ಯುದ್ಧದಾಹಿ ಉನ್ಮಾದವೊಂದರ ಹಿಂದೆ-ಮುಂದೆ

0
1470

ಏ ಕೆ ಕುಕ್ಕಿಲ

ಮಾತುಕತೆ

ಸರ್ಜಿಕಲ್ ಸ್ಟ್ರೈಕ್

ಇವೆರಡೂ ಒಂದು ಸಾರ್ವಭೌಮ ರಾಷ್ಟ್ರದ ಸಹಜ ಆಯ್ಕೆಗಳು. ಇವೆರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದು ಮತ್ತು ಅದನ್ನೇ ಏಕೈಕ ರಣತಂತ್ರವಾಗಿ ಸ್ವೀಕರಿಸುವುದು ಅತ್ಯಂತ ಅಪಾಯಕಾರಿ. ಸರ್ಜಿಕಲ್ ಸ್ಟ್ರೈಕ್ ಒಂದು ಆಯ್ಕೆಯಾಗಿ ಇರುವು ದರ ಜೊತೆಜೊತೆಗೇ ಮಾತುಕತೆಯ ಬಾಗಿಲು ಸದಾ ತೆರೆದಿರಬೇಕು. ಸರ್ಜಿಕಲ್ ಸ್ಟ್ರೈಕ್ ಅಂದರೆ ಪಾಕಿಸ್ತಾನದ ಗಡಿಗುಂಟದ ಮೇಲೆ ಬಾಂಬ್ ಸುರಿಸುವುದೊಂದೇ ಅಲ್ಲ. ಪಾಕಿಸ್ತಾನದ ಮೇಲೆ ವಿವಿಧ ರೂಪದಲ್ಲಿ ಒತ್ತಡಗಳನ್ನು ಹೇರುವುದು, ಅಂತಾರಾಷ್ಟ್ರೀಯ ಸಮು ದಾಯದಿಂದ ಒಂಟಿಯನ್ನಾಗಿ ಮಾಡುವುದು ಇತ್ಯಾದಿಗಳೂ ಸೇರಿವೆ. ಉತ್ತರ ಕೊರಿಯಾದ ಮೇಲೆ ಅಮೇರಿಕ ಸದ್ಯ ಇದೇ ತಂತ್ರವನ್ನು ಬಳಸುತ್ತಿದೆ. ಒಂದೆಡೆ ಮಾತುಕತೆ ಮತ್ತು ಇನ್ನೊಂದೆಡೆ ಆರ್ಥಿಕ ದಿಗ್ಬಂಧನದಂತಹ ಒತ್ತಡ ತಂತ್ರ. ಟರ್ಕಿಯೂ ಸಿರಿಯದ ಗಡಿಗುಂಟದ ಮೇಲೆ ಇಂಥದ್ದೇ ದಾಳಿಯನ್ನು ಕೈಗೊಂಡಿದೆ ಮತ್ತು ಕೈಗೊಳ್ಳುತ್ತಲೂ ಇದೆ. ಟರ್ಕಿಯೊಳಗೆ ಭಯೋತ್ಪಾದನಾ ದಾಳಿಯನ್ನು ನಡೆಸುತ್ತಿರುವ ಪಿಕೆಎಫ್ ಎಂಬ ಪ್ರತ್ಯೇಕತಾವಾದಿ ಸಂಘಟನೆಯು ಸಿರಿಯಾದ ಗಡಿಯೊಳಗೆ ಆಶ್ರಯವನ್ನು ಪಡೆದಿರುವುದೇ ಇದಕ್ಕೆ ಕಾರಣ. ದಕ್ಷಿಣ ಕೊರಿಯದ ಮೇಲೆ ಸದಾ ಅಪಾಯದ ತೂಗು ಗತ್ತಿಯಂತಿರುವ ಉತ್ತರ ಕೊರಿಯಾದ ವಿರುದ್ಧ ಅಮೇರಿಕ ಯುದ್ಧ ಹೇರದೇ ಇರಲು ಕಾರಣ ಏನು? ಈ ಮಗ್ಗುಲೂ ಬಹಳ ಮುಖ್ಯ. ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳು ವುದಕ್ಕಿಂತ ಮೊದಲು ಭಾರತ ಈ ದಿಸೆಯಲ್ಲೂ ಅವಲೋಕನ ನಡೆಸಬೇಕು. ದುರ್ಬಲ ರಾಷ್ಟ್ರ ಯಾವಾಗಲೂ ಬಲಶಾಲಿ ರಾಷ್ಟ್ರದ ಬಗ್ಗೆ ಭಯದಲ್ಲೇ ಇರುತ್ತದೆ. ಬಲಶಾಲಿ ರಾಷ್ಟ್ರ ತನ್ನ ಹಿತಕ್ಕಾಗಿ ಕೈಗೊಳ್ಳುವ ಯಾವುದೇ ತೀರ್ಮಾನವನ್ನೂ ತನ್ನ ವಿರುದ್ಧವೆಂಬಂತೆ ಕಲ್ಪಿಸಿಕೊಳ್ಳುವುದು ಮತ್ತು ಸದಾ ಜಾಗೃತಾವಸ್ಥೆಯಲ್ಲಿರುವುದೂ ನಡೆಯುತ್ತಿರುತ್ತದೆ. ಪಾಕಿಸ್ತಾನ ಸದಾ ಇಂಥದ್ದೊಂದು ಭಯದಲ್ಲೇ ಇದ್ದಿರುವಂತಿದೆ. ರಕ್ಷಣೆಗಾಗಿ ಭಾರತ ಪ್ರತಿವರ್ಷ ಹೆಚ್ಚುವರಿ ಮೊತ್ತವನ್ನು ಕಾಯ್ದಿರಿಸುವುದನ್ನು ಅದು ಸಹಜವಾಗಿ ಸ್ವೀಕರಿಸುವ ಸಾಧ್ಯತೆಯಿಲ್ಲ. ನಮ್ಮ ವಿರುದ್ಧ ಭಾರತ ಯಾವುದೋ ಸಂಚು ನಡೆಸುತ್ತಿದೆ ಎಂದು ಅದು ಭಾವಿಸಬಹುದು. ಇದೊಂದೇ ಅಲ್ಲ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ನಡೆಸುತ್ತಿರುವ ಪ್ರಯೋಗಗಳು ಮತ್ತು ಸಾಧನೆಗಳು; ರಫೇಲ್‍ನಂತಹ ವಿವಿಧ ಯುದ್ಧ ವಿಮಾನಗಳ ಖರೀದಿ, ವೈಜ್ಞಾನಿಕ ಸಂಶೋಧನೆಗಳನ್ನೆಲ್ಲ ಪಾಕಿಸ್ತಾನ ಸಹಜವಾಗಿ ಸ್ವೀಕರಿಸಬೇಕೆಂದಿಲ್ಲ. ಭಾರತದ ಯುದ್ಧ ಸಾಮಗ್ರಿಗಳೆಲ್ಲ ತಮ್ಮನ್ನೇ ಗುರಿಯಾಗಿಸಿ ಸಜ್ಜಾಗಿ ನಿಂತಿವೆ ಎಂಬ ಭಾವನೆಯೊಂದು ಮೂಡಿ, ಅದು ಅಭದ್ರತೆಯಾಗಿ ಬೆಳೆದು, ಕೊನೆಗೆ ತನ್ನಲ್ಲಿರುವ ಏಕೈಕ ಆಯುಧವಾದ ಅಣ್ವಸ್ತ್ರದ ಮೇಲೆ ಅದು ಅತಿ ನಂಬಿಕೆಯನ್ನು ಇರಿಸಿಕೊಳ್ಳುವುದಕ್ಕೆ ಕಾರಣ ವಾಗಬಹುದು. ಉತ್ತರ ಕೊರಿಯಾದ ಸ್ಥಿತಿಯೂ ಬಹುತೇಕ ಇದುವೇ. ತನ್ನ ಪಕ್ಕದಲ್ಲೇ ಇರುವ ದಕ್ಷಿಣ ಕೊರಿಯಾದಲ್ಲಿ ಅಮೇರಿಕದ ಸೇನೆ ದೊಡ್ಡ ಸಂಖ್ಯೆಯಲ್ಲಿ ಠಿಕಾಣಿ ಹೂಡಿರುವುದನ್ನು ಅದು ಪ್ರತಿನಿತ್ಯ ವೀಕ್ಷಿಸುತ್ತಿದೆ. ಅಮೇರಿಕ ವಿವಿಧ ಆಧುನಿಕ ಯುದ್ಧಾಸ್ತ್ರಗಳನ್ನು ದಕ್ಷಿಣ ಕೊರಿಯಾಕ್ಕೆ ರವಾನಿಸುತ್ತಿದೆ. ಆರ್ಥಿಕ ನೆರವು ನೀಡುತ್ತಿದೆ. ದಕ್ಷಿಣ ಕೊರಿಯ ಚಿಕ್ಕ ರಾಷ್ಟ್ರವಾದರೂ ರಕ್ಷಣಾ ಬಜೆಟ್ ಅಂತೂ ಯಾವುದೇ ದೊಡ್ಡ ರಾಷ್ಟ್ರಕ್ಕೂ ಕಮ್ಮಿಯಿಲ್ಲ. ಉತ್ತರ ಕೊರಿಯದ ಮೇಲೆ ಈ ಎಲ್ಲ ಬೆಳವಣಿಗೆಗಳು ಖಂಡಿತ ಒತ್ತಡವನ್ನು ಹೇರುತ್ತಿರುತ್ತವೆ. ಅಭದ್ರತೆಯ ತೇಲು ದೋಣಿಯಲ್ಲಿ ಇರುವಂತಹ ಸ್ಥಿತಿ ಇದು. ಹೀಗಿರುವಾಗ ಅಣ್ವಸ್ತ್ರಗಳ ಮೇಲೆ ಉತ್ತರ ಕೊರಿಯಾವು ಅತೀ ಅವಲಂಬನೆಯನ್ನು ಹೊಂದುವುದು ಅಸಹಜವಲ್ಲ. ದಕ್ಷಿಣ ಕೊರಿಯಾದಿಂದ ಆಗುವ ಸಣ್ಣ ಕ್ರಿಯೆಗೂ ಅದು ಅತಿ ಅಪಾಯಕಾರಿಯಾದ ಪ್ರತಿಕ್ರಿಯೆಗೆ ಮುಂದಾಗಲೂ ಬಹುದು. ಈ ಭಯ ಅಮೇರಿಕಕ್ಕೆ ಇz್ದÉೀ ಇದೆ. ಆದ್ದರಿಂದಲೇ, ಅದು ಮಾತುಕತೆಯ ಬಾಗಿಲನ್ನು ತೆರೆದಿದೆ. ಆದರೆ, ನರೇಂದ್ರ ಮೋದಿ ಸರಕಾರ ಮಾಡಿರುವ ಪ್ರಮಾದ ಏನೆಂದರೆ, ತೆರೆದಿರುವ ಮಾತುಕತೆಯ ಬಾಗಿಲನ್ನು ಮುಚ್ಚಿರುವುದು ಮತ್ತು ತೋಳ್ಬಲದಲ್ಲೇ ನಂಬಿಕೆ ಇಟ್ಟಿರುವುದು.

ಅಂದಹಾಗೆ, ಒಂದು ತಲೆಗೆ ಹತ್ತು ತಲೆ ಅನ್ನುವುದು ಸುಲಭ. ಅಲ್ಲದೇ ಇಂಥ ಘೋಷಣೆಗೆ ಭಾವನೆಗಳನ್ನು ಮೀಟುವ ಸಾಮಥ್ರ್ಯವೂ ಇದೆ. ಆದರೆ ಸಮಸ್ಯೆಯ ಪರಿಹಾರದ ದೃಷ್ಟಿಯಿಂದ
ಇದೊಂದು ಗಂಭೀರ ವೈಫಲ್ಯ. ಇದಕ್ಕಿಂತ, ನಮ್ಮ ಆ ಒಂದು ತಲೆಯನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯವಾದ ಪ್ರಮುಖ 10 ತಲೆಗಳನ್ನು ನಮ್ಮ ಪರ ಒಲಿಸಿಕೊಳ್ಳುವುದು ಹೆಚ್ಚು ಉತ್ತಮ. ಇದರ ಜೊತೆಗೇ ಇಲ್ಲೊಂದು ಪ್ರಮುಖ ಪ್ರಶ್ನೆಯೂ ಇದೆ. ಪಕ್ಕದ ದುರ್ಬಲ ರಾಷ್ಟ್ರವೊಂದು ನಮ್ಮ ನೆಲದಲ್ಲಿ ಇಷ್ಟೊಂದು ಸಲೀಸಾಗಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಸಾಧ್ಯವಾಗುವುದು ಹೇಗೆ? ನಿಜವಾಗಿ, ಈ ಪ್ರಶ್ನೆಗೆ ಕಂಡುಕೊಳ್ಳುವ ಉತ್ತರದಲ್ಲೇ ಈ ಸಮಸ್ಯೆಗೆ ಪರಿಹಾರವೂ ಇದೆ ಎಂದು ಅನಿಸುತ್ತದೆ.ಕಾಶ್ಮೀರ ಇವತ್ತು ಭಾರತದ ಪಾಲಿನ ಕೆಂಡವಾಗಿರುವುದರಲ್ಲಿ ಕಾಶ್ಮೀರಿಗಳ ಪಾತ್ರವೇ ದೊಡ್ಡದು. ಪುಲ್ವಾಮ ಪ್ರಕರಣದಲ್ಲಿ ಭಾಗಿಯಾಗಿರುವುದೂ ಕಾಶ್ಮೀರಿ ಯುವಕನೇ. ಇದು ತೀರಾ ನಿರ್ಲಕ್ಷಿಸಬೇಕಾದ ವಿಷಯವಲ್ಲ. ನಮ್ಮದೇ ಗಡಿಯೊಳಗಿನ ಒಂದಷ್ಟು ಯುವಕರು ಸ್ವತಃ ಸಿಡಿಯುವುದಕ್ಕೆ ಸಿದ್ಧವಾಗುವುದೇಕೆ? ಅವರು ಯಾವ ಮನೆಯ ಮಕ್ಕಳು? ಅವರ ಸಮಸ್ಯೆಯೇನು? ಅವರು ಯಾರದೋ ದಾಳಗಳೋ ಅಥವಾ ವಿದ್ಯಾಭ್ಯಾಸ ಇರುವ ಮತ್ತು ಪ್ರಬುದ್ಧರಾದ ಯುವಕರೋ? ಕಾಶ್ಮೀರದಲ್ಲಿ ಅವರ ವಿಚಾರಧಾರೆಯನ್ನು ಪ್ರತಿನಿಧಿಸುವವರ ಸಂಖ್ಯೆ ಎಷ್ಟಿವೆ? ಅವು ಅಲ್ಪವೋ ಧಾರಾಳವೋ?

ಪಾಕಿಸ್ತಾನದ ಮೇಲೆ ಆರೋಪ ಹೊರಿಸುವ ಸಂದರ್ಭದಲ್ಲಿ ಭಾರತ ತನ್ನೊಳಗೇ ಹಾಕಿಕೊಳ್ಳಬೇಕಾದ ಪ್ರಶ್ನೆಗಳಿವು. ಪಾಕಿಸ್ತಾನ ಈ ಯುವಕರಿಗೆ ಬೆಂಬಲ ನೀಡುತ್ತಿರಬಹುದು. ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರಬಹುದು. ಗಡಿ ನುಸುಳುವುದಕ್ಕೆ ನೆರವನ್ನೂ ನೀಡುತ್ತಿರಬಹುದು. ಆದರೆ ಇವೆಲ್ಲ ಸಾಧ್ಯವಾಗುವುದು ಯುವಕರು ಲಭ್ಯವಾದಾಗ. ಆದ್ದರಿಂದ, ಈ ಯುವಕರೇಕೆ ಅಂಥದ್ದೊಂದು ಕ್ರೌರ್ಯಕ್ಕೆ ಸಿದ್ಧವಾಗುತ್ತಿದ್ದಾರೆ ಎಂಬ ಪ್ರಶ್ನೆ ಬಹುಮುಖ್ಯವಾಗಿ ನಮ್ಮನ್ನು ಕಾಡಬೇಕು. ಮತಾಂಧತೆ ಅನ್ನುವ ನಾಲ್ಕಕ್ಷರದ ಕಾರಣ ಕೊಟ್ಟು ಸುಮ್ಮನಾಗುವುದು ಸುಲಭ. ಆದರೆ ಇದು ನಿಜವೇ? ಭಾರತದಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿರುವ ರಾಜ್ಯಗಳು ಬೇರೆಯೂ ಇವೆಯಲ್ಲ. ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ ಇತ್ಯಾದಿ ರಾಜ್ಯಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಅಲ್ಲೆಲ್ಲಾ ಕಾಣಿಸಿಕೊಳ್ಳದ ಮತಾಂಧತೆ ಬರೇ ಕಾಶ್ಮೀರದಲ್ಲಿ ಮಾತ್ರ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು? ನಿಜವಾಗಿ, ಯಾವುದೇ ಪ್ರತಿಭಟನೆಯನ್ನು ಸುಲಭದಲ್ಲಿ ಮಟ್ಟಹಾಕುವುದಕ್ಕೆ ಮತಾಂಧತೆ, ದೇಶದ್ರೋಹ, ಧರ್ಮನಿಂದನೆ ಇತ್ಯಾದಿಗಳನ್ನು ಇವತ್ತು ಬಳಸಲಾಗುತ್ತಿದೆಯೇ ಹೊರತು ಇನ್ನೇನಕ್ಕಲ್ಲ. ಜೆ.ಎನ್.ಯು. ಪ್ರಕರಣ ಇದಕ್ಕೊಂದು ಉದಾಹರಣೆ. ಇತ್ತೀಚೆಗೆ ಅಲಿಗಢ ವಿಶ್ವವಿದ್ಯಾನಿಲಯದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಿಸಲಾಗಿದೆ ಎಂದು ಸುಳ್ಳು ಸುಳ್ಳೇ ವಿದ್ಯಾರ್ಥಿಗಳ ಮೇಲೆ ಆರೋಪ ಹೊರಿಸಿ ಪೋಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದು ಮತ್ತು ಬಳಿಕ ಸುಳ್ಳು ಎಂದು ಪ್ರಕರಣವನ್ನು ಕೈಬಿಟ್ಟದ್ದು ಇದಕ್ಕಿರುವ ಇನ್ನೊಂದು ಉದಾಹರಣೆ. ಕಾಶ್ಮೀರ ಸಮಸ್ಯೆಯ ಮೂಲ ಮತಾಂಧತೆಯದ್ದಲ್ಲ. ಅಸ್ತಿತ್ವದ್ದು. ಭಾರತ ಸ್ವತಂತ್ರಗೊಳ್ಳುವಾಗ ಹುಟ್ಟಿಕೊಂಡ ಈ ಸಮಸ್ಯೆಯನ್ನು ಮತಾಂಧತೆಗೆ ಕಟ್ಟಿಹಾಕುವುದರಿಂದ ಟಿ.ವಿ. ಚರ್ಚೆಯಲ್ಲಿ ಗೆಲ್ಲಬಹುದೇ ಹೊರತು ಕಾಶ್ಮೀರ ಕೆಂಡಕ್ಕೆ ನೀರು ಸುರಿಯಲಾಗದು.

ಮೂಲ ಬಿಕ್ಕಟ್ಟು ಏನು ಮತ್ತು ಇವತ್ತಿನ ಆಧುನಿಕ ಕಾಶ್ಮೀರಿ ಪೀಳಿಗೆಯ ಮನಸ್ಸಿನಲ್ಲಿ ಆ ಬಿಕ್ಕಟ್ಟು ಯಾವ ಸ್ವರೂಪವನ್ನು ಪಡೆದುಕೊಂಡಿದೆ ಎಂಬುದರ ಅಧ್ಯಯನ ನಡೆಯಬೇಕು. ಕಾಶ್ಮೀರ 1948ರಲ್ಲಿ ಭಾರತಕ್ಕೆ ಸೇರ್ಪಡೆಯಾಗುವುದಕ್ಕೆ ಕಾರಣವಾದ ಸಂದರ್ಭ-ಸನ್ನಿವೇಶಗಳು ಏನೇನೋ ಅವು ಅದೇ ರೂಪದಲ್ಲಿ ಅಷ್ಟೇ ಸ್ಪಷ್ಟವಾಗಿ ಇವತ್ತಿನ ಕಾಶ್ಮೀರಿ ಪೀಳಿಗೆಗೆ ತಿಳಿದಿರಬೇಕೆಂದಿಲ್ಲ. ಅದರ ವಿಕೃತ ಚಿತ್ರವೊಂದು ಅವರಲ್ಲಿರಲು ಸಾಧ್ಯ. ತಾವು ಭಾರತ ದಿಂದ ವಂಚನೆಗೆ ಒಳಗಾಗಿದ್ದೇವೆ ಎಂಬ ಭಾವನೆ ಅವರಲ್ಲಿ ಇದ್ದಿರಲೂ ಬಹುದು. ತಮ್ಮನ್ನು ಭಾರತ ಬಲವಂತವಾಗಿ ಹಿಡಿದಿಟ್ಟುಕೊಂಡಿದೆ ಎಂದು ಅವರು ಭಾವಿಸಿರಲೂ ಬಹುದು. ಇವು ಏನೇ ಇದ್ದರೂ ಇದನ್ನು ಸರಿಪಡಿಸಬೇಕಾದುದು ಮತ್ತು ಕಾಶ್ಮೀರಿಗಳಲ್ಲಿ ವಿಶ್ವಾಸ ತುಂಬಬೇಕಾದುದು ಪಾಕಿಸ್ತಾನವಲ್ಲ, ಭಾರತ. ಕಾಶ್ಮೀರದ ಸಮಸ್ಯೆಯನ್ನು ಮತಾಂಧತೆಯ ದೃಷ್ಟಿಯಿಂದ ಹೊರಗಿಟ್ಟು ನೋಡದ ಹೊರತು ಇದು ಸಾಧ್ಯವಲ್ಲ. ಅಷ್ಟಕ್ಕೂ,

21ನೇ ಶತಮಾಣದಲ್ಲಿ ಯುದ್ಧವೆಂಬುದು ಆಯ್ಕೆಯೇ ಅಲ್ಲ, ಅದೊಂದು ಅನಾಹುತ. ಕುರುಕ್ಷೇತ್ರದಲ್ಲೋ ಅಥವಾ ಮಕ್ಕಾದ ಸಮೀಪದ ಬದ್ರ್‍ನಲ್ಲೋ ನಡೆದಂತೆ ಈ ಕಾಲದಲ್ಲಿ ಯುದ್ಧ ನಡೆಯುವುದಿಲ್ಲ. 7ನೇ ಶತಮಾನದಲ್ಲಿ ಅಥವಾ ಕ್ರಿಸ್ತಪೂರ್ವದಲ್ಲಿ ಅಥವಾ ಪುರಾತನ ಕಾಲದಲ್ಲಿ ಯುದ್ಧ ನಡೆಯುತ್ತಿದ್ದುದು ಯುದ್ಧ ಭೂಮಿಯಲ್ಲಿ. ಯುದ್ಧವೆಂಬುದು ಅಲ್ಲಿಯೇ ಪ್ರಾರಂಭವಾಗಿ ಅಲ್ಲಿಗೆ ಮುಕ್ತಾಯಗೊಳ್ಳುತ್ತಿತ್ತು. ಎರಡೂ ಕಡೆಯ ಸೈನಿಕರಿಗಷ್ಟೇ ಯುದ್ಧ ಸೀಮಿತ. ಯುದ್ಧ ನಡೆಯುವ ಸ್ಥಳದ ಹೊರಗಿನ ಪ್ರದೇಶಗಳಿಗೂ ಯುದ್ಧಕ್ಕೂ ಯಾವ ಸಂಬಂಧ ಇರುತ್ತಿರಲಿಲ್ಲ. ಸಾವು-ನೋವು ಏನಿದ್ದರೂ ರಾಜರುಗಳು ಮತ್ತು ಸೈನಿಕರದ್ದೇ ಹೊರತು ಜನಸಾಮಾನ್ಯರದ್ದಲ್ಲ. ಆದರೆ, ಇವತ್ತಿನ ಯುದ್ಧ ಇದಕ್ಕಿಂತ ಸಂಪೂರ್ಣ ಭಿನ್ನ. ಇದರಲ್ಲಿ ಜನಸಾಮಾನ್ಯರೇ ಅತ್ಯಧಿಕ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಾರೆ. ಯುದ್ಧಕ್ಕೆ ದೂಡಿದವರು ಸಾವಿನಿಂದ ಪಾರಾಗುತ್ತಾರೆ. ಅಲ್ಲದೇ, ಇವತ್ತಿನ ಯುದ್ಧಕ್ಕೆ ನಿರ್ದಿಷ್ಟ ಸ್ಥಳವೆಂಬುದೇ ಇಲ್ಲ. ಇಡೀ ಪಾಕಿಸ್ತಾನವೇ ಭಾರತದ ಯುದ್ಧ ಸ್ಥಳ. ಹಾಗೆಯೇ ಸಂಪೂರ್ಣ ಭಾರತವೇ ಪಾಕಿಸ್ತಾನದ ಯುದ್ಧ ಭೂಮಿ. ಭಾರತದಲ್ಲಿ ಎಷ್ಟು ನಾಗರಿಕರು ಸಾವಿಗೀಡಾಗುತ್ತಾರೋ ಅದುವೇ ಪಾಕಿಸ್ತಾನದ ಯಶಸ್ಸು. ಭಾರತದ ಯಶಸ್ಸನ್ನೂ ಇದೇ ಮಾನದಂಡದಲ್ಲಿ ಅಳೆಯಲಾಗುತ್ತದೆ. ಪಾಕಿಸ್ತಾನದಲ್ಲಿ ಎಷ್ಟು ನಾಗರಿಕರ ಸಾವು-ನೋವು ಸಂಭವಿಸುತ್ತದೋ ಅದನ್ನೇ ಭಾರತದ ಯಶಸ್ಸಾಗಿ ಬಿಂಬಿಸಲಾಗುತ್ತದೆ. ಹಾಗಂತ,

ಇದು ಭಾರತ-ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಇರಾಕ್-ಇರಾನ್‍ಗಳಿಗೆ ಸಂಬಂಧಿಸಿಯೂ, ಉತ್ತರ ಕೊರಿಯಾ-ದಕ್ಷಿಣ ಕೊರಿಯಾಗಳಿಗೆ ಸಂಬಂಧಿಸಿಯೂ ಇದುವೇ ನಡೆಯುತ್ತದೆ. ಆದ್ದರಿಂದ ಯುದ್ಧದಾಹ ಪರಿಹಾರ ಅಲ್ಲ, ಸ್ವತಃ ಅದುವೇ ಒಂದು ಸಮಸ್ಯೆ. ಯುದ್ಧ ನಿರತ ಅಫಘಾನ್, ಇರಾಕ್, ಸಿರಿಯ, ಯಮನ್ ಮುಂತಾದವುಗಳೇ ಇದಕ್ಕೆ ಜೀವಂತ ಉದಾಹರಣೆ. ದಶಕಗಳಿಂದ ಕಟ್ಟಿದ ಆರ್ಥಿಕ ವ್ಯವಸ್ಥೆಯನ್ನು ಒಂದು ಬಾಂಬು ದರಾಶಾಹಿಯಾಗಿಸಿ ಬಿಡಬಲ್ಲ್ಲುದು. ಅಪಾರ ಹಣವನ್ನು ವ್ಯಯಿಸಿ ಕಟ್ಟಿದ ಬೃಹತ್ ಕಟ್ಟಡಗಳನ್ನು ಒಂದು ಮಿಸೈಲು ಕ್ಷಣಮಾತ್ರದಲ್ಲಿ ಉರುಳಿಸಬಲ್ಲುದು. ನಮ್ಮ ಉದ್ಯಮಗಳು, ಕೈಗಾರಿಕೆಗಳು, ರಾಜ ರಸ್ತೆಗಳು, ಪಟ್ಟಣಗಳು ಎಲ್ಲವನ್ನೂ ಪುರಾತನ ಕಾಲಕ್ಕೆ ಕೊಂಡೊಯ್ಯುವುದಕ್ಕೆ ಯುದ್ಧದಿಂದ ಸಾಧ್ಯವಿದೆ. ಆದ್ದರಿಂದ ಯುದ್ಧೋನ್ಮಾದವನ್ನು ಹಬ್ಬಿಸುವ ಮೊದಲು ಈ ಕುರಿತಾದ ಎಚ್ಚರಿಕೆ ಎಲ್ಲರಲ್ಲೂ ಇರಬೇಕು. ಯುದ್ಧವೆಂದರೆ ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಮೇಲೆ ಬಾಂಬ್ ಸುರಿಯುತ್ತದೆ ಎಂದಷ್ಟೇ ಅಲ್ಲ, ಪಾಕಿಸ್ತಾನದ ಕ್ಷಿಪಣಿಗಳು ಭಾರತದ ಮೇಲೂ ಬಾಂಬ್ ಸುರಿಯುತ್ತದೆ ಎಂಬುದೂ ಹೌದು. ಯುದ್ಧಕ್ಕಿರುವ ಈ ದ್ವಿಮುಖದ ಬಗ್ಗೆ ಅವಜ್ಞೆಯಿಂದ ವರ್ತಿಸುವುದು ಒಂದು ರೀತಿ ಯಲ್ಲಿ ಜನದ್ರೋಹವಾಗುತ್ತದೆ. ಈ ದೇಶ 130 ಕೋಟಿ ಭಾರತೀಯರದ್ದು. ಅವರೆಲ್ಲರನ್ನೂ ಸುಖವಾಗಿ ಮತ್ತು ಸುರಕ್ಷಿತವಾಗಿ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ. ಸಮಸ್ಯೆ ಎದುರಾದಾಗಲೆಲ್ಲ ಯುದ್ಧದ ಭಾಷೆಯಲ್ಲಿ ಮಾತಾಡುವುದೆಂದರೆ ಅದು ತಮ್ಮಿಂದಾದ ವೈಫಲ್ಯವನ್ನು ಮುಚ್ಚಿ ಹಾಕಲು ಶ್ರಮಿಸಿದಂತಾಗುತ್ತದೆ. ಇದು ರಾಜಕೀಯದಾಟ. ಅಲ್ಲದೆ ಸದಾ ಅಭದ್ರತೆಯಲ್ಲೇ ಬದುಕುವ ದೇಶವೊಂದರ ಮೇಲೆ ಘೋಷಿಸುವ ಯುದ್ಧವು ಅಣ್ವಸ್ತ್ರ ಪ್ರಯೋಗದಲ್ಲೇ ಕೊನೆಗೊಳ್ಳುವ ಸಾಧ್ಯತೆಯೇ ಹೆಚ್ಚು. ಅಣ್ವಸ್ತ್ರ ಬಳಕೆಯ ಹೊರತು ಪಾಕಿಸ್ತಾನದ ಮುಂದೆ ಅನ್ಯ ದಾರಿಯೂ ಇಲ್ಲ. ಇದರ ಜೊತೆಗೇ ಆಧುನಿಕ ಜಗತ್ತಿನ ಯುದ್ಧದ ಪರಿಕಲ್ಪನೆಯ ಬಗೆಗೂ ನಮ್ಮಲ್ಲಿ ಪ್ರಜ್ಞೆ ಇರಬೇಕು. ಇವತ್ತು ಯಾವುದೇ ಸಂಘರ್ಷವು ಎರಡು ರಾಷ್ಟ್ರಗಳ ನಡುವೆ ಮಾತ್ರ ನಡೆಯುವುದಲ್ಲ. ಬಾಹ್ಯ ನೋಟಕ್ಕೆ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವಂತೆ ಕಂಡರೂ ಅವೆರಡರ ಮರೆಯಲ್ಲಿ ಅನೇಕ ರಾಷ್ಟ್ರಗಳು ಅಕ್ಕ-ಪಕ್ಕ ಸೇರಿಕೊಂಡಿರುತ್ತವೆ. ಮುಖ್ಯವಾಗಿ, ಶಸ್ತ್ರಾಸ್ತ್ರಗಳ ವ್ಯಾಪಾರದ ಉದ್ದೇಶವೇ ಅದರ ಹಿಂದಿರುತ್ತದೆ. ಆದ್ದರಿಂದ ಎರಡು ರಾಷ್ಟ್ರಗಳ ನಡುವೆ ಯುದ್ಧ ಆರಂಭವಾಗಿದ್ದರೂ ಅದರ ಅಂತ್ಯವನ್ನು ನಿರ್ಧರಿಸುವ ಸಾಮರ್ಥ್ಯ ಅವೆರಡಕ್ಕಿರುವುದಿಲ್ಲ. ಇತರ ರಾಷ್ಟ್ರಗಳ ಗೋದಾಮಿನಲ್ಲಿರುವ ಶಸ್ತ್ರಾಸ್ತ್ರಗಳು ಖಾಲಿಯಾಗದೇ ಆ ಯುದ್ಧ ಕೊನೆಗೊಳ್ಳುವುದೂ ಇಲ್ಲ.

ಯುದ್ಧದಾಹಿಗಳಿಗೆ ಇದು ಗೊತ್ತಿರಲಿ.