ಮಾಧ್ಯಮಗಳು ಉಗ್ರ ಪಟ್ಟ ಕಟ್ಟಿದ ಬೆಳ್ತಂಗಡಿಯ ರವೂಫ್ ರ ಬಗ್ಗೆ ಅವರ ಒಡನಾಡಿಯ ಮಾತು: ಈ ರವೂಫ್ ಯಾರು ಗೊತ್ತಾ?

0
1902

ಯಂಶ ಬೇಂಗಿಲ

ಸುಮಾರು ಹತ್ತು ವರ್ಷದ ಹಿಂದೆ ನಾನು ಮಂಜನಾಡಿ ಅಲ್ ಮದೀನ ಸೇರಿದಾಗ ಆಗಷ್ಟೇ ಎಸ್ ಎಸ್ ಎಲ್ಸಿ ಮುಗಿಸಿ ನನ್ನಂತೆಯೇ ಹೊಸ ಜಗತ್ತಿನೆಡೆಗೆ ನೋಡುತ್ತಿದ್ದ ಪಿಳಿ ಪಿಳಿ ಕಣ್ಣುಗಳ ಹಸನ್ಮುಖಿ ಹುಡುಗ. ಸದಾ ಅಂತರ್ಮುಖಿಯಾಗಿರುವ ಯಾರೊಂದಿಗೂ ಹೆಚ್ಚು ಬೆರೆಯದ ಸೌಮ್ಯ ಸ್ವಭಾವದ ವ್ಯಕ್ತಿ. ವಿಪರೀತ ಓದುವ ಗೀಳು. ಪಠ್ಯ ವಿಷಯಗಳಲ್ಲಿ ಅಷ್ಟೇ ಅಸಕ್ತಿ ಕೂಡ. ಸಂಜೆ ಹೊತ್ತಿಗೆ ನಾವೆಲ್ಲ ಆಟದ ಮೈದಾನಕ್ಕೋ. ಕಲ್ಲು ಬಂಡೆಗಳ ಮೇಲೆ ವಾಯು ವಿಹಾರಕ್ಕೋ ತೆರಳಿದರೆ ಈ ಹುಡುಗ ಮಾತ್ರ ರೂಮಿನಲ್ಲಿಯೇ ಉಳಿದು ಆಫೀಸಿನಿಂದ ತಂದ ಆ ದಿನದ ಪತ್ರಿಕೆಗಳನ್ನು ಹರವಿ ಕೂರುತ್ತಿದ್ದ. ಒಂದಕ್ಷರವೂ ಬಿಡದೆ ಓದುವ ಅಕ್ಷರದ ಹುಳು ಓದಿದ್ದನ್ನು ಎಸದೆ ಬಿಟ್ಟಾನೆ? ಖಂಡಿತ ಇಲ್ಲ ಒಳ್ಳೊಳ್ಳೆ ಬರಹಗಳು ಸಿಕ್ಕರೆ ಅದನ್ನು ಕಟ್ಟಿಂಗ್ ಮಾಡಿ ಜೋಪಾನ ಮಾಡುತ್ತಿದ್ದ. ಓದಲೂ ಕೊಡುತ್ತಿದ್ದ. ಮಿತ ಮಾತಿನವನಾಗಿದ್ದನಿಂದ ವಾಚಾಳಿ ನನಗೆ ಮೊದ ಮೊದಲು ಕುತೂಹಲದ ಗೂಡಾಗಿ ಕಂಡ ಆತ ನಂತರ ವಿಪರೀತ ಎಂಬಂತೆ ಗೆಳೆಯನಾಗಿ ಬಿಟ್ಟ. ಮನೆ ಕಡೆ ತೀರಾ ಬಡತನ, ಮುಂದೆ ಸೇರಬೇಕಿರುವ ಗುರಿ. ಎತ್ತ ಹಾರುವುದೋ ಎಲ್ಲಿ ಬೀಳುವುದೋ ಪಟ ಎಂಬಂತ ಸನ್ನಿವೇಶದಲ್ಲಿರುವ ಅಸಂಖ್ಯ ವಿದ್ಯಾರ್ಥಿಗಳಿಗೆ ಊಟ ವಸತಿ ವಿದ್ಯೆ ಬುದ್ದಿ ಎಲ್ಲವನ್ನೂ ಒದಗಿಸಿದ ಒದಗಿಸುತ್ತಿರುವ ಅಲ್ ಮದೀನವೆಂಬ ಅನಾಥ ಬಡ ಬಗ್ಗರ ಆಶಾಕಿರಣ ಸಾಂತ್ವನ ಕೇಂದ್ರದಲ್ಲಿ ಇವನೂ ಒಬ್ಬ.

ಇವನೆಂದರೆ ಉಸ್ತಾದರಿಗೂ ಅಷ್ಟೇ ಅಚ್ಚು ಮೆಚ್ಚು. ಅದೇ ಕಾರಣಕ್ಕೆ ಶೈಖುನಾ ಉಸ್ತಾದರ ಸೇವಕನಾಗುವ ಸೌಭಾಗ್ಯವೂ ಇವನದಾಯಿತು. ಎರಡು ವರ್ಷಗಳ ತರುವಾಯ ನಾನು ಅಲ್ ಮದೀನ ತ್ಯಜಿಸಿ ಬೆಂಗಳೂರು ಸೇರಿದ ಮೇಲೆ ಇವನ ಸಂಪರ್ಕ ಅಪರೂಪವಾಯಿತು. ಇತ್ತೀಚೆಗೆ ನಾನೊಮ್ಮೆ ಬೆಳ್ತಂಗಡಿಗೆ ಹೊರಟ ದಾರಿಯಲ್ಲಿ ಬಿಳಿ ಕಮೀಸು. ಕೈಯಲ್ಲೊಂದು ಬ್ಯಾಗು ಹಿಡಿದು ಪ್ರಪುಲ್ಲ ವದನನಾಗಿ ನಿಂತದ್ದು ಗೋಚರಿಸಿತು. ಮುಂದೆ ಹೋದವ ತಿರುಗಿ ಬಂದು ಮಾತನಾಡಿಸಿದೆ. ನೋಡಿದರೆ ಅದೇ ಅಲ್ ಮದೀನದ ಅದೇ ರವೂಫ್… ಇಂಚೂ ಬದಲಾಗಿಲ್ಲ. ಒಲವಿನಿಂದಲೇ ಮಾತನಾಡಿಸುತ್ತಾ ತನ್ನ ಮದುವೆಯ ಕರೆಯೋಲೆ ನೀಡಿದ. ಶೈಖುನಾರ ಬಗ್ಗೆ ಹೇಳಿದ. ಖುಷಿ ಹಂಚಿಕೊಂಡ ಬಳಿಕ ನಾನು ಹೊರಟೆ.

ಇಂದು ನೋಡಿದರೆ ಅದೇ ಅಮಾಯಕ ಯಾರ ತಂಟೆ ತಕರಾರಿಗೂ ಹೋಗದ ಮುಗ್ದ ರವೂಫಿನ ಮೇಲೆ ಆತ ಅತಿಯಾಗಿ ಇಷ್ಟಪಡುತ್ತಿದ್ದ ಮಾದ್ಯಮಗಳೇ “ಉಗ್ರ ಪಟ್ಟ” ಕಟ್ಟಿ ಸುಳ್ಳಾರೋಪಗಳ ಪ್ರಹಾರ ನಡೆಸುತ್ತಿವೆ. ವಿಷಯ ಕೇಳಿದ ಅವನ ಪ್ರೀತಿಯ ಉಮ್ಮ ಮೂರ್ಛೆ ಹೋಗಿದ್ದಾರೆ. ಊರಲ್ಲಿ ತಲೆ ಎತ್ತಿ ನಡೆಯಲಾರದಂತ ಪರಿಸ್ಥಿತಿಗೆ ಆ ಗೆಳೆಯ ಹೋಗಿದ್ದಾನೆ. ಇದಕ್ಕೆಲ್ಲ ಯಾರು ಹೊಣೆ? ಗೆಳೆಯನ ನೆನೆದಾಗ ಕಣ್ಣುಗಳು ತೇವಗೊಳ್ಳುತ್ತಿವೆ. ಲಗಾಮಿಲ್ಲದ ಕುದುರೆಗಳಂತೆ. ಮದಿರೆ ಕುಡಿದ ಮರ್ಕಟಗಳಂತೆ ನಡೆದುಕೊಳ್ಳುತ್ತಿರುವ ಮಾದ್ಯಮಗಳ ಅತ್ಮ ಸಾಕ್ಷಿಗಳು ಯಾವ ಕೋಮು ಕ್ರಿಮಿಯ ಬಚ್ಚಲು ಕೋಣೆಯ ಕೊಚ್ಚೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿವೆ? ಇದು ಈ ಸಮಾಜಕ್ಕೆ ಗೊತ್ತಾಗಲೇಬೇಕು. ನೊಂದು ಕೂತ ಗೆಳೆಯ ರವೂಫಿನೊಂದಿಗೆ ನಾನಿದ್ದೇನೆ. ನಾವೆಲ್ಲ ಇದ್ದೇವೆ. ಇದು ಓದಿದ ನಿಮ್ಮದೆಯಲ್ಲಿ ಒಂದು ಹನಿಯಾದರೂ ಮಾನವೀಯತೆಯ ಸೆಲೆ ಇದ್ದರೆ ನೀವೂ ರವೂಫಿನ ಪರವಾಗಿ ನಿಲ್ಲಿ ಎಂದಷ್ಟೇ ಈ ಹೊತ್ತು ನಾ ಹೇಳಬಲ್ಲೆ.