ಸಂದರ್ಶನ: “ಯುವತಿಯರನ್ನು ರೋಲ್ ಮಾಡೆಲ್ ಆಗಿ ಪರಿವರ್ತಿಸುವುದು ನಮ್ಮ ಗುರಿ”- ಜಿಐಓ ನೂತನ ರಾಜ್ಯಾಧ್ಯಕ್ಷೆ ಉಮೈರಾ ಬಾನು

0
812

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್(ಜಿಐಓ) ಕರ್ನಾಟಕ ಘಟಕದ ನೂತನ ರಾಜ್ಯಾಧ್ಯಕ್ಷೆಯಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಉಮೈರಾ ಬಾನು ಅವರು ದಕ್ಷಿಣ  ಕನ್ನಡ ಜಿಲ್ಲೆಯ ಮಂಗಳೂರಿನವರು. ಸಾಲಿಡಾರಿಟಿ ಯೂತ್ ಮೂವ್‍ಮೆಂಟ್‍ನ ರಾಜ್ಯಾಧ್ಯಕ್ಷ ಶಬೀರ್ ಅಹ್ಮದ್ ಅವರ ಪತ್ನಿಯಾಗಿರುವ  ಇವರು ಎಂ.ಕಾಂ. ಪದವೀದರರಾಗಿದ್ದಾರೆ. ಇವರೊಂದಿಗೆ ಸನ್ಮಾರ್ಗ ನಡೆಸಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ. -ಸಂ.

? ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದೀರಿ? ಏನೇನು ಕನಸುಗಳಿವೆ?

√ ಜಿಐಓ ಅನ್ನು ಅದರ ಉದ್ದೇಶದೊಂದಿಗೆ ರಾಜ್ಯದಲ್ಲಿ ಮುಖ್ಯವಾಹಿನಿಗೆ ತರಬೇಕೆಂಬುದು ನನ್ನ ಮಹದಾಸೆ. ಅದೇರೀತಿ ಮುಸ್ಲಿಂ ಸಮುದಾಯದಲ್ಲಿ ಜಿಐಓ ಒಂದು ಪ್ರಮುಖ ಮಹಿಳಾ ಸಂಘಟನೆಯಾಗಬೇಕು ಎಂಬ ಆಸೆಯೂ ಇದೆ.

? ಜಿಐಓಗೂ ನಿಮಗೂ ಎಷ್ಟು ವರ್ಷಗಳ ಸಂಬಂಧ?

√ ಜಿಐಓನೊಂದಿಗೆ ನನಗೆ ಕಳೆದ ಹತ್ತು ವರ್ಷಗಳಿಂದ ಸಂಬಂಧವಿದೆ. ಸ್ಥಾನೀಯ ಮಟ್ಟದಲ್ಲಿ ಹಲವು ಹೊಣೆಗಾರಿಕೆ ಯನ್ನು ವಹಿಸಿದ್ದೇನೆ.  ಜಿಐಓ ನನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ  ಬದಲಿಸಿದೆ. ಧಾರ್ಮಿಕ, ಸಾಮಾಜಿಕ ಹಾಗೂ ಸಮಾಜ ಸೇವೆಯ ಕಾರ್ಯಗಳಿಗೆ ನನ್ನನ್ನು ಜಿಐಓ ಪ್ರೇರೇಪಿಸಿದೆ.

? ಜಿಐಓ ಹೇಗೆ ಕಾರ್ಯಾಚರಿಸುತ್ತದೆ? ಯಾವ ಇಶ್ಶೂಗಳ ಮೇಲೆ ಅದರ ಗಮನವಿದೆ?

√ ಜಿಐಓ ಕರ್ನಾಟಕ 15 ಮಂದಿಯ ಸಲಹಾ ಸಮಿತಿಯನ್ನು ಹೊಂದಿದೆ. ಪ್ರತಿ ಎರಡು ವರ್ಷಗಳ ಅವದಿಗೆ ಅದು ತನ್ನ ಧೋರಣೆ ಮತ್ತು  ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಒಳಿತಿನ ಉಪದೇಶ ಕೆಡುಕಿನ ನಿರ್ಮೂಲನಕ್ಕಾಗಿ ಕೆಲಸ ಮಾಡುವ ಯುವತಿಯರನ್ನು ತಯಾರು ಗೊಳಿಸಲಾಗುವುದು ಅದರ ಕಾರ್ಯಭಾರ. ವಿದ್ಯಾರ್ಥಿ ಯುವತಿಯರ ಪ್ರತಿಭೆಗಳನ್ನು ಗುರುತಿಸಿ,ಅದನ್ನು ಪೋಷಿಸಿ ಸುಧಾರಣೆ ಮಾಡುವುದು. ಹಾಗೂ ಅವರನ್ನು  ಎಲ್ಲ ಕ್ಷೇತ್ರಗಳಲ್ಲೂ ಪಳಗಿಸಿ ಅವರನ್ನು ಇಸ್ಲಾಮೀ ಆಂದೋಲನದೊಂದಿಗೆ ಜೋಡಿಸಿ ಅವರನ್ನು ಸಕ್ರಿಯಗೊಳಿಸುವುದು ಜಿಐಓ ಮುಖ್ಯ ಧ್ಯೇಯವಾಗಿದೆ. ಇದನ್ನು ಮುಂದಿಟ್ಟುಕೊಂಡು ಅದು ಹಲವಾರು ಧೋರಣೆ ಕಾರ್ಯಕ್ರಮಗಳನ್ನು ರೂಪಿಸುತ್ತದೆ.  ಧಾರ್ಮಿಕ, ಸಾಮಾಜಿಕ ಕೆಲಸಗಳಲ್ಲಿ ಅದು ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ. ಇಸ್ಲಾಮಿನ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ನೀಗಿಸುವುದು, ಸಂದೇಶ ಪ್ರಚಾರದಲ್ಲಿ ತೊಡಗಿಸಿ ಕೊಳ್ಳಲು ಪ್ರೇರೇಪಿಸುವುದು, ಹೆಣ್ಣಿನ ಮೇಲಾಗುವ ದೌರ್ಜನ್ಯದ ವಿರುದ್ಧ ದ್ವನಿ ಎತ್ತುವುದು, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿನಿ ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವುದನ್ನು ಅದು ಮಾಡುತ್ತದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಅಭಿಯಾನಗಳನ್ನು ಮಾಡುತ್ತದೆ. ಅನ್ಯಾಯ, ಅಸತ್ಯದ ವಿರುದ್ಧ ಧ್ವನಿಯೆತ್ತಲು ಹಾಗೂ ವಿದ್ಯಾರ್ಥಿನಿಯರಲ್ಲಿ ಹೋರಾಟದ ಭಾವನೆಗಳನ್ನು ಬೆಳೆಸಲು ಅದು ಪ್ರಯತ್ನಿಸುತ್ತದೆ. ಕೇವಲ ಧಾರ್ಮಿಕ ಜ್ಞಾನವನ್ನು ಕಲಿಸುವಂತಹ ಸಂಘಟನೆಯಾಗಿ ಇರುವುದಲ್ಲ ಬದಲಾಗಿ ಧಾರ್ಮಿಕ  ಪ್ರಜ್ಞೆಯನ್ನು ಹುಟ್ಟಿಸಿ ಸಮಾಜ ಸೇವೆಗೆ ಇಡೀ ಜೀವನವನ್ನು ಮುಡಿಪಾಗಿಡಲು ಜಿಐಓ ಪ್ರೇರೇಪಿಸುತ್ತದೆ.

? ಇಬ್ಬರು ಮಕ್ಕಳ ತಾಯಿಯಾಗಿ ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಕಷ್ಟ ಅನಿಸದೇ? ಅಧ್ಯಕ್ಷೆಯೆಂಬ ನೆಲೆಯಲ್ಲಿ ರಾಜ್ಯಾದ್ಯಾಂತ  ಪ್ರವಾಸ ಮಾಡುತ್ತಾ ಚಟುವಟಿಕೆಯಲ್ಲಿರಬೇಕಾಗಿದೆಯಲ್ಲವೇ?

√ ಕಷ್ಟಕರ ಎನಿಸಲ್ಲ. ಅಲ್‍ಹಮ್ದುಲಿಲ್ಲಾಹ್. ಅಲ್ಲಾಹನು ಕೊಟ್ಟಂತಹ ಜವಾಬ್ದಾರಿಯನ್ನು ನಿರ್ವ ಹಿಸಲು ಅದಕ್ಕೆ ನಾನು ಯಾವತ್ತೂ ಸಿದ್ಧ.  ಆರು ವರ್ಷಗಳಿಂದ ಜಿಐಓನಲ್ಲಿ ಹೊಣೆಗಾರಿಕೆ ನಿಭಾಯಿಸುತ್ತಿದ್ದೇವೆ. ರಾಜ್ಯ ಪ್ರವಾಸ ಕೈಗೊಳ್ಳುವುದು ಅಗತ್ಯ ವಾಗಿದೆ. ಅದನ್ನು ಇನ್ಶಾಅಲ್ಲಾಹ್ ನೆರವೇರಿಸಲು ಪ್ರಯತ್ನ ಪಡುತ್ತೇನೆ. ಸಂಘಟನಾ ಜವಾಬ್ದಾರಿಯನ್ನು ನೆರವೇರಿಸಿಕೊಳ್ಳಲು ಅಲ್ಲಾಹನು ಅನುಗ್ರಹಿಸಲಿ.

? ವಿದ್ಯಾರ್ಥಿನಿಯರು ಜಿಐಓವನ್ನು ಸೇರಬೇಕು ಎಂದು ನೀವು ಯಾಕೆ ಬಯಸುತ್ತೀರಿ? ಜಿಐಓನಲ್ಲಿ ಏನಿದೆ?

√ ಜಿಐಓ ಕೇವಲ ಧಾರ್ಮಿಕ ಜ್ಞಾನವನ್ನು ಕಲಿಸುವಂತಹ ಸಂಸ್ಥೆ ಅಥವಾ ಸಂಘಟನೆಯಲ್ಲ. ಅದು ಯುವತಿಯರಿಗೆ ನಾಯಕತ್ವ ಹಾಗೂ  ತಮ್ಮ ಪ್ರತಿಭೆಗಳನ್ನು ಪೋಷಿಸಲು ಮತ್ತು ಬೆಳೆ ಸಲು ವೇದಿಕೆಯನ್ನು ನೀಡುವಂತಹ ಸಂಘಟನೆಯಾಗಿದೆ.
ಓರ್ವ ಹೆಣ್ಣಿನ ವ್ಯಕ್ತಿತ್ವದ ಬದಲಾವಣೆಯಲ್ಲಿ ಜಿಐಓ ಮುಖ್ಯ ಪಾತ್ರ ವಹಿಸುತ್ತದೆ. ಯುವ ಸಮೂಹವು ಇತರ ಕೆಟ್ಟ ಚಟುವಟಿಕೆಗಳ ಕಡೆಗೆ  ಹೋಗದಂತೆ ಅವರನ್ನು ಸಮಾಜದ ಸುಧಾರಣಾ ಕಾರ್ಯದಲ್ಲಿ ನಿರತವಾಗಿಸಲು ಜಿಐಓ ಪ್ರೇರೇಪಿಸು ತ್ತದೆ. ವಿದ್ಯಾರ್ಥಿನಿಯರ ಶೈಕ್ಷಣಿಕ  ಗುಣಮಟ್ಟವನ್ನು ಉನ್ನತ ಗೊಳಿಸಲು ಜಿಐಓ ಯತ್ನಿಸುತ್ತದೆ.

? ಕಳೆದೆರಡು ವರ್ಷಗಳಲ್ಲಿ ಜಿಐಓನ ರಾಜ್ಯ ಸಲಹಾ ಸಮಿತಿಯಲ್ಲಿ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲವರೆಂಬ ನೆಲೆಯಲ್ಲಿ, ಎರಡು  ವರ್ಷದ ಸಾಧನೆಯನ್ನು ಹೇಳಬಹುದೇ?

√ ಎರಡು ವರ್ಷದಿಂದ ಜಿಐಓ ಸಲಹಾ ಸಮಿತಿಯಲ್ಲಿದ್ದೇನೆ. ಕಳೆದ ವರ್ಷದಿಂದ ಅನೇಕ ಬದಲಾವಣೆಗಳು ಆಗುತ್ತಾ ಇವೆ. ಸಾಮಾಜಿಕ  ಜಾಲತಾಣದಲ್ಲಿ ಗುರುತಿಸಿಕೊಂಡಿದ್ದೇವೆ. ಫೇಸ್‍ಬುಕ್, ವಾಟ್ಸ್‍ಅಪ್, ಇನ್‍ಸ್ಟಾಗ್ರಾಂಗಳಲ್ಲಿ ಸಕ್ರಿಯರಾಗಿದ್ದೇವೆ. ಸಾಮಾಜಿಕ ಕಾರ್ಯಕರ್ತ  ರೊಂದಿಗೆ ಕೆಲಸ ಮಾಡಿದ ಅನುಭವ ಇದೆ. 261 ಶಿಕ್ಷಣ ಸಂಸ್ಥೆಯಲ್ಲಿ ಜಿಐಓ ಕಾರ್ಯ ನಿರ್ವಹಿಸುತ್ತಿದೆ, ರಾಜ್ಯದಲ್ಲಿ ಒಟ್ಟು 24 ಜಿಲ್ಲೆಗಳಲ್ಲಿ ಜಿಐಓನ ಶಾಖೆಗಳು ಇವೆ.

? ಯುವತಿಯರು ಇವತ್ತು ಎದುರಿಸುತ್ತಿರುವ ಪ್ರಮುಖ ಸವಾಲುಗಳು ಏನೇನು?

√ ಇವತ್ತು ಯುವತಿಯರ ಮೇಲೆ ದೌರ್ಜನ್ಯ ನೀಡುತ್ತಿದೆ. ಅತ್ಯಾಚಾರ ಇದರಲ್ಲಿ ಒಂದು. ಮುಖ್ಯವಾಗಿ, ಮುಸ್ಲಿಂ ಹುಡುಗಿಯರನ್ನು ಕೆಲ  ವಿಷಯದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ತಲಾಕ್‍ನ ವಿಷಯದಲ್ಲಾಗಲಿ, ಲವ್ ಜಿಹಾದ್‍ನ ವಿಷಯದಲ್ಲಾಗಲಿ ಕ್ಯಾಂಪಸ್‍ಗಳಲ್ಲಿ ಹಿಜಾಬ್  ಧರಿಸದಂತೆ, ಪರೀಕ್ಷೆ ಬರೆಯದಂತೆ ಇತ್ಯಾದಿಗಳಿವೆ. ಇವೆಲ್ಲ ನಮ್ಮ ಪಾಲಿಗೆ ಒಂದು ಚಾಲೆಂಜ್ ಆಗಿರುತ್ತದೆ, ಇವೆಲ್ಲದರ ವಿರುದ್ಧ  ಹೋರಾಡಬೇಕು ಅನ್ನುವ ಇರಾದೆ ಇದೆ.

? ಯುವತಿಯರಿಗೆ ಮತ್ತು ಅವರ ಪಾಲಕರಿಗೆ ಸಂದೇಶವೇನು?

√ ಪ್ರತಿ ರಂಗದಲ್ಲೂ ಪ್ರತಿಕ್ಷೇತ್ರದಲ್ಲೂ ವಿದ್ಯಾರ್ಥಿ ಯುವತಿಯರು ಮುಂದೆ ಬರಬೇಕು. ಕೇವಲ ಕೆರಿಯರ್ oriented ಆಗಬಾರದು.  ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಶಕ್ತರಾಗಬೇಕು. ಯುವತಿಯರನ್ನು ಇಡೀ ಸಮಾಜಕ್ಕೆ ರೋಲ್ ಮಾಡೆಲ್‍ಗಳಾಗಬೇಕು.