ಮಹಿಳಾ ಪರ ಪ್ರವಾದಿ: ಪ್ರವಾದಿ ಮುಹಮ್ಮದ್(ಸ)

0
963

ಲೇಖಕಿ: ಲುಬ್ನ ಝಕೀಯ್ಯ

ಲೋಕ ಕಂಡ ಮಹಾನ್ ನಾಯಕರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವ ಪ್ರಭಾವಪೂರ್ಣ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಮಂದಿಯದ್ದು ಮಾತ್ರ. ಅಂತಹ ಪ್ರಭಾವಪೂರ್ಣ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರುತ್ತಾರೆ ಪ್ರವಾದಿ ಮುಹಮ್ಮದ್ (ಸ). ಇವರ ಕಾರ್ಯವೈಖರಿ ಮತ್ತು ಪ್ರಭಾವ ವ್ಯಾಪಿಸಲು ಮೂಲ ಕಾರಣ ಇವರ ಸುಧಾರಣಾ ತಂತ್ರ ಕೇವಲ ಒಂದು ರಂಗಕ್ಕಷ್ಟೇ ಸೀಮಿತವಾಗದಿರುವುದು. ಉತ್ತಮ ಕೌಟುಂಬಿಕ ವ್ಯಕ್ತಿಯಾಗುವಲ್ಲಿಂದ ಹಿಡಿದು ಅತ್ಯುತ್ತಮ ಸೇನಾಧಿಪತಿ, ರಾಷ್ಟ್ರ ನಿರ್ಮಾತೃ ಆಗುವಲ್ಲಿಯವರೆಗಿನ ವಿವಿಧ ರಂಗಗಳ ಉನ್ನತ ಮಾರ್ಗದರ್ಶನ ಇವರ ಬದುಕಿನಲ್ಲಿ ದೊರೆಯುವುದು ಒಂದು ವಿಶೇಷ.

ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದೆ ತನ್ನ ಸ್ವಬುದ್ಧಿಮತ್ತೆಯೊಂದಿಗೆ ಲೋಕದ ಆಗುಹೋಗುಗಳನ್ನು ಗ್ರಹಿಸುವ ಮತ್ತು ಅದಕ್ಕೆ ಪ್ರಬುದ್ಧ ವಿಶ್ಲೇಷಣೆ ನೀಡುವಂತಹ ಚಾಣಾಕ್ಷತನ ಇವರಲ್ಲಿ ರೂಢಮೂಲವಾಗಿತ್ತು. ಬಾಲ್ಯದಿಂದಲೇ ಇವರ ಬದುಕು ಸತ್ಯಸಂಧತೆ ಮತ್ತು ಪ್ರಾಮಾಣಿಕತೆಯಿಂದ ಮೇಳೈಸಿದ್ದು, ಯಾವುದೇ ದುರ್ಗುಣಗಳಿಲ್ಲದೆ ಸುಶೀಲ ಚಾರಿತ್ರ್ಯವಂತರಾಗಿ ಪ್ರಸಿದ್ಧರಾಗಿದ್ದರು. ತನಗೆ ದೇವವಾಣಿ ಅವತೀರ್ಣವಾಗುವವರೆಗೂ ಎಲ್ಲರ ಪ್ರೀತಿ,ವಿಶ್ವಾಸ, ನಂಬಿಕೆಗೆ ಅರ್ಹವಾಗಿದ್ದ ಈ ವ್ಯಕ್ತಿ ತಾನು ದೇವನ ವತಿಯಿಂದ ಬಂದ ಸಂದೇಶವನ್ನು ಜನರ ಮುಂದಿಡುವಾಗ ಅದಕ್ಕೂ, ತನಗೂ ಜನಮನ್ನಣೆ ದೊರೆಯಲಿಕ್ಕಿಲ್ಲ ಎಂಬ ಅರಿವಿದ್ದರೂ, ತಾನು ಜನಮೆಚ್ಚುಗೆಯನ್ನು ತನ್ನ ವ್ಯಕ್ತಿತ್ವಕ್ಕಾಗಿ ಪಡೆದು ಸ್ವಾರ್ಥಿಯಾಗುವುದಕ್ಕಿಂತ, ಜನರ ಸುಧಾರಣೆಯ ಹಾದಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಜನರ ವಿರೋಧ, ಮೂದಲಿಕೆ, ಅಪಹಾಸ್ಯ ಗಳನ್ನು ಎದುರಿಸಿ ಲೋಕಕಲ್ಯಾಣದ ಹಾದಿಯಲ್ಲಿ ತಮ್ಮನ್ನೂ, ತಮ್ಮ ಸರ್ವಸ್ವವನ್ನು ಅರ್ಪಿಸಿದ ಮಹಾನ್ ವ್ಯಕ್ತಿತ್ವ ಪ್ರವಾದಿ ಮುಹಮ್ಮದ್(ಸ)ರದ್ದು.

ಅಜ್ಞಾನ ಜನ್ಯ ಆಚರಣೆ,ಕ್ರೌರ್ಯ, ಸುಖ ಲೋಲುಪತೆಯಲ್ಲಿ ತಲ್ಲೀನವಾಗಿದ್ದ ಅರೇಬಿಯಾದ ಜನವರ್ಗಕ್ಕೆ ಸುಧಾರಣೆಯ, ಕ್ರಾಂತಿಯ ವಿಚಾರ ತೀರಾ ಅಸಂಭದ್ದವಾಗಿತ್ತು. ಏಕೆಂದರೆ ತಾವು ಮಾಡುತ್ತಿದ್ದದ್ದು ಕೆಡುಕು ಎಂಬ ಅರಿವಿದ್ದರೂ ಚಿತ್ತಾಕಾಂಕ್ಷೆಗಳ ದಾಸ್ಯತ್ವವು ಅವರನ್ನು ನೈತಿಕತೆಯ ಸೌಭಾಗ್ಯದಿಂದ ವಂಚಿತ ಗೊಳಿಸಿತ್ತು. ಸುಧಾರಣೆಯ ಅಗತ್ಯವಿದ್ದುದು ಕೇವಲ ಒಂದು ರಂಗದಲ್ಲಿ ಮಾತ್ರವಲ್ಲ. ಸಾಮಾಜಿಕ, ಆರ್ಥಿಕ, ರಾಜಕೀಯ ರಂಗಗಳು ಕ್ರೌರ್ಯ, ದಬ್ಬಾಳಿಕೆ, ರಕ್ತಪಿಪಾಸುತನಗಳಿoದ ಜರ್ಜರಿತವಾಗಿತ್ತು. ಬದುಕುವ ಹಕ್ಕು, ಧಾರ್ಮಿಕ ಹಕ್ಕು,ಸಾಮಾಜಿಕ ಹಕ್ಕುಗಳು ಉನ್ನತ ವರ್ಗ ಎಂದು ಕರೆಸ ಲ್ಪಡುತ್ತಿದ್ದ ಕೇವಲ ಕೆಲವೇ ಮಂದಿಗೆ ಸೀಮಿತವಾಗಿತ್ತು.

ಇಲ್ಲಿ ಹಕ್ಕು ವಂಚಿತರಾಗಿದ್ದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಮಹಿಳೆಯರೇ ಆಗಿದ್ದರು. ತನ್ನ ಜೀವಿಸಿರುವ ಹಕ್ಕೇ ನಿಷೇಧಿಸಲ್ಪಟ್ಟಿದ್ದ ಸಂದರ್ಭದಲ್ಲಿ, ಇಬ್ಬರು ಹೆಣ್ಣುಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಸಿದ ತಂದೆ ಸ್ವರ್ಗಕ್ಕೆ ಅರ್ಹನು ಎಂದು ಕಲಿಸಿಕೊಟ್ಟು, ಹೆಣ್ಣು ಮಗುವಿನ ಜನನದ ಸುದ್ದಿ ಕೇಳಿ ಮುಖ ಕರ್ರಗಾಗುತ್ತಿದ್ದ ಅರೇಬಿಯಾದ ಜನತೆ ನಿಬ್ಬೆರಗಾಗುವಂತೆ ಮಾಡಿದರು.

ನಾಳೆ ಪರಲೋಕದಲ್ಲಿ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಯಾವ ತಪ್ಪಿಗಾಗಿ ನಿನ್ನನ್ನು ಹೂಳಲಾಯಿತು? ಎಂದು ಕೇಳಲಾಗುವುದು ಎಂದು ಹೇಳಿ ಭಾವನಾತ್ಮಕವಾಗಿ ಜನರನ್ನು ಎಚ್ಚರಿಸಿದರು. ಮಾತಾಪಿತರಿಗೆ ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಸಮಾನ ಜವಾಬ್ದಾರಿಕೆ ಇದ್ದರೂ ಯಾರು ನಮ್ಮ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರು? ಎಂದು ಕೇಳಿದಾಗ ಮೂರು ಬಾರಿ ತಾಯಿ ಎಂದು ಹೇಳಿದ ನಂತರ ನಾಲ್ಕನೇ ಬಾರಿ ತಂದೆ ಎಂದು ಹೇಳಿ ಋಣಸಂದಾಯ ಮಾಡುವಲ್ಲಿ ಮಾತೆ ನಿಜವಾಗಿಯೂ ಅಧಿಕ ಪಟ್ಟು ಅರ್ಹತೆಯನ್ನು ಹೊಂದಿದ್ದಾಳೆ ಎಂದು ಕಲಿಸಿ, ಗರ್ಭಧಾರಣೆಯಿಂದ ಹಿಡಿದು ಜೀವನದ ವಿವಿಧ ಮಜಲುಗಳಲ್ಲಿ ಆಕೆ ತನ್ನ ಮಕ್ಕಳ ಬಗ್ಗೆ ಹೊಂದಿರುವ ಕಳಕಳಿಗೆ ಮನ್ನಣೆ ಯನ್ನು ಈ ಲೋಕದಲ್ಲೇ ನೀಡಲಾಯಿತು. ಮುಂದುವರಿದು, ನಿನ್ನ ತಾಯಿಯ ಪಾದದಡಿಯಲ್ಲಿ ಸ್ವರ್ಗವಿದೆ ಎಂದು, ಅದನ್ನು ಅರಸಲು ಆಕೆಯೊಂದಿಗೆ ಅತ್ಯುತ್ತಮ ವ್ಯವಹಾರ ಮಾಡಬೇಕೆಂದು ಕಲಿಸಿಕೊಟ್ಟು ಆಕೆಯ ಸ್ಥಾನವನ್ನು ಔನತ್ಯಕ್ಕೇರಿಸಲಾಯಿತು.

ಪತಿಯನ್ನು ಕಳಕೊಂಡ ವಿಧವೆ ಖಂಡಿತವಾಗಿಯೂ ಸಮಾಜಕ್ಕೆ ಒಂದು ಕಪ್ಪು ಚುಕ್ಕೆಯಲ್ಲ, ಬದಲಾಗಿ ಆಕೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುವವಳು ಎಂದು ಕಲಿಸಿಕೊಟ್ಟದ್ದು ಮಾತ್ರವಲ್ಲ ತನ್ನ ಕೌಮಾರ್ಯದಲ್ಲೇ 40 ವರ್ಷ ಪ್ರಾಯದ ವಿಧವೆ ಮಹಿಳೆಯನ್ನು ವಿವಾಹವಾಗಿ ಅದಕ್ಕೆ ಉತ್ತಮ ಮಾದರಿಯನ್ನು ತೋರಿಸಿದರು.

ಮಹಿಳೆಯ ಪಾಲಿಗೆ ತನ್ನ ಮನೆಯೇ ಪ್ರಥಮ ಕಾರ್ಯ ರಂಗವಾಗಿದ್ದರೂ, ಆಕೆಯ ಪ್ರತಿಭೆ, ಸಾಮರ್ಥ್ಯಗಳಿಗನುಸಾರ ಸಾಮಾಜಿಕ ಆರ್ಥಿಕ ರಾಜಕೀಯ ರಂಗದಲ್ಲಿ ಆಕೆ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಂಪೂರ್ಣ ಸ್ವತಂತ್ರಳು ಎಂದು ಮಹಿಳಾ ವಿಮೋಚನೆ, ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಬಲೀಕರಣದ ಕಹಳೆ ಮೊಳಗಿಸಿದ ಜಗನ್ ನಾಯಕರಲ್ಲಿ ಪ್ರಪ್ರಥಮವಾಗಿ ಪ್ರವಾದಿ ಮುಹಮ್ಮದ್(ಸ) ಎದ್ದು ನಿಲ್ಲುತ್ತಾರೆ. ಪ್ರವಾದಿ(ಸ)ರ ಕಾಲದಲ್ಲಿ ಕಲೆ-ಸಾಹಿತ್ಯ ಓದ್ಯೋಗಿಕ, ಯುದ್ಧ ಎಂಬಿತ್ಯಾದಿ ರಂಗಗಳಲ್ಲಿ ಅದ್ವಿತೀಯ ಕೊಡುಗೆಯನ್ನು ನೀಡಿದ ಅದೆಷ್ಟೋ ಮಹಿಳಾಮಣಿಗಳ ಉದಾಹರಣೆ ನಮಗೆ ಇತಿಹಾಸದಲ್ಲಿ ಸಿಗುತ್ತದೆ.

ಆಕೆಗೆ ಅತ್ಯುತ್ತಮ ಶಿಕ್ಷಣವನ್ನು ನೀಡಬೇಕು, ಆಕೆಯ ಅನುಮತಿಯಿಲ್ಲದೆ ವಿವಾಹ ಮಾಡಬಾರದು, ಆಸ್ತಿಯಲ್ಲಿ ಆಕೆಗೂ ಪಾಲು ನೀಡಬೇಕು, ವಿಧವೆ ಮಹಿಳೆಗೆ ಪುನರ್ವಿವಾಹ ಮಾಡಬೇಕು ಹಾಗೂ ವಿವಾಹ ವಿಚ್ಛೇದನ ಪಡೆಯುವ ಹಕ್ಕು ಕೇವಲ ಪುರುಷನದ್ದಲ್ಲ, ಮಹಿಳೆಯೂ ತನಗಿಷ್ಟವಿಲ್ಲದ ದಾಂಪತ್ಯ ಬಂಧನದಿಂದ ಸ್ವತಂತ್ರಳಾಗುವ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದಿದ್ದಾಳೆ ಎಂದು ಅರಬರಿಗೂ, ಇಡೀ ಜಗತ್ತಿಗೂ ಅಪರಿಚಿತವಾಗಿದ್ದ ಸ್ತ್ರೀಪರ ಧ್ವನಿಯನ್ನು ಪ್ರವಾದಿ(ಸ) ಮೊಳಗಿಸಿದರು.

ತಮ್ಮ ಮನೆಯವರ ಪಾಲಿಗೆ ಉತ್ತಮನಾದವನೇ ನಿಮ್ಮ ಪೈಕಿ ಅತ್ಯುತ್ತಮನು ಎಂದು ಕೌಟುಂಬಿಕ ನೆಲೆಗಟ್ಟಿಗೆ ಒಂದು ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಮಹಿಳೆಯರೊಂದಿಗೆ ಪ್ರೀತಿ ಅನುಕಂಪದಿಂದ ವರ್ತಿಸುವ, ಆಕೆಯ ಸ್ವಭಾವದ ಆಧಾರದಲ್ಲಿ, ಆಕೆ ಪಕ್ಕೆಲುಬಿನಂತೆ ಕೋಮಲವಾಗಿದ್ದು, ನಿಮ್ಮ ಗಡಸುತನದ ವರ್ತನೆಗೆ ಖಂಡಿತ ಆಕೆ ಅರ್ಹಳಲ್ಲ, ನಯ-ವಿನಯ ಸಭ್ಯತೆಯೊಂದಿಗೆ ಆಕೆಯೊಡನೆ ವ್ಯವಹರಿಸಿರಿ ಎಂದೂ, ಆಕೆಯ ಶಾರೀರಿಕ ಭಾವನಾತ್ಮಕ ವಿಷಯಗಳಿಗೆ ಪ್ರಾಶಸ್ತ್ಯ ನೀಡಿರಿ ಎಂದೂ ಕಲಿಸಿಕೊಟ್ಟರು. ಸಮಾಜದ ನೈತಿಕ ಆರೋಗ್ಯ ಕಾಪಾಡಲು ಹೆಚ್ಚು ಪ್ರಾಶಸ್ತ್ಯ ನೀಡಿದ ಪ್ರವಾದಿಯವರು ಮಹಿಳೆಯನ್ನು ಭೋಗದ ವಸ್ತುವೆಂದು ಪರಿಗಣಿಸುವುದರಿಂದ ತಡೆದರು, ಮಾತ್ರವಲ್ಲ ಅದಕ್ಕೆ ದಾರಿ ಮಾಡುವ ಎಲ್ಲ ವಿಷಯಗಳನ್ನೂ ನಿಷೇಧಿಸಿದರು.

ವ್ಯಭಿಚಾರ,ಅಶ್ಲೀಲತೆ,ಅನೈತಿಕತೆಯ ಎಲ್ಲಾ ಹಾದಿಯನ್ನು ಮುಚ್ಚಿ, ಮಹಿಳೆಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸಿದ ಮಹಿಳಾಪರ ಪ್ರವಾದಿ ಪ್ರವಾದಿ ಮಹಮ್ಮದ್(ಸ) ಎಂದರೆ ಅತಿಶಯೋಕ್ತಿಯಾಗಲಾರದು. ಮಹಿಳಾ ದೌರ್ಜನ್ಯ, ಅಸಮಾನತೆ, ಅತ್ಯಾಚಾರಗಳು ವ್ಯಾಪಕವಾಗಿರುವ ಇಂದಿನ ಜರ್ಜರಿತ ಸಮಾಜಕ್ಕೆ ಪ್ರವಾದಿಯವರ ಸಂದೇಶ,ಮಾರ್ಗದರ್ಶನ, ಮಾದರಿ, ತೀರಾ ಪ್ರಸ್ತುತ ಮತ್ತು ಅನುಕರಣಾಯೋಗ್ಯ.