ಮಲೇಷ್ಯಾದಲ್ಲಿ ಝಾಕಿರ್ ನಾಯ್ಕ್ ಸಾರ್ವಜನಿಕ ಭಾಷಣಗಳಿಗೆ ನಿಷೇಧ

0
474

ಸನ್ಮಾರ್ಗ ವಾರ್ತೆ

ಕೌಲಾಲಂಪುರ,ಆ.20: ಮಲೇಶ್ಯದ ಹಿಂದೂ ವಿಭಾಗದ ವಿರುದ್ಧ ದೇಷಪೂರಿತ ಭಾಷಣ ಮಾಡಿದ್ದಾರೆನ್ನಲಾದ ಝಾಕಿರ್ ನಾಯ್ಕ್‌ರ ಭಾಷಣಗಳಿಗೆ ಮಲೇಶ್ಯದಲ್ಲಿ ನಿಷೇಧ ಹೇರಲಾಗಿದೆ. ಮಲೇಶ್ಯದಲ್ಲಿ ಎಲ್ಲಿಯೂ ಝಾಕಿರ್ ನಾಯ್ಕ್ ಧಾರ್ಮಿಕ ಭಾಷಣ ಮಾಡಬಾರದೆಂದು ಮಲಯ್ ಸರಕಾರ ಆದೇಶ ಹೊರಡಿಸಿದೆ. ದೇಶ ಸುರಕ್ಷೆ, ಧಾರ್ಮಿಕ ಸೌಹಾರ್ದ, ಒಗ್ಗಟ್ಟನ್ನು ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿ ನಾಯ್ಕ್‌ರ ಭಾಷಣಗಳಿಗೆ ನಿಷೇಧ ಹೇರಲಾಯಿತು ಎಂದು ಮಲಯ್ ಪೊಲೀಸರು ಹೇಳಿದರು.

ಜನಾಂಗೀಯ ಪರಾಮರ್ಶೆಯು ದೇಶದ ಸಖ್ಯಕ್ಕೆ ಬಾಧಿಸುವುದರಿಂದ ನಾಯ್ಕ್‌ರ ಸಾರ್ವಜನಿಕ ಭಾಷಣಗಳನ್ನು ನಿಷೇಧಿಸಲಾಗಿದೆ ಎಂದು ರಾಯಲ್ ಮಲೇಶ್ಯನ್ ಪೊಲೀಸ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ದಾತುಕ್ ಅಸ್ಮಾವತಿ ಅಹ್ಮದ್ ಅಧಿಕೃತವಾಗಿ ತಿಳಿಸಿದರು. ಆಗಸ್ಟ್ ಮೂರರಂದು ಮಲೇಶ್ಯದ ಕೋಟಬಾರು ಎಂಬಲ್ಲಿ ಮಾಡಿದ ಭಾಷಣದಲ್ಲಿ ಹಿಂದೂಗಳು ಮತ್ತು ಚೀನದ ವಂಶೀಯರ ವಿರುದ್ಧ ಝಾಕಿರ್ ನಾಯ್ಕ್ ಹೇಳಿಕೆ ನೀಡಿದ್ದು ಮಲೇಶ್ಯದ ಹಿಂದೂಗಳು ಸ್ವಂತ ದೇಶದ ಪ್ರಧಾನಿಗಿಂತ ಹೆಚ್ಚು ಭಾರತದ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದರು.

ನಾಯ್ಕ್ ಕೋಮು ರಾಜಕೀಯ ಮಾಡಲು ಶ್ರಮಿಸುತ್ತಿದ್ದಾರೆ, ಕೋಮುಭಾವನೆಯನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಮುಹಾತೀರ್ ಮುಹಮ್ಮದ್ ಹೇಳಿದ್ದರು. ವಿವಾದ ಭಾಷಣದ ಬಳಿಕ ಮಲೇಶ್ಯದ ಏಳು ರಾಜ್ಯಗಳಲ್ಲಿ ನಾಯ್ಕ್‌ರ ಭಾಷಣಕ್ಕೆ ನಿಷೇಧ ಹೇರಲಾಗಿತ್ತು. ಘಟನೆಯಲ್ಲಿ ಎರಡು ಬಾರಿ ಮಲೇಶ್ಯನ್ ಪೊಲೀಸರು ನಾಯ್ಕ್‌ರ ವಿಚಾರಣೆ ನಡೆಸಿದ್ದಾರೆ. ಮಲೇಶ್ಯದ ಕಾನೂನು ಪ್ರಕಾರ ಶಾಂತಿಯನ್ನು ಕೆಡವಲು ಮನಃಪೂರ್ವಕ ಯತ್ನಿಸಿದ ಆರೋಪವನ್ನು ಝಾಕಿರ್ ನಾಯ್ಕ್ ವಿರುದ್ಧ ಹೊರಿಸಲಾಗಿದೆ. 2016ರಲ್ಲಿ ಕಪ್ಪುಹಣ ಬಿಳಿ ಮಾಡಿದ್ದು, ಧಾರ್ಮಿಕ ಭಾಷಣಗಳ ಮೂಲಕ ಭಯೋತ್ಪಾದನೆಗೆ ಪ್ರೇರೇಪಿಸಿದ ಆರೋಪಗಳಲ್ಲಿ ಝಾಕಿರ್ ನಾಯ್ಕ್ ವಿರುದ್ಧ ಈಗಾಗಲೇ ಕೇಸು ದಾಖಲಾಗಿದೆ.