ಜಾನುವಾರು ವ್ಯಾಪಾರಿ ಮತ್ತು ಸಾಕಲು ದನಕರು ಸಾಗಿಸುವ ದಲಿತನ ಮೇಲಾದ ಹಲ್ಲೆಗಳು ಸರಕಾರದ ವೈಫಲ್ಯಗಳನ್ನು ಅಡಗಿಸಲಿರುವ ಪ್ಯಾಸಿಸ್ಟ್ ತಂತ್ರದ ಹುನ್ನಾರಗಳು ಮಾತ್ರ: ವೆಲ್ಫೇರ್ ಪಾರ್ಟಿ ಆರೋಪ

0
577

ಸನ್ಮಾರ್ಗ ವಾರ್ತೆ

ಮಂಗಳೂರು: ಕಳೆದ ದಿನಗಳಲ್ಲಿ ನಡೆದ ಕೆಲವು ಅಹಿತಕರ ಘಟನೆಗಳು, ಅದರಲ್ಲಿಯೂ ಮುಖ್ಯವಾಗಿ, ಸರಕಾರದಿಂದ ಮಾರಾಟ ಪರವಾನಿಗೆ, ಖರೀದಿಸಿದ ದಾಖಲೆಗಳನ್ನು ಇತ್ಯಾದಿ ಎಲ್ಲವನ್ನೂ ಹೊಂದಿದ್ದ ಜೋಕಟ್ಟೆಯ ಜಾನುವಾರು ವ್ಯಾಪಾರಿಯು ಎಮ್ಮೆಗಳನ್ನು ಸಾಗಿಸುವ ವೇಳೆ, ಸಂಘ ಪರಿವಾರ ಮಾಡಿದ ಅಮಾನವೀಯ ಹಲ್ಲೆ ನಡೆಯಿತು. ಅದೇ ರೀತಿಯಲ್ಲಿ, ಸುಳ್ಯದಲ್ಲಿ ಸಾಕಣೆಯ ಉದ್ದೇಶಕ್ಕಾಗಿ ದನಕರುಗಳನ್ನು ಸಾಗಿಸುವ ದಲಿತ ವ್ಯಕ್ತಿಯ ಮೇಲೆ ಹಲ್ಲೆಯನ್ನೆಸಗಿದರು. ಇವೆರಡು ಪ್ರಕರಣಗಳು ಕೇವಲ ಪುಂಡರ ಕೃತ್ಯವಾಗಿ ಕಾಣುವುದಾಗಲಿ ಅಥವಾ ದುಷ್ಕರ್ಮಿಗಳ ಅಟ್ಟಹಾಸ ಎಂಬ ಶಿರೋನಾಮೆಯಲ್ಲಿ ಓದಿ ಮುಗಿಸುವ ವಿಷಯಗಳು ಮಾತ್ರವಾಗಿರದೆ, ಇದರ ಹಿಂದೆ ಪ್ರಭುತ್ವದ ವಕ್ತಾರರ ಕಾಣದ ಕೈಗಳು ಸಕ್ರಿಯವಾಗಿವೆ ಎಂದು ವೆಲ್ಪೇರ್ ಪಾರ್ಟಿ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು ಆರೋಪಿಸಿದರು.

ಇಂದು ಕೇಂದ್ರ ಮತ್ತು ನಮ್ಮ ರಾಜ್ಯದಲ್ಲಿರುವ ಪ್ಯಾಸಿಸ್ಟ್ ಪೀಡಿತ ಸರಕಾರವು ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಾಗಲಿ, ಹದಗೆಟ್ಟ ಆರ್ಥಿಕತೆಯನ್ನು ಸರಿಪಡಿಸುವಲ್ಲಾಗಲಿ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಇದು ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಮತ್ತೆ ಕೋಮುವಾದಿ ಸಂಘರ್ಷ ಮತ್ತು ಮತೀಯ ಸೂಕ್ಷ್ಮ ವಿಚಾರಗಳತ್ತ ಸೆಳೆಯಲು ಮಾಡಿರುವ ಅಕ್ಷಮ್ಯ ಹುನ್ನಾರದ ಭಾಗವಾಗಿದೆ ಎಂಬ ವಾಸ್ತವಗಳನ್ನು ಶಾಂತಿ ಮತ್ತು ಸೌಹಾರ್ದಪ್ರಿಯರಾದ ರಾಜ್ಯದ ಜನತೆ ಅರಿತುಕೊಳ್ಳಬೇಕಾಗಿದೆ.

ಮೇಲ್ಜಾತಿ ಪಾರಮ್ಯತೆಯನ್ನು ಮೆರೆಯುವ ಸವರ್ಣಶಾಹಿ ರಾಜಕೀಯತೆಯ ಹಾಗೂ ಭಾಜಪ ಸರಕಾರದ ಸ್ವಾರ್ಥಹಿತಾಸಕ್ತಿಗಳ ಬಲಿಪಶುಗಳಾಗದೆ, ಇವರ ಪಿತೂರಿಗಳ ಬಗ್ಗೆ ಬಹಳ ಜಾಗೃತರಾಗಿದ್ದುಕೊಂಡು ಅನ್ಯಾಯಕ್ಕೆ ಒಳಗಾದ ಶೋಷಿತರ ಪರವಾಗಿ ಒಗ್ಗಟ್ಟಿನ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂಬುವುದಾಗಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.