ಈದುಲ್ ಫಿತ್ರ್ ಎಂದರೇನು?

0
569

ಶಮೀರ್ ಬಾಬು ಕೆ.

ಈದುಲ್ ಫಿತ್ರ್ ಎಂದರೇನು? ಅದರ ಉದ್ದೇಶ ಮತ್ತು ಗುರಿಯೇನು? ವರ್ಷಂಪ್ರತಿ ಈ ಹಬ್ಬವನ್ನು ಯಾಕೆ ನಿಶ್ಚಯಿಸಲಾಗಿದೆ? ರಮಝಾನ್ ತಿಂಗಳು ಹಾಗೂ ಈದುಲ್ ಫಿತ್ರ್‍ನ ನಡುವೆ ಇರುವ ಸಂಬಂಧವೇನು? ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾದ ನಡುವೆ ಸಂಬಂಧವಿದೆಯೇ? ಈದುಲ್ ಫಿತ್ರ್‍ನ ಕುರಿತು ಯೋಚಿಸುವಾಗ ಇಂತಹ ಪ್ರಶ್ನೆಗಳು ಮನದಲ್ಲಿ ಮೂಡುತ್ತದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಪ್ರಯತ್ನವೇ ಈ ಲೇಖನ.

ಪರಿಪೂರ್ಣ ವ್ಯಕ್ತಿತ್ವ ರೂಪೀಕರಣ ಹಾಗೂ ಶಾಂತಿಯುತ ರಾಷ್ಟ್ರದ ನಿರ್ಮಾಣವು ಮಾನವನ ಸರ್ವಕಾಲದ ಕನಸಾಗಿದೆ. ಪ್ಲಾಟೋನ ‘ರಿಪಬ್ಲಿಕ್’, ಥೋಮಸ್ ಮೂರ್‍ರ ‘ಉಡೊಪು’, ಫಾರಾಬಿಯ ‘ಅಲ್ ಮದೀನತುಲ್ ಫಾದಿಲ’ ಎಂಬ ಕೃತಿಗಳು ಇಂತಹ ಕಲ್ಪನೆಗಳ ಪ್ರಕಾಶನವಾಗಿತ್ತು. ದೇವಗ್ರಂಥಗಳ ಸಾರಾಂಶ ಹಾಗೂ ಪ್ರವಾದಿಗಳಿಗೆ ಲಭಿಸಿದ ದೇವಸಂದೇಶಗಳ ಒಟ್ಟು ಸಾರ ಒಂದು ಸುಂದರ ಲೋಕದ ಸೃಷ್ಟಿಯಾಗಿತ್ತು. ಉನ್ನತ ವ್ಯಕ್ತಿತ್ವ ನಿರ್ಮಾಣ ಹಾಗೂ ಸ್ವಸ್ಥ ಸಮಾಜದ ನಿರ್ಮಾಣವು ಮನುಷ್ಯನ ಸಹಜ ಪ್ರಕೃತಿಯಾಗಿದೆ. ಆದ್ದರಿಂದಲೇ ವ್ಯಕ್ತಿ ಹಾಗೂ ರಾಷ್ಟ್ರಗಳು ಹಾದಿ ತಪ್ಪುವಾಗ ಮಾನವ ಗಾಬರಿಗೊಳ್ಳುತ್ತಾನೆ.

ಇಸ್ಲಾಮ್ ದೇವನ ಶಾಸನವಾಗಿದೆ. ಅದರೊಂದಿಗೆ ಪ್ರಾಯೋಗಿಕ ರೂಪವೂ ಆಗಿದೆ. ವ್ಯಕ್ತಿತ್ವ ಹಾಗೂ ಸ್ವಸ್ಥ ಸಮಾ ಜದ ನಿರ್ಮಾಣದ ಕುರಿತು ಇಸ್ಲಾಮಿಗೆ ಸ್ಪಷ್ಟವಾದ ನಿಲುವಿದೆ. ಉನ್ನತ ವ್ಯಕ್ತಿತ್ವವನ್ನು ರೂಪಿಸಿ, ವಿಶ್ವವನ್ನು ನ್ಯಾಯಪೂರ್ಣ ವ್ಯವಸ್ಥೆಯೆಡೆಗೆ ಇಸ್ಲಾಮ್ ಕರೆದೊಯ್ಯುತ್ತದೆ. ‘ಅಲ್ಲಾಹನಲ್ಲದೇ ಬೇರೆ ಆರಾಧ್ಯರಿಲ್ಲ. ಪ್ರವಾದಿ ಮುಹಮ್ಮದ್(ಸ)ರು ಅಲ್ಲಾಹನ ಪ್ರವಾದಿಯಾಗಿದ್ದಾರೆ’ ಎಂಬ ಆದರ್ಶದೊಂದಿಗೆ ಈ ಆಶಯವನ್ನು ಪೂರ್ತಿಗೊಳಿಸುತ್ತದೆ. ಇಸ್ಲಾಮಿನ ಪ್ರಥಮ ತತ್ವವೇ ದೇವನ ಅಸ್ತಿತ್ವ. ಅವನೋರ್ವನೇ, ದೇವನೆಂಬ ವಾಸ್ತವಿಕತೆ ಯೊಂದಿಗೆ ಆತನೊಬ್ಬನೇ ಎಂಬುದು ಮೂಲಭೂತ ವಿಶ್ವಾಸವಾಗಿದೆ. ದೇವನಿಂದ ಆರಂಭಗೊಂಡು, ದೇವನೆಡೆಗೆ ಪಯಣಿಸಿ, ದೇವನ ಬಳಿ ಮುಕ್ತಾಯವಾಗುವುದೇ ಈ ಜೀವನ. ದೇವನು ಸಂಪೂರ್ಣ ಅಸ್ತಿತ್ವವಾಗಿದ್ದಾನೆ. ಸರ್ವ ಸಾಮಥ್ರ್ಯಗಳನ್ನೊಳಗೊಂಡು ಪ್ರಬಲನೂ ಯುಕ್ತಿಪೂರ್ಣನೂ ಆಗಿದ್ದಾನೆ. ದೇವನನ್ನು ಅಂಗೀ ಕರಿಸಿ ಅವನ ಆದೇಶಗಳನ್ನು ಅನುಸರಿಸಿ, ಜೀವನವನ್ನು ಪಾವನ ಗೊಳಿಸುವುದರಲ್ಲೇ ಮನುಷ್ಯನ ಪೂರ್ಣ ವ್ಯಕ್ತಿತ್ವವು ಸೇರಿಕೊಳ್ಳುತ್ತದೆ.

‘ಮುಹಮ್ಮದ್(ಸ) ಅಲ್ಲಾಹನ ಪ್ರವಾದಿಯಾಗಿದ್ದಾರೆ’ ಎಂಬುದು ಎರಡನೇ ವಾಕ್ಯ. ದೇವನ ಸಂದೇಶವಾಹಕರೇ ಇಲ್ಲಿನ ಮುಖ್ಯ ವಿಚಾರ. ಮುಸ್ಲಿಮರಿಗೆ ಸಂಬಂಧಿಸಿದಂತೆ ಮುಸ್ಲಿಮರ ಸಂಪೂರ್ಣ ವ್ಯಕ್ತಿತ್ವದ ಮಾದರಿಯಾಗಿರುವುದು ಪ್ರವಾದಿ(ಸ). ಅವರು ಮಾನವನೆಂಬ ನೆಲೆಯಲ್ಲಿ ಅತ್ಯಂತ ಉತ್ತಮ ಸ್ವಭಾವದ ಒಡೆಯರಾಗಿದ್ದರು. ‘ನಿಶ್ಚಯವಾಗಿಯೂ ನೀವು ಅತ್ಯುನ್ನತ ಚಾರಿತ್ರ್ಯವಂತರಾಗಿದ್ದೀರಿ’ ಎಂದು ಪವಿತ್ರ ಕುರ್‍ಆನ್ ಪ್ರವಾದಿ(ಸ) ಯವರ ಕುರಿತು ಹೇಳಿದೆ. ಮೂರು ರೀತಿಯ ಸ್ವಭಾವಗಳು ಓರ್ವ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತದೆ. ಒಂದು- ಆಧ್ಯಾತ್ಮಿಕತೆ, ಸಮರ್ಪಣೆ (ಇಸ್ಲಾಮ್), ವಿಶ್ವಾಸ (ಈಮಾನ್), ಆತ್ಮಾರ್ಥತೆ (ಇಖ್‍ಲಾಸ್), ಒಳಿತು (ಇಹ್ಸಾನ್), ಸ್ಮರಣೆ (ದಿಕ್ರು¯್ಲÁ), ಭಯಭಕ್ತಿ (ತಖ್ವಾ), ಸಾಕ್ಷ್ಯ (ಶಹಾದತ್) ಎಂಬುದು ಆಧ್ಯಾತ್ಮಿಕ ಸ್ವಭಾವದ ಉದಾಹರಣೆಯಾಗಿದೆ. ವಿಶ್ವಾಸಕ್ಕೆ ಸಂಬಂಧಿಸಿದ ಸ್ವಭಾವಗಳೆಂದು ಅದನ್ನು ಹೇಳಲಾಗುತ್ತದೆ. ಇನ್ನೊಂದು ವೈಯಕ್ತಿಕ ವಿಚಾರ. ಅವು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದೆ. ಇಚ್ಛಾಶಕ್ತಿ, ಸಂಯಮ, ಕರ್ತವ್ಯ ನಿಷ್ಠೆ, ಜೀವನೋ ತ್ಸಾಹ, ಸಂತುಲಿತತೆ, ಸಕಾರಾತ್ಮತೆ, ಶಿಸ್ತು ಇವುಗಳು ಅದಕ್ಕೆ ಉದಾಹರಣೆಯಾಗಿದೆ. ಮೂರು- ಮಾನವೀಯತೆ, ಓರ್ವ ಮನುಷ್ಯ ಇನ್ನೊಬ್ಬನೊಂದಿಗೆ ವ್ಯವಹರಿಸು ವಾಗ ಪಾಲಿಸಬೇಕಾದ ಗುಣಗಳು, ಸ್ನೇಹ, ಸಮಾನತೆ, ಸಹೋದರತೆ, ನ್ಯಾಯ, ಸ್ವಾತಂತ್ರ್ಯ, ಕರುಣೆ, ವಿಶ್ವಾಸಾರ್ಹತೆ ಯಂತಹವುಗಳು ಇದಕ್ಕೆ ಉದಾಹರಣೆ. ಪ್ರವಾದಿ ಮುಹಮ್ಮದ್(ಸ)ರಲ್ಲಿ ಈ ಮೂರು ರಂಗದಲ್ಲಿರುವಂತಹ ಎಲ್ಲ ಗುಣಗಳೂ ಅತ್ಯುತ್ಕೃಷ್ಟ ಮಟ್ಟದಲ್ಲಿ ಸಂತುಲಿತ ರೀತಿಯಲ್ಲಿ ಸಮ್ಮಿಳಿತವಾಗಿದ್ದವು.

ಒಳಿತು ಮನುಷ್ಯನ ಸಹಜ ಪ್ರಕೃತಿಯಾಗಿದೆ. ಮಾನವನನ್ನು ದೇವನು ಶುದ್ಧ ಪ್ರಕೃತಿಯಲ್ಲಿ ಸೃಷ್ಟಿಸಿದ್ದಾನೆ. ಮನುಷ್ಯನಿಗೆ ಅಲ್ಲಾಹನ ವರ್ಣವಿದೆ. ಹಾಗಿದ್ದರೂ ಆಶೆ, ವ್ಯಾಮೋಹ ಪರಿಸ್ಥಿತಿಯ ಒತ್ತಡ ಗಳಿಂದ ಮನುಷ್ಯರು ಕೆಡುಕಿನೆಡೆಗೆ ಸಾಗುವ ಸಾಧ್ಯತೆ ಹೆಚ್ಚಾಗಿದೆ. ಮನಸ್ಸು ಕೆಡುಕಿನೆಡೆಗೆ ಸಾಗದಿರಬೇಕಾದರೆ ಒಳ್ಳೆಯ ಇಚ್ಛಾಶಕ್ತಿ ಇರಬೇಕು. ಉಪವಾಸವು ಇಚ್ಛಾಶಕ್ತಿಯನ್ನು ಮುಸ್ಲಿಮರಿಗೆ ನೀಡುತ್ತದೆ. ಇಚ್ಛಾಶಕ್ತಿ ಪಡೆಯುವುದರೊಂದಿಗೆ ಪಾಪಗಳು, ದೌರ್ಬಲ್ಯಗಳನ್ನು ತೊಳೆದು ಹೃದಯ ಶು ದ್ಧಿಗೊಳಿಸಬೇಕು. ಒಳಿತನ್ನು ಕ್ಲಪ್ತವಾಗಿ ಮಾಡಬೇಕು. ಅದರ ಸಂಪೂರ್ಣತೆಗೆ ತಲುಪಬೇಕು. ಆಧ್ಯಾತ್ಮಿಕ, ವೈಯಕ್ತಿಕ ಹಾಗೂ ಮಾನವೀಯತೆಯ ಸಕಲ ಗುಣಗಳು, ಒಳಿತುಗಳನ್ನು ಅರಿತು ಅದರಂತೆ ನಮ್ಮ ಬದುಕು ರೂಪಿಸಬೇಕು. ಆಗ ಸಂಪೂರ್ಣ ಮುಸ್ಲಿಮ್ ಹುಟ್ಟಿ ಬರುತ್ತಾನೆ. ರಮಝಾನ್ ಇದಕ್ಕೆ ಸುವರ್ಣಾವಕಾಶವಾಗಿದೆ. ರಮಝಾನ್ ಉಪವಾಸ ಮುಗಿಯುವಾಗ ಮುಸ್ಲಿಮ್ ಇಂತಹ ಉನ್ನತಿಗೆ ತಲುಪುತ್ತಾನೆ. ರಮಝಾನ್ ಪ್ರಬುದ್ಧ ಮುಸ್ಲಿಮರನ್ನೂ ಉತ್ತಮ ಸಮುದಾಯವನ್ನೂ ಸೃಷ್ಟಿಸುವ ಕರೆ ನೀಡುತ್ತದೆ.

ನಮ್ಮ ವ್ಯಕ್ತಿತ್ವವನ್ನು ಸಂಸ್ಕರಿಸಲು ರಮಝಾನ್ ಅನುಕೂಲ ವಾತಾವರಣ ಮಾಡಿಕೊಡುತ್ತದೆ. ಅದರಲ್ಲಿ ಮುಖ್ಯ ವಾದುದು ಆತ್ಮ ನಿಯಂತ್ರಣ. ಅದರಲ್ಲಿ ಮುಖ್ಯವಾಗಿ ಮೂರು ಘಟಕಗಳಿವೆ. ಅಮಿತ ಆಹಾರ, ಅಮಿತ ಲೈಂಗಿಕತೆ ಮತ್ತು ಅಮಿತ ನಿದ್ದೆ. ಅದು ಬದುಕಿನ ಏಳಿಗೆಗೆ ಅನಿವಾರ್ಯವಾದರೂ ಅದು ಅತಿಯಾದರೆ ಜೀವನವೇ ಬುಡಮೇಲಾಗುತ್ತದೆ. ನಂತರ ಜೀವನವು ಆಲಸ್ಯ, ಉದಾಸೀ ನತೆಯ ಪ್ರತೀಕವಾಗುತ್ತದೆ. ಪೂರ್ಣ ಮುಸ್ಲಿಮನಾಗುವ ವಿಚಾರ ಬಿಡಿ, ಪ್ರಾಥಮಿಕ ಜವಾಬ್ದಾರಿಯನ್ನು ನಿರ್ವಹಿಸಲೂ ಲೌಕಿಕ ವ್ಯಾಮೋಹಗಳ ದಾಸರಾದವರಿಗೆ ಸಾಧ್ಯ ವಾಗುವುದಿಲ್ಲ. ಉಪವಾಸವು ಈ ಮೂರು ವಿಷಯಗಳಲ್ಲಿ ನಿಯಂತ್ರಣ ತಂದು ಸಂತು ಲಿತ ರೀತಿಯೆಡೆಗೆ ಅದನ್ನು ಒಯ್ಯುತ್ತದೆ. ಈ ಪ್ರಕ್ರಿಯೆ ಪ್ರತಿವರ್ಷವೂ ಮುಂದುವರಿಯುತ್ತಿರಬೇಕು.

ಮುಸ್ಲಿಮ್ ಸಂಪೂರ್ಣ ಮುಸ್ಲಿಮ್ ಆಗುವ ಕನಸು ನನಸಾದ ಸಂಭ್ರಮಾಚರ ಣೆಯೇ ಈದುಲ್ ಫಿತ್ರ್. ಅಂದು ಮುಸ್ಲಿಮ್ ಆಧ್ಯಾತ್ಮಿಕತೆಯ ಅನುಭೂತಿ ಯಲ್ಲಿರುತ್ತಾನೆ. ಆಧ್ಯಾತ್ಮಿಕ ಮೌಲ್ಯಗಳನ್ನು ರಮಝಾನ್ ಎಂಬ ಪಾಠಶಾಲೆಯಿಂದ ಅರಗಿಸಿಕೊಂಡಿರುತ್ತಾನೆ. ಉತ್ತಮ ಸ್ವಭಾವ ಗಳನ್ನು ಮೈಗೂಡಿಸಿಕೊಂಡಿರುತ್ತಾನೆ. ಮುಸ್ಲಿಮರ ವ್ಯಕ್ತಿತ್ವವು ಆಕರ್ಷಕವಾಗಿ ರುತ್ತದೆ. ಮಾತಿನಿಂದ ವರ್ಣಿಸಲಾಗದ ಸಂತೋಷದ ಸಂದರ್ಭವದು. ದೇವನಿಗೆ ಹಾಗೂ ಅವನಿಗೆ ಮಾತ್ರವೇ ಆ ವಿಚಾರ ತಿಳಿದಿರುತ್ತದೆ. ಈದ್‍ನ ಸುದಿನದಿಂದ ಮುಸ್ಲಿಮರ ಕಂಠನಾಳದಿಂದ ಹೊರಬರುವ ತಕ್ಬೀರ್‍ನ ಧ್ವನಿಗಳು ಆ ಸಂತೋಷದ ಪ್ರತಿಧ್ವನಿಗಳಾಗಿವೆ. ಮುಸ್ಲಿಮ್ ಸಮುದಾಯವೆಂಬ ನೆಲೆಯಲ್ಲೂ ಈದುಲ್ ಫಿತ್ರ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇಂತಹ ಪೂರ್ಣ ವ್ಯಕ್ತಿಗಳು ಒಂದಾಗುವಾಗ ಸಮುದಾಯ (ಉಮ್ಮತ್) ರೂಪುಗೊಳ್ಳುತ್ತದೆ. ಸಂಪೂರ್ಣ ಮುಸ್ಲಿಮನ ಹುಟ್ಟಿನಂತೆ ಸಂಪೂರ್ಣತೆಯ ಉಮ್ಮತ್‍ನ ಹುಟ್ಟು ಕೂಡಾ ಈದುಲ್ ಫಿತ್ರ್‍ನಿಂದಾಗುತ್ತದೆ. ಒಂದು ತಿಂಗಳಿನಿಂದ ಗಳಿಸಿದ ಉನ್ನತ ವ್ಯಕ್ತಿತ್ವಗಳ ಸಂಗಮವಾದ ಮುಸ್ಲಿಮ್ ಸಮೂಹವು ವಿಶ್ವದ ಪುನರ್ ನಿರ್ಮಾ ಣಕ್ಕೂ ಶಾಂತಿಯುತ ದೇಶದ ನಿರ್ಮಾಣಕ್ಕೂ ಸನ್ನದ್ಧವಾಗುತ್ತದೆ. ಏಕೆಂದರೆ, ಅವರಲ್ಲಿ ಅದಕ್ಕೆ ಅಗತ್ಯವಾದ ಎಲ್ಲ ಯೋಗ್ಯತೆಗಳೂ ರಮಝಾನ್‍ನಿಂದ ದೊರೆತಿರುತ್ತದೆ. ಧ್ಯಾನದಿಂದ ಕರ್ಮ ಭೂಮಿಗೆ ಸಾಗುವ ದಿನವಾಗಿದೆ ಈದುಲ್ ಫಿತ್ರ್. ನಿನ್ನೆಯ ವರೆಗೆ ಸಮುದಾಯದ ಆಹಾರ ಮೌನವಾಗಿತ್ತು. ನಾಳೆಯಿಂದ ಉಮ್ಮತ್‍ನ ಆಹಾರ ಹೋರಾಟವಾಗಿದೆ. ನಿನ್ನೆಯವರೆಗೆ ಮಸೀದಿಯು ಸಮುದಾ ಯದ ವಸತಿ ಕೇಂದ್ರವಾಗಿತ್ತು. ನಾಳೆ ಯಿಂದ ಬೀದಿಗಳೇ ಸಮುದಾಯದ ವಸತಿ ಕೇಂದ್ರ. ಈದುಲ್ ಫಿತ್ರ್ ಆದರ್ಶ ಹಾಗೂ ಆಧ್ಯಾತ್ಮಿಕತೆಯು ಮಿಲ ನಗೊಂಡ ಹಬ್ಬವಾಗಿದೆ. ‘ಅಲ್ಲಾಹನಲ್ಲದೆ ಬೇರೆ ದೇವನಿಲ್ಲ. ಪ್ರವಾದಿ(ಸ)ರು ಅಲ್ಲಾಹನ ಪ್ರವಾದಿಯಾಗಿದ್ದಾರೆ’ ಎಂಬುದು ಇಸ್ಲಾಮ್‍ನ ಆದರ್ಶ. ಈದುಲ್ ಫಿತ್ರ್ ಆದರ್ಶವನ್ನು ಘೋಷಿಸುವ ದಿನವೂ ಹೌದು. ಮಾನವನ ಅಸ್ತಿತ್ವದ ಕುರಿತ ಪ್ರಶ್ನೆಗಳಿಗೆ ಈ ಆದರ್ಶವು ಉತ್ತರವಾಗಿದೆ. ಮನುಷ್ಯನಿಗೆ ತನ್ನ ಅಸ್ತಿತ್ವದ ವಾಸ್ತವಿಕತೆಗಳನ್ನು ಈ ಆದರ್ಶವು ತಿಳಿಸಿಕೊಡುತ್ತದೆ. ದೇವನಿಂದಲೇ ನಮ್ಮ ಆರಂಭ, ದೇವನಿಗಾಗಿ ನನ್ನ ಜೀವನ, ದೇವನೆಡೆಗೇ ನನ್ನ ಮರಳುವಿಕೆ. ಆದ್ದರಿಂದ ಈದುಲ್ ಫಿತ್ರ್ ನಲ್ಲಿ ವಿಶ್ವದಾದ್ಯಂತ ಮುಸ್ಲಿಮರು ಈ ಆದರ್ಶ ವಾಕ್ಯಗಳನ್ನು ಉಚ್ಚರಿಸುತ್ತಿರುತ್ತಾರೆ. ಹೀಗೆ ಈದುಲ್ ಫಿತ್ರ್ ದೇವನನ್ನು ಹೊಗಳುವ, ಪ್ರಕೀರ್ತಿಸುವ, ಸ್ತುತಿಸುವ ದಿನವಾಗಿರುತ್ತದೆ. ವಿಶ್ವದೆಲ್ಲೆಡೆಯ ಮುಸ್ಲಿಮರು ಒಂದು ದಿನ ಸಂಪೂರ್ಣವಾಗಿ ಆದರ್ಶ ವಾಕ್ಯಗಳನ್ನು ನಿರಂತರ ಮೊಳಗಿಸುತ್ತಿರುವ ದಿನಗಳು ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾ ಹಬ್ಬದ ದಿನಗಳಾಗಿವೆ.

ಕೆಲವೊಂದು ವ್ಯತ್ಯಾಸಗಳನ್ನು ಬಿಟ್ಟರೆ ಈದುಲ್ ಅಝ್ಹಾವೂ ಈದುಲ್ ಫಿತ್ರ್‍ನ ಆಶಯಗಳನ್ನೇ ಹೊಂದಿದೆ. ಈದುಲ್ ಫಿತ್ರ್‍ನಲ್ಲಿ ಮುಸ್ಲಿಮನ ಸಂಪೂರ್ಣ ವ್ಯಕ್ತಿತ್ವ ಹಾಗೂ ಸಂಪೂರ್ಣ ಉಮ್ಮತ್ ಉಪವಾಸದ ಕಾರಣದಿಂದ ಉದ್ಭವವಾಗುತ್ತದೆ ಯೆಂದಾದರೆ ಈದುಲ್ ಅಝ್ಹಾದಲ್ಲಿ ಹಜ್ಜ್‍ನಿಂದ ಈ ಎರಡೂ ಹುಟ್ಟುತ್ತದೆ. ಉಪವಾಸ ಮತ್ತು ಹಜ್ಜ್‌ನಲ್ಲಿ ತ್ಯಾಗ ಹಾಗೂ ಆತ್ಮನಿಯಂತ್ರಣದ ಪಾಠವಿದೆ. ಎರಡು ಹಬ್ಬದಲ್ಲೂ ಮುಸ್ಲಿಮರ ಬಾಯಿಯಿಂದ ತಕ್ಬೀರ್ ಧ್ವನಿಗಳು ಮೊಳಗುವುದು. ಉಪವಾಸ ಮತ್ತು ಈದುಲ್ ಫಿತ್ರ್‍ನ ಕೇಂದ್ರ ಸ್ಥಳದಲ್ಲಿ ಪ್ರವಾದಿವರ್ಯರಿದ್ದಾರೆ. ಪ್ರವಾದಿ ಮುಹಮ್ಮದ್(ಸ)ರನ್ನು ಆದರ್ಶವಾಗಿಸಿ ಪರಿಪೂರ್ಣ ಮುಸ್ಲಿಮನಾಗಲು ಉಪವಾಸವು ಪ್ರೇರೇಪಿಸುತ್ತದೆ. ಹಜ್ಜ್ ಹಾಗೂ ಈದುಲ್ ಅಝ್ಹಾದ ಕೇಂದ್ರ ಕಥಾಪಾತ್ರ ಇಬ್ರಾಹೀಮ್ (ಅ) ಆಗಿದ್ದಾರೆ. ಇಬ್ರಾಹೀಮ್(ಅ)ರ ಮಾದರಿಯಂತೆ ಪರಿಪೂರ್ಣ ಮುಸ್ಲಿಮನಾಗಬೇಕೆಂಬ ಕರೆಯನ್ನು ಹಜ್ಜ್ ನೀಡುತ್ತದೆ. ಇಸ್ಲಾಮೀ ಇತಿಹಾಸದ ಅತ್ಯಂತ ಪ್ರಮುಖ ವಾದ ಪ್ರವಾದಿಗಳಾಗಿದ್ದಾರೆ ಪ್ರವಾದಿ ಮುಹಮ್ಮದ್(ಸ) ಮತ್ತು ಹ. ಇಬ್ರಾಹೀಮ್ (ಅ). ಪರಿಪೂರ್ಣ ಮುಸ್ಲಿಮರನ್ನು ರೂಪಿಸಲು ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅವರು ದೇವನಿಂದ ನಿಯೋಜಿತರಾದರು. ಪರಿಪೂರ್ಣ ವ್ಯಕ್ತಿತ್ವದ ಮಾದರಿಗಳಾದ ಅವರು ಸುಂದರ ಸ್ವಸ್ಥ ಶಾಂತಿಯುತ ರಾಷ್ಟ್ರದ ನಿರ್ಮಾಣವನ್ನು ಮಾಡಿದರು. ಅವರೀರ್ವರಲ್ಲೂ ಉನ್ನತ ಮಾದರಿಯಿದೆಯೆಂದು ಪವಿತ್ರ ಕುರ್‍ಆನ್ ತಿಳಿಸಿದೆ. ಮುಹಮ್ಮದ್(ಸ)ರ ಕುರಿತು ಪವಿತ್ರ ಕುರ್‍ಆನ್ ಹೇಳುತ್ತದೆ, “ನಿಶ್ಚಯವಾಗಿಯೂ ದೇವ ಸಂದೇಶವಾಹಕ ರಲ್ಲಿ ನಿಮಗೆ ಅತ್ಯುತ್ತಮ ಮಾದರಿಯಿದೆ.” (ಅಲ್ ಅಹ್‍ಝಾಬ್:211) ಇಬ್ರಾಹೀಮ್(ಅ)ರ ಕುರಿತು ಪವಿತ್ರ ಕುರ್‍ಆನ್ ಹೇಳುತ್ತದೆ, “ನಿಶ್ಚಯವಾಗಿಯೂ ಇಬ್ರಾಹೀಮ್ ಹಾಗೂ ಸಂಗಾತಿಗಳಲ್ಲಿ ನಿಮಗೆ ಉತ್ತಮವಾದ ಮಾದರಿಯಿದೆ.” (ಅಲ್ ಮುಮ್ತಹಿನ)