ಹೀಗಾದರೆ, ನಾವು ಕೊರೊನಾ ಯುದ್ಧ ಗೆಲ್ಲಬಲ್ಲೆವೇ?

0
606

ಸನ್ಮಾರ್ಗ ವಾರ್ತೆ

ಲೇಖಕರು: ಅರಫಾ ಮಂಚಿ

ಕೊರೊನಾ ಲಾಕ್‌ಡೌನ್‍ನಿಂದಾಗಿ ಕಾರು ನಿಲ್ಲಿಸು ಎಂದಿದ್ದಕ್ಕೆ ಪೊಲೀಸ್‍ ಅಧಿಕಾರಿಯನ್ನು ಒಬ್ಬ ಯುವಕ ತನ್ನ ಆರ್ಟಿಗೊ ಕಾರಿನ ಬಾನೆಟ್ ಮೇಲೆ ಕೆಡವಿ ಎಳೆದು ಕೊಂಡು ಹೋದ ಘಟನೆ ಪಂಜಾಬಿನ ಜಲಂಧನರ್‍ನಲ್ಲಿ ನಡೆದಿದೆ. ಯುವಕ ಕಾರನ್ನು ನಿಲ್ಲಿಸಲು ಹೇಳಿದ್ದಕ್ಕೆ ಹೀಗೆ ಮಾಡಿದ್ದಾನೆ. ಅಲ್ಲಿಯೇ ಇದ್ದ ಅಡಿಶನಲ್ ಎಚ್‍ಎಸ್‍ಒ ಗುರುದೇವ್ ಸಿಂಗ್ ಆತನನ್ನು ಬಂಧಿಸಿದರು.

ಕೊರೊನಾ ಲಾಕ್‌ಡೌನ್ ವೇಳೆ ವ್ಯಾಪಾರಿಗಳು ಇದೇ ಪಂಜಾಬ್‍ನಲ್ಲಿ ತರಕಾರಿ ಮಾರುಕಟ್ಟೆಯೊಂದರಲ್ಲಿ ಪೊಲೀಸಧಿಕಾರಿಯ ಕೈ ಕತ್ತರಿಸಿದ್ದರು. ಕೊರೊನಾ ಕಾಲದ ಸಾಮಾಜಿಕ ಅಂತರ, ಲಾಕ್‍ಡೌನ್ ರೋಗದಿಂದ ಪಾರಾಗಲು ಮತ್ತು ಜನರ ರಕ್ಷಣೆಗಿದೆ. ಈಗಾಗಲೇ ಕೊರೊನಾ ಸೋಂಕು ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ವಿಶ್ವದಲ್ಲಿ ಬಲಿ ತೆಗೆದುಕೊಂಡಿದೆ. ಮತ್ತು ರೋಗಕ್ಕೆ ಮದ್ದು ಇನ್ನೂ ಕೂಡ ಕಂಡು ಹುಡುಕಲು ಆಗಿಲ್ಲ‌ ಎಂಬ ಸತ್ಯ ತಿಳಿದ ನಂತರ ಅವಿವೇಕಿಗಳಿಗೆ ಪರಿಸ್ಥಿತಿಯ ಪರಿಜ್ಞಾನ ಬಂದಿಲ್ಲ ಅಂದರೆ ಏನರ್ಥ?.

ಪೊಲೀಸರು, ವೈದ್ಯರು, ದಾದಿಯರು, ಶುಚಿತ್ವ ಕಾರ್ಮಿಕರು ಜೀವ ಪಣವಾಗಿಟ್ಟು ಸೋಂಕಿನ ವಿರುದ್ಧ ಹೋರಾಡುವುದು. ಜೊತೆಯಲ್ಲೇ ವಂಚಕರ ದಗಲ್ಬಾಜಿಯೂ ನಡೆಯುತ್ತಿದೆ. ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸರಕಾರ ವಿತರಿಸುವ ಆಹಾರ ವಸ್ತುಗಳಿಗೆ ಬಿಜೆಪಿ ಪಾರ್ಟಿಯ ಸೀಲು ಹಾಕಿ ಜನರ ನಡುವೆ ವಿತರಿಸಲು ಸಿದ್ಧಪಡಿಸುತ್ತಿರುವುದು ಸಂಸದ ಡಿ.ಕೆ.ಸುರೇಶ್ ನೇತೃತ್ವದ ತಂಡ ರೆಡ್‍ ಹ್ಯಾಂಡಾಗಿ ಪತ್ತೆಹಚ್ಚಿದ್ದು ಇಂಥಹದ್ದಕ್ಕೊಂದು ಉದಾಹರಣೆ.

ಒಂದೆಡೆ ಮನುಷ್ಯರನ್ನು ರಕ್ಷಿಸುವ ಯುದ್ಧ ಇನ್ನೊಂದು ಕಡೆ ಮನುಷ್ಯರ ಅಸಹಾಯಕತೆಯ ಮೇಲೆ ಆಡಳಿತಾರೂಢರ ಗುದ್ದು. ಕೊರೊನಾದಿಂದ ಇಷ್ಟೆಲ್ಲ ಹಾನಿಯಾಗಿದ್ದೂ ಕೆಲವು ಮನುಷ್ಯನಲ್ಲಿ ವಿವೇಕವನ್ನು ಇನ್ನೂ ಹುಟ್ಟು ಹಾಕಿಲ್ಲ ಎಂಬುದಕ್ಕೆ ಇಂಥ ಹಲವು ಘಟನೆಗಳು ನಮ್ಮ ಮುಂದಿವೆ.

ಅರ್ನಾಬ್ ಗೋಸ್ವಾಮಿಗೆ ಒಂದು ನ್ಯಾಯ, ಸಿದ್ಧಾರ್ಥ ವರದರಾಜನ್‍ರಿಗೆ ಇನ್ನೊಂದು ನ್ಯಾಯ. ಸಿಎಎ ಪ್ರತಿಭಟನಾಕಾರರು, ಗರ್ಭಿಣಿ ವಿದ್ಯಾರ್ಥಿನಿ ಸಫೂರಳನ್ನು ದಿಲ್ಲಿಯ ಮಹಿಳಾ ಪ್ರತಿಭಟನೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿದ್ದು ಅವರ ವಿರುದ್ಧ ಯುಎಪಿಎ ಕಾನೂನು ಹೇರಿದೆ. ಲಾಕ್‍ಡೌನ್‍ನಲ್ಲಿ ಮನೆಯಲ್ಲಿದ್ದಲ್ಲಿಂದ ಎತ್ತಿ ತಂದು ಏಕಾಂತ ಜೈಲಿಗೆ ಆಕೆಯನ್ನು ಹಾಕಿದ್ದು. ಇವೆಲ್ಲ ನೋಡುವಾಗ ದಿಲ್ಲಿಯಲ್ಲಿ ನಡೆದಿದ್ದ ಕೋಮು ಗಲಭೆಯನ್ನು ಮುಸ್ಲಿಮರ ಸಂಚು ಆಗಿ ಬಿಂಬಿಸಲು ಕಾರ್ಯ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿರುವಂತೆ ಕಾಣುತ್ತದೆ. ಬಹುಶಃ ಜಾಮಿಅ ವಿದ್ಯಾರ್ಥಿನಿ ಸಫೂರಳ ಬಂಧನ ಹೀಗೆಯಾದ್ದೆಂದು ಸದ್ಯ ವಿಶ್ಲೇಷಿಸೋಣ. ದೇಶವನ್ನು ಆಡಳಿತರೂಢರು ಅವರ ಹಿಂಬಾಲಕರು ಏನು ಮಾಡುತ್ತಿದ್ದಾರೆ ಇಂತಹದೇ ಸಮಯದಲ್ಲಿ ಕೊರೊನಾ ಎಲ್ಲರ ಮುಂದೆ ಸವಾಲಾಗಿ ನಿಂತದ್ದು.

ಸರಕಾರದ ಬಯಸಿದಂತೆ ನಮ್ಮ ಕೋರ್ಟುಗಳು ತೀರ್ಮಾನ ನೀಡ್ತಾವಾ ಎಂಬುದನ್ನು ರಾಮಮಂದಿರ, ಬಾಬರಿ ಮಸೀದಿ ಜಾಗ ತಗಾದೆಯಲ್ಲಿ ಬಲಗೊಳ್ಳುವಂತಾಯಿತು. ಇಲ್ಲಿಗೇ ಸಂಘಪರಿವಾರದ ಮುಸ್ಲಿಂ ಅಜೆಂಡಾ ಮುಗಿದೇ ಬಿಟ್ಟಿತೆಂದಾದಾಗ ದೇಶದ ಗೃಹ ಸಚಿವ ಅಮಿತ್ ತಂದು ಮುಸ್ಲಿಮರನ್ನು ಹೊರಗಿಟ್ಟು ಸಿಎಎ ಕಾನೂನ ತಂದರು. ಹೋರಾಟ ಪ್ರತಿಭಟನೆಗಳಿಂದ ದೇಶಕ್ಕೆ ದೇಶವೇ ಸ್ಥಬ್ಧವಾಯಿತು. ದಿಲ್ಲಿಯ ಶಾಹಿನಾ ಬಾಗ್‍ನ ಮಹಿಳೆಯರು ಎರಡು ತಿಂಗಳಿಗೂ ಹೆಚ್ಚು ಕಾಲ ಕರಾಳ ಕಾನೂನನ್ನು ವಿರೋಧಿಸಿದರೂ ಸರಕಾರ ತಿರುಗಿ ನೋಡೇ ಇಲ್ಲ. ಬೆನ್ನಿಗೆ ಕೊರೊನಾ ರೋಗ ಬಂದು ಎಲ್ಲರನ್ನೂ ಮನೆಯೊಳಗೆ ಕೂಡಿಹಾಕಿದ್ದಂತೂ ನಿಜ. ಅತ್ತ ಡಿಟೆನ್ಶನ್ ಸೆಂಟರ್‌ಗೆ ಹಲವಾರು ಜನರನ್ನು ದೂಡಿ ಹಾಕಲು ನಮ್ಮ ಆಳುವವರು ಕಾನೂನು ರಚಿಸಿದರೆ ಇತ್ತ ಪ್ರಕೃತಿ ಎಲ್ಲರಿಗೂ ಮನೆಯನ್ನು ಜೈಲು ಮಾಡಿ ಕೊರೊನಾವನ್ನು ಕಳುಹಿಸಿತು. ಆದರೆ ಜನರ ವಿವೇಕ ಅರಳಿಲ್ಲ.

ಕೊರೊನಾದಲ್ಲಿಯೂ ಮುಸ್ಲಿಂ ಟಾರ್ಗೆಟ್ ಶುರವಾಯಿತು.ಕೊರೊನಾ ವೈರಸನ್ನು ತಬ್ಲೀಗಿಗಳಿಗೆ ಬಿಂಬಿಸುವಲ್ಲಿ ಅರ್ನಾಬ್ ಗೋಸ್ವಾಮಿ ಎತ್ತಿದ ಕೈ. ಇಲ್ಲಿ ಕನ್ನಡದ ಕೆಲವು ಟಿವಿ ಮಾಧ್ಯಮಗಳು. ಇವರೆಲ್ಲ ಸರಕಾರಿ ಭೂರಿ ಭೋಜನ ಉಂಡು ತೇಗುತ್ತಿವೆ. ಜನರು ಲಾಕ್‍ಡೌನ್ ಕೊರನಾ ರೋಗಭಯದಿಂದ ತತ್ತರಿಸುತ್ತಿದ್ದಾರೆ.

ಹೌದು ಇಂದು ಈಗ ಮುಸ್ಲಿಮರು ಮತ್ತು ಸಂಘಪರಿವಾರ ಎಂಬ ಸಮಸ್ಯೆಯನ್ನು ದೇಶ ದಾಟಿದೆ. ಈಗ ಸಮಸ್ಯೆ ಸಂಘಪರಿವಾರ ವರ್ಸಸ್ ಭಾರತ ಎಂಬಂತಾಗಿ ಬಿಟ್ಟಿದೆ. ಯಾಕೆಂದರೆ ಮನ್ನಾ ಆಗುತ್ತಿರುವ ದೇಶದ ಖಜಾನೆ, ಬ್ಯಾಂಕಿನಿಂದ ಕೊಳ್ಳೆಹೊಡೆಯಲಾದ ಹಣ ಮುಸ್ಲಿಮರದ್ದು ಅಲ್ಲವಲ್ಲ. ಅವೆಲ್ಲ ಭಾರತದ್ದು. ಮುಸ್ಲಿಂ , ಕೊರೊನಾ ಎಲ್ಲ ದಾಟಿ ಸಮಸ್ಯೆ ಮುಂದೆ ಬೇರೆ ದಾರಿ ಹಿಡಿಯಬಹುದು. ಹೌದು ಹಿಡಿಯಬಹುದು ಇವೆಲ್ಲ ಆಳುವವರ ಅಸಾಮಥ್ರ್ಯ. ಅಂತೂ ನಮ್ಮ ದೇಶ ಬಡತನದತ್ತ ಕುಂಟುತ್ತಿದೆ. ಆದರೂ ಕಪ್ತಾನನಿಗೂ, ಪ್ರಯಾಣಿಕರಿಗೂ ನೌಕೆ ಮುಳುಗುವುದು ಗೊತ್ತಾಗಿಲ್ಲ ಎಂಬುದೇ ದೇಶದ ದುರಂತ. ನಮ್ಮ ದುರಂತ.