ಯಂತ್ರದಂತೆ ದುಡಿಯುವ ಅಪ್ಪ, ಅಮ್ಮನಿಗೆ ಎದುರಾಡಿ ಮಿಸ್ಡ್ ಕಾಲ್ ಅಮಲಿನಲ್ಲಿ ಎಲ್ಲವನ್ನೂ ಮರೆಯುವ ಮೊದಲು…

0
1167

✍ ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು

➡ ನಮ್ಮದು ಮರ್ಯಾದಸ್ಥ ಕುಟುಂಬ. ನಾನು ನಿನ್ನನ್ನು ಮದುವೆಯಾಗುವುದು ನನ್ನ ತಂದೆಗೆ ತೀರಾ ಇಷ್ಟವಿಲ್ಲ ಮತ್ತು ಅದು ಅವರ ಪ್ರೆಸ್ಟೇಜ್‌ಗೆ ಸವಾಲಂತೆ. ನಿನ್ನನ್ನು ಮದುವೆಯಾಗಲು ತಾಯಿ ಕೂಡಾ ಒಪ್ಪಿಗೆ ನೀಡುತ್ತಿಲ್ಲ. ಜತೆಗೂಡಿ ಇದುವರೆಗೂ ಓಡಾಡಿದ ಆ ದಿನಗಳನ್ನೆಲ್ಲ ಕನಸೆಂದು ಬಗೆದು ಮರೆತು ಬಿಡು. ಇನ್ನು ಮುಂದೆ ನನಗೆ ಫೋನ್ ಮಾಡಬೇಡ. ತಂದೆಗೆ ಗೊತ್ತಾದರೆ ನಿನಗೇ ತೊಂದರೆ…..

      ಪ್ರಿಯಕರನ ಉತ್ತರವನ್ನಾಲಿಸಿ ಆಕೆಗೆ ಸಿಡಿಲೆರಗಿದಂತಾಯಿತು. ಆಕೆ ಹೆಣೆದ ಕನಸುಗಳೆಲ್ಲವೂ ಮರಳ ಗೋಪುರದಂತೆ ದೊಪ್ಪನೆ ಕುಸಿದು ಬಿತ್ತು. ಭರವಸೆಗಳೆಲ್ಲವೂ ಮಣ್ಣು ಮುಕ್ಕಿತು. ನಮ್ಮಿಬ್ಬರ ಪ್ರೀತಿ ಕೊನೆಯುಸಿರಿನ ತನಕ, ನೀನು ನನ್ನ ಬಂಗಾರ, ಸಿಂಗಾರ… ಎಂದೆಲ್ಲಾ ನಂಬಿಸಿ ಅಡ್ಡಾಡಿಸಿದ ಆ ನೀಚ ಆಕೆಯನ್ನು ನಡುರಸ್ತೆಯಲ್ಲೇ ತೊರೆದು ಬಿಟ್ಟ. ಅದೊಂದು ದಿನ ಆತ ಉಡುಗೊರೆಯಾಗಿ ನೀಡಿದ ಅರೆನಗ್ನದ ಫ್ಯಾಷನ್‌ ಉಡುಪನ್ನು ತೊಟ್ಟ ಆಕೆಯನ್ನು ಕಂಡು ಅಮ್ಮ ನಾಚಿ ಕಕ್ಕಾಬಿಕ್ಕಿಯಾಗಿದ್ದಳು. ಅಮ್ಮ ಅದನ್ನು ಪ್ರಶ್ನಿಸಿ ಆಕ್ಷೇಪಿಸಿದಾಗ, ಪ್ರಿಯಕರನ ಪರವಾಗಿ ನಿಂತ ಆಕೆ, ಅಮ್ಮನಿಗೇ ಎದುರಾಡಿದ್ದಳು. ಹುಚ್ಚು ಪ್ರೇಮದ ಬೆನ್ನೇರಿ ಅಮ್ಮನ ಮುಂದೆ ಹುಚ್ಚಾಪಟ್ಟೆ ವರ್ತಿಸಿದ್ದಳು. ಸಹನೆಯ ಕಟ್ಟೆ ಹೊಡೆಸಿಕೊಂಡ ಅಮ್ಮ, ಮಗಳ ಮೇಲೆ ಕೈ ಎತ್ತಿದಾಗ, ಆಕೆ ಅಮ್ಮನ ಕೈಯನ್ನು ಬಲವಂತವಾಗಿ ತಡೆ ಹಿಡಿದು, ನನ್ನ ಮೇಲೆ ಕೈಯೆತ್ತಿದರೆ ಜಾಗೃತೆ… ಎಂದಾಗ ಅಮ್ಮ ಬೆದರಿದ್ದಳು, ನಡುಗಿ ಬಿಟ್ಟಿದ್ದಳು. ಕಂಪಿಸುವ ಕೈಯನ್ನು ಮೆಲ್ಲನೆ ಹಿಂದಕ್ಕೆಳೆದು ಪರಾಜಿತಳಂತೆ ಉಮ್ಮಳಿಸಿ ಬಂದ ದುಃಖವನ್ನು ಅದುಮಿಡಲು ಸಾಧ್ಯವಾಗದೆ ಅಂಗೈಯನ್ನು ಮುಖಕ್ಕೆ ಅಡ್ಡವಿಟ್ಟು, ಪುಟ್ಟ ಮಗುವಿನಂತೆ ಅಮ್ಮ ಗಲಗಲನೆ ಅತ್ತು ಬಿಟ್ಟಿದ್ದಳು. ಅಗಾಧವಾಗಿ ಕಂಬನಿ ಸುರಿಸಿದ್ದಳು. ಇಡೀ ಪರಿಸರವೇ ಶೋಕವನ್ನಾಚರಿಸಿದಂತಾಗಿತ್ತು.

ಹುಚ್ಚು ಫ್ಯಾಷನ್‌, ನಿಯಮ-ನಿಬಂಧನೆಗಳಿಲ್ಲದ ಓಡಾಟ, ಸಭ್ಯತೆಯಿಲ್ಲದ ಕುಣಿದಾಟ, ಲಜ್ಜೆಗೆಟ್ಟ ಸಂಸ್ಕಾರವನ್ನು ಮೈಗೂಡಿಸಿಕೊಂಡ ಆಕೆ ಊರಿಡೀ ಜನರ ಚರ್ಚಾ ವಸ್ತುವಾದಳು. ಪ್ರೀತಿ-ಪ್ರೇಮವೆಂಬ ನಕಲಿ ಡಂಬಾಚಾರದ ಬೆನ್ನೇರಿ ಸೋತು ಹೋದಳು. ಹೌದು,

ಉದರದಲ್ಲಿ ಹೊತ್ತು ನಿತ್ರಾಣದ ಮೇಲೆ ನಿತ್ರಾಣ ಸಹಿಸಿ ಮತ್ತು ಜನನದಿಂದ ಹರೆಯದ ತನಕ ಮಕ್ಕಳ ಆ ಸುದೀರ್ಘ ಬದುಕಿಗಾಗಿ, ನಮ್ಮಲ್ಲಿ ಪ್ರತಿಯೊಬ್ಬರ ಅಮ್ಮಂದಿರು ಪಡುವ ಪಾಡೆಷ್ಟು? ಅಪ್ಪ ಸಹಿಸುವ ಅಪಮಾನ-ನೋವುಗಳೆಷ್ಟು? ಅದನ್ನು ಅಳೆಯುವ ಮಾಪಕ ಜಗತ್ತಿನಲ್ಲಿ ಎಲ್ಲಾದರೂ ಸಿಗಲು ಸಾಧ್ಯವೇ? ಎಷ್ಟು ಸತ್ಯ ನೋಡಿ,

ಕಾಲೇಜ್‌ ಮೆಟ್ಟಲನ್ನು ಹತ್ತಿ, ಅಪ್ಪ-ಅಮ್ಮನ  ಕಣ್ಮನ ತಣಿಸಿ ಭವಿಷ್ಯ ರೂಪಿಸ ಬೇಕಾದವಳು ಮತ್ತು ಸಮಾಜಕ್ಕೆ ಧಾರಾಳ ಕೊಡುಗೆ ನೀಡ ದೇಶ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸ ಬೇಕಾದವಳು, ನಕಲಿ ಪ್ರೀತಿ-ಪ್ರೇಮದ ಬೆನ್ನೇರಿ ಇಂದು ಪಶ್ಚಾತ್ತಾಪದಿಂದ ಕೊರಗುತ್ತಿದ್ದಾಳೆ. ಆದರೆ, ಆಕೆಗೆ ಬಲೆ ಬೀಸಿದವ ಮಾತ್ರ ತನ್ನ ಪಾಡಿಗೆ ಬೇರೆ ಮದುವೆಯಾಗಿ ಹಾಯಾಗಿದ್ದಾನೆ. ಯಾವ ವ್ಯಥೆ, ಲಜ್ಜೆಯೂ ಇಲ್ಲದೆ ಆರಾಮವಾಗಿದ್ದಾನೆ. ಆತ ಅಂದು ನೀಡಿದ್ದ ಒಲುಮೆಯ ವಾಗ್ದಾನಗಳೆಲ್ಲವೂ ಇಂದು ಆಕೆಯನ್ನು ಅಣಕಿಸುವಂತಿದೆ. ಹುಡುಗನ ಗುಣನಡತೆ, ಚಾರಿತ್ರ್ಯ ಸೋರಿ ಹೋದರೂ ಆತನಿಗೆ ಹೆಣ್ಣು ಕೊಟ್ಟು ಮದುವೆ ಮಾಡಿಸಲು ಸಮಾಜದಲ್ಲಿ ಧಾರಾಳ ಮಂದಿಯಿದ್ದಾರೆ. ಆದರೆ ಹೆಣ್ಣಿಗೆ ಹಾಗಲ್ಲ. ಆಕೆ ನಡೆದು ಬಂದ ಹಾದಿಯನ್ನು ಭೂತಕನ್ನಡಿಯಿಂದ ಅಳೆಯುತ್ತಾರೆ. ಆದರೂ

ಆಕೆ ಆಶಾವಾದಿ. ಅನುಭವದಿಂದ ಬಹಳಷ್ಟು ಪಾಠ ಕಲಿತು ಇಂದು ಹೆತ್ತವರ ನಲ್ಮೆಯ ಮಗಳಾಗಿ ಮನೆಯನ್ನೂ ಪರಿಸರವನ್ನೂ ನೈತಿಕ ಶಿಕ್ಷಣದಿಂದ ಬೆಳಗಿಸಿದ್ದಾಳೆ. ಯುವಕರು ಬಿಸಿರಕ್ತದ ಅಮಲಿನಲ್ಲಿ ಮನಮೋಹಕ ಆಶ್ವಾಸನೆಗಳಿಂದ ಹೆಣ್ಣುಮಕ್ಕಳನ್ನು ಬಲೆಗೆ ಹಾಕಲು ಹವಣಿಸುತ್ತಾರೆ. ಮಕರಂದವನ್ನು ಹೀರುವ ದುಂಬಿಯಂತೆ ಆಸ್ವದಿಸಿ ನಂತರ ಬಾಳೆಹಣ್ಣಿನ ಸಿಪ್ಪೆಯನ್ನೆಸೆದಂತೆ ಎಸೆದು ಬಿಡುತ್ತಾರೆ. ಆದ್ದರಿಂದ ಕಾಲೇಜಿನ ಮೆಟ್ಟಲೇರುವುದು ಟೈಂಪಾಸ್‌ ಅಥವಾ ಮೋಜಿಗಾಗಿ ಆಗಬಾರದು. ಹೆತ್ತವರು ಮಕ್ಕಳ ಮೇಲಿಟ್ಟ ಭರವಸೆ, ನಿರೀಕ್ಷೆಗಳಿಗೆ ನಾವೆಂದೂ ದ್ರೋಹವೆಸಗಬಾರದು. ಲಜ್ಜೆ, ಸಭ್ಯತೆ, ನೈತಿಕತೆಯನ್ನೆಂದೂ ತೊರೆಯ ಬಾರದು. ಅದು ಪ್ರಕೃತಿಯ ಸೌಂದರ್ಯ ಕೂಡಾ. ನನ್ನ ಈ ದುರವಸ್ಥೆ ಮುಂದೆ ಯಾರಿಗೂ ಎಂದೂ ಬಾರದಿರಲೆಂದು ಇಂದು ಆಕೆ ಪರಿಸರದ ಯುವತಿಯರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದ್ದಾಳೆ. ಹೌದು, ಆಕೆಯ ಬದುಕಿನಿಂದ ಪ್ರತಿಯೊಬ್ಬರೂ ಪಾಠ ಕಲಿಯಬೇಕು. ಹೌದು,

ಹಗಲಿರುಳೂ ದುಡಿದು ತನ್ನೆಲ್ಲ ಬೇಕುಬೇಡಗಳನ್ನು ಮಕ್ಕಳ ಭವಿಷ್ಯಕ್ಕಾಗಿ ತ್ಯಜಿಸಿ, ಯಂತ್ರದಂತೆ ದುಡಿಯುವ ಅಪ್ಪನನ್ನು ಹಾಗೂ ಸದಾ ಮಕ್ಕಳ ಹಿತವನ್ನೇ ಬಯಸುವ ಅಮ್ಮನನ್ನು ನಿನ್ನೆಮೊನ್ನೆ ಮಿಸ್ಡ್‌ಕಾಲ್‌ ಮೂಲಕ ಸಿಕ್ಕಿದ ಪ್ರಿಯಕರನಿಗಾಗಿ ತೊರೆಯುವ ಯಾರೇ ಆಗಲಿ ದೇವನಿಂದ ಶಪಿಸಲ್ಪಡದಿರಲಾರರು. ನೀವೇನಂತೀರಿ?