ವಲಸಿಗರನ್ನು ಮನೆಗೆ ಕಳುಹಿಸುವ ಕೆಲಸವನ್ನು ಇನ್ನೂ ಉತ್ತಮವಾಗಿ ನಿರ್ವಹಿಸಬಹುದಿತ್ತು: ಕೇಂದ್ರ ಸರಕಾರದ ವಿಫಲತೆಯನ್ನು ಒಪ್ಪಿಕೊಂಡ NITI ಆಯೋಗ್ ಸಿಇಒ ಅಮಿತಾಭ್ ಕಾಂತ್

0
605

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ.23:ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹಳಷ್ಟು ಕೆಲಸಗಳನ್ನು ಮಾಡಬಹುದಿತ್ತು ಎಂದು NITI ಆಯೋಗ್ ಸಿಇಒ ಅಮಿತಾಬ್ ಕಾಂತ್ ಶುಕ್ರವಾರ ಎನ್‌ಡಿಟಿವಿಗೆ ತಿಳಿಸಿದ್ದಾರೆ.

“ಲಾಕ್ ಡೌನ್ ಕಾರಣದಿಂದಾಗಿ ಕೊರೋನಾ ಹರಡುವುದನ್ನು ತಡೆಯುವಲ್ಲಿ ನಾವು ಸಾಕಷ್ಟು ಮಟ್ಟಿಗೆ ಯಶಸ್ವಿಯಾಗಿದ್ದೇವೆ, ಆದರೆ ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ” ಎಂದು ಅವರು ಒಪ್ಪಿಕೊಂಡರು.

‘ವಲಸಿಗರ ಸಮಸ್ಯೆಗಳು ಹಲವು ವರ್ಷಗಳಿಂದ ಸವಾಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಾವು ಅವರಿಗೆ ಕಾನೂನುಗಳನ್ನು ರೂಪಿಸಿದ್ದೇವೆ. ಪ್ರತಿಯೊಬ್ಬ ಕಾರ್ಮಿಕನನ್ನೂ ನೋಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಭಾರತದಂತಹ ದೊಡ್ಡ ದೇಶದಲ್ಲಿ ಕೇಂದ್ರದ ಆಡಳಿತಕ್ಕೆ ಸಂಬಂಧಿಸಿದ ಸರಕಾರದ ಪಾತ್ರ ಸೀಮಿತವಾಗಿದೆ. ಇದು ಒಂದು ಸವಾಲಾಗಿತ್ತು. ಈ ವಿಷಯದಲ್ಲಿ ಸ್ಥಳೀಯ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ನಾವು ವಲಸೆ ಕಾರ್ಮಿಕರ ಸಮಸ್ಯೆಯನ್ನು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತೆಂದು ನಾನು ಭಾವಿಸುತ್ತೇನೆ” ಎಂದು ಅವರು ನುಡಿದರು.

ಲಾಕ್‌ಡೌನ್ ಕಾರಣದಿಂದಾಗಿ ಕೆಲಸ ನಿಂತು ಹೋಯಿತು‌. ಇತರ ರಾಜ್ಯಗಳಲ್ಲಿ ಕೆಲಸಕ್ಕೆ ಹೋದ ಕಾರ್ಮಿಕರು ಮತ್ತು ಇತರ ಪ್ರದೇಶಗಳಿಗೆ ಸೇರಿದ ಕಾರ್ಮಿಕರು ಅಲ್ಲಲ್ಲಿ ಸಿಲುಕಿಕೊಂಡರು. ಹಣವು ಮುಗಿದು ನಂತರ ಆಹಾರ ಬಿಕ್ಕಟ್ಟು ಸೃಷ್ಟಿಯಾದಾಗ ವಲಸಿಗರು ಮನೆಗೆ ಮರಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.

ಆದರೆ, ರಾಜ್ಯಗಳ ಒಪ್ಪಿಗೆಯ ನಂತರವಷ್ಟೇ, ಕೇಂದ್ರ ಸರಕಾರವು ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿತು, ಆದರೆ ಈ ವ್ಯವಸ್ಥೆಯೂ ಅಸಮರ್ಪಕವಾಗಿತ್ತು. ಕಾರ್ಮಿಕರು ಕಾಲ್ನಡಿಗೆಯಲ್ಲಿ ಮತ್ತು ಇತರ ವಿಧಾನಗಳಿಂದ ತಮ್ಮ ತಾಯ್ನಾಡಿನತ್ತ ಸಾಗಲು ಪ್ರಾರಂಭಿಸಿದರು ಮತ್ತು ಒಂದರ ನಂತರ ಒಂದರಂತೆ ರಸ್ತೆ ಅಪಘಾತಗಳಲ್ಲಿ ಡಜನ್‌ಗಟ್ಟಲೆ ಕಾರ್ಮಿಕರು ಸಾವನ್ನಪ್ಪಿದ ವರದಿಗಳು ಬಂದವು ಎಂದು ಅವರು ಹೇಳಿದರು.

ರಸ್ತೆ ಅಪಘಾತದ ಹೆಚ್ಚುತ್ತಿರುವ ಗ್ರಾಫ್ ನೋಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಲಸಿಗರು ಕಾಲ್ನಡಿಗೆಯಲ್ಲಿ ಮತ್ತು ಬೇರೆ ಯಾವುದೇ ವಿಧಾನಗಳಿಂದ ಮನೆಗೆ ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿವೆ. ಉತ್ತರ ಪ್ರದೇಶದ ಔರಯಾದ ರಸ್ತೆ ಅಪಘಾತದ ನಂತರ, ಕ್ಯಾಬಿನೆಟ್ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿ ವಲಸಿಗರಿಗೆ ರೈಲು ಮತ್ತು ಬಸ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. ಪ್ರಸ್ತುತ, ಎಲ್ಲಾ ರಾಜ್ಯಗಳ ಪೊಲೀಸರು ವಲಸಿಗರನ್ನು ಕಾಲ್ನಡಿಗೆ ಹೋಗುವುದನ್ನು ನಿಲ್ಲಿಸಿ ಬಸ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡುತ್ತಿದ್ದಾರೆ. ಎಂದು ಅವರು ಹೇಳಿದರು.