೀಸ್ ಪೇದೆಯೊಬ್ಬ ಎರಡು ಕಿಲೋ ಮೀಟರ್ ದೂರ ಓಡಿರುವ ದೃಶ್ಯವೊಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಹೈದರಾಬಾದ್‌ನ ಕೋಟಿ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದೆ.

ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯನ್ನು ಹೊತ್ತು ಸಾಗಿದ ಆ್ಯಂಬುಲೆನ್ಸ್‌ವೊಂದು ಟ್ರಾಫಿಕ್ ಬ್ಲಾಕ್ ನಲ್ಲಿ ಸಿಲುಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಡುತ್ತಾ ಪೋಲೀಸರೊಬ್ಬರು ಸುಮಾರು ಎರಡು ಕಿಲೋ ಮೀಟರ್ ದೂರ ಓಡಿದ್ದಾರೆ. ಈ ಪ್ರಶಂಸೆಗೆ ಪಾತ್ರರಾಗಿದ್ದು ಟ್ರಾಫಿಕ್ ಕಾನ್ಸ್‌ಟೇಬಲ್ ಜಿ. ಬಾಬ್‌ಜಿ. ಆ್ಯಂಬುಲೆನ್ಸ್‌ನೊಳಗಿರುವ ಓರ್ವ ವ್ಯಕ್ತಿ ಈ ವಿಡಿಯೋ ಚಿತ್ರೀಕರಿಸಿ ಅಭಿನಂದನೆ ಸಲ್ಲಿಸುತ್ತಾ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.

ಕಳೆದ ಸೋಮವಾರ ಘಟನೆ ನಡೆದಿದ್ದರೂ ಎರಡು ದಿನದ ಬಳಿಕವಾಗಿತ್ತು ಬಾಬ್‌ಜಿ ಓಡುತ್ತಿರುವ ದೃಶ್ಯ ವೈರಲಾಗಿದ್ದು, ಹಲವಾರು ಗಣ್ಯರು ಈ ಕಾರ್ಯವೈಖರಿಯನ್ನು ಅಭಿನಂದಿಸಿದ್ದಾರೆ. ಆಡಿಷನಲ್ ಪೋಲೀಸ್ ಕಮಿಷನರ್ (ಟ್ರಾಫಿಕ್ ) ಅನಿಲ್ ಕುಮಾರ್ ಈ ವಿಡಿಯೋ ಟ್ವೀಟ್ ಮಾಡುವ ಮೂಲಕ ಬಾಬ್‌ಜಿಯನ್ನು ಪ್ರಶಂಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ಪೋಲೀಸ್ ಪೇದೆಯ ಪ್ರಾಮಾಣಿಕತೆಗೆ ಜನರು ಪ್ರತಿಕ್ರಿಯಿಸಿದ್ದು, ‘ಲಾಠಿ ಹಿಡಿದು ಭಯಪಡಿಸಲಷ್ಟೇ ಅಲ್ಲ ಪೋಲೀಸರು, ಈ ರೀತಿಯ ಮಾನವೀಯ ಕಾರ್ಯಗಳನ್ನು ಮಾಡುವ ಪೋಲೀಸರೂ ಇದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.