ಕೆಲಸ ಗೊತ್ತಿಲ್ಲದಿದ್ದರೆ ರಾಜೀನಾಮೆ ಕೊಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‍ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

0
888

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.26: ದೇಶಾದ್ಯಂತ ಪೆಟ್ರೊಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಉತ್ತರಿಸಲಾಗದ ಧರ್ಮ ಸಂಕಟದಲ್ಲಿದ್ದೇನೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ರಾಜೀನಾಮೆ ಕೊಡಿ ಎಂದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಸಲಹೆ ನೀಡಿದ್ದಾರೆ.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದಾಗ ಕಡಿಮೆ ಮಾಡಲು ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಧರ್ಮ ಸಂಕಟವಾಗಿದೆ ಎಂದು ನಿರ್ಮಲಾ ಸೀತರಾಮನ್ ಅಹ್ಮದಾಬಾದ್‍ನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಇದು ಸೆಸ್ ಮಾತ್ರವಲ್ಲ. ಕೇಂದ್ರದ ಎಕ್ಸೈಸ್ ತೆರಿಗೆ ಹಾಕುವಾಗ ರಾಜ್ಯಗಳು ವ್ಯಾಟ್ ಹಾಕುತ್ತವೆ. ಆದ್ದರಿಂದ ವರಮಾನ ಇದೆ ಎಂಬ ಸತ್ಯವನ್ನು ಅಡಗಿಸಲು ಸಾಧ್ಯವಿಲ್ಲ. ಇದು ನನಗೆ ಮಾತ್ರವಲ್ಲ, ನಿಮ್ಮ ಎಲ್ಲ ರಾಜ್ಯಗಳನ್ನು ಕೇಳಿ ನೋಡಿರಿ. ಅವರೂ ಆದಾಯ ಮಾಡಿಕೊಳ್ಳುತ್ತಿದ್ದಾರೆ ಎಂದು ವಿತ್ತ ಸಚಿವೆ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ದೇಶದಲ್ಲಿ 25ಕ್ಕೂ ಹೆಚ್ಚು ಸಲ 2021ರಲ್ಲಿ ಇಂಧನ ದರ ಹೆಚ್ಚಳವಾಗಿದೆ. ಇದರೊಂದಿಗೆ ಪೆಟ್ರೋಲ್ ಬೆಲೆ ವಿವಿಧ ಸ್ಥಳಗಳಲ್ಲಿ ನೂರು ರೂಪಾಯಿ ದಾಟಿದೆ. ಆದುದರಿಂದ ನಿರ್ಮಲಾ ಸೀತಾರಾಮನ್‍ರವರ ಹೇಳಿಕೆಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದೆ.

ತಪ್ಪು ಕ್ರಮಗಳನ್ನು ಕೈಗೊಂಡು ಕೊನೆಗೆ ಧರ್ಮ ಸಂಕಟವೆಂದು ಹೇಳಿಕೆ ನೀಡಿ ಜಾರಿಕೊಳ್ಳುವುದು ವಿತ್ತ ಸಚಿವೆಯವರ ಪರಾಭವ. ಕೆಲಸ ಗೊತ್ತಿಲ್ಲದಿದ್ದರೆ ರಾಜೀನಾಮೆ ನೀಡಿ ಜವಾಬ್ದಾರಿಯುತ ವ್ಯಕ್ತಿಗಳಿಗೆ ಸ್ಥಾನ ಬಿಟ್ಟುಕೊಡಬೇಕೆಂದು ಕೆಲವರು ಸಲಹೆ ನೀಡಿದ್ದಾರೆ.

ಕಳೆದ ದಿವಸ ದೇಶದಲ್ಲಿ ಇಂಧನ ದರ ಹೆಚ್ಚುತ್ತಿರುವುದನ್ನು ಸೂಚಿಸಿ ರಿಸರ್ವ್ ಬ್ಯಾಂಕ್ ರಂಗಪ್ರವೇಶಿಸಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಅದು ಸೂಚಿಸಿತ್ತು.