ಲೇಬರ್ ರೂಮ್‍ನಲ್ಲಿ ಹಾಸಿಗೆಯಿಲ್ಲ; ಉತ್ತರಪ್ರದೇಶದಲ್ಲಿ ಮಹಿಳೆಗೆ ಆಸ್ಪತ್ರೆಯ ವರಾಂಡದಲ್ಲಿ ಹೆರಿಗೆ

0
538

ಸನ್ಮಾರ್ಗ ವಾರ್ತೆ

ಫಾರೂಕಾಬಾದ್, ಆ. 20: ಉತ್ತರಪ್ರದೇಶದ ಫಾರೂಕಾಬಾದ್‍ನಲ್ಲಿ ಲೇಬರ್ ರೂಮಿನಲ್ಲಿ ಹಾಸಿಗೆ ಕೊರತೆಯಿಂದಾಗಿ ಪ್ರವೇಶ ನಿರಾಕರಿಸಲ್ಪಟ್ಟ ಗರ್ಭಿಣಿ ಮಹಿಳೆ ಆಸ್ಪತ್ರೆಯ ವರಾಂಡದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ರವಿವಾರ ಸಂಜೆ ಫಾರೂಕಾಬಾದಿನ ಮನೋಹರ ಲೋಹಿಯ ಆಸ್ಪತ್ರೆಯಲ್ಲಿ ಘಟನೆ ಸಂಭವಿಸಿದೆ.

ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಮಹಿಳೆಗೆ ಲೇಬರ್ ರೂಮಿನಲ್ಲಿ ಬೆಡ್ ಖಾಲಿಯಿಲ್ಲ ಎಂದು ಮರಳಿ ಕಳುಹಿಸಲಾಗಿತ್ತು. ಸ್ವಲ್ಪ ಹೊತ್ತಿನಲ್ಲೇ ಮಹಿಳೆಯು ಆಸ್ಪತ್ರೆಯ ವರಾಂಡದಲ್ಲಿ ಮಗುವನ್ನು ಹೆತ್ತರು. ಆಸ್ಪತ್ರೆಯಲ್ಲಿದ್ದವರು ವೀಡಿಯೊ ಚಿತ್ರೀಕರಿಸಿದ್ದು ಅದು ಪ್ರಾದೇಶಿಕ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಘಟನೆ ಬಹಿರಂಗವಾಗಿದೆ. ರಕ್ತದಲ್ಲಿ ಮುಳುಗಿದ ಸ್ಥಿತಿಯಲ್ಲಿ ತಾಯಿ ಮಗು ಇಬ್ಬರೂ ಇದ್ದರು. ಸಂಬಂಧಿಕಳಾದ ಇನ್ನೋರ್ವ ಮಹಿಳೆ ಮಗುವನ್ನು ಹೊದಿಕೆಯಲ್ಲಿ ಹೊದೆಯುತ್ತಿದ್ದರು. ಹೆರಿಗೆಯಾದ ಕೂಡಲೇ ಮಗು ಮತ್ತು ತಾಯಿಯನ್ನು ಲೇಬರ್ ರೂಂಗೆ ಕರೆದುಕೊಂಡು ಹೋಗಲಾಯಿತು. ಘಟನೆಯ ತನಿಖೆಗೆ ಮ್ಯಾಜಿಸ್ಟ್ರೇಟ್ ಆದೇಶ ನೀಡಿದ್ದಾರೆ.