ಮಹಿಳೆಗೆ ಬದುಕುವ ಹಕ್ಕು ನೀಡಿದ ಮಾನವತೆಯ ಮಾರ್ಗದರ್ಶಕ ಮುಹಮ್ಮದ್(ಸ)

0
899

ಲೇಖಕಿ: ಶಮೀರ ಜಹಾನ್,ಮಂಗಳೂರು

ಜಗತ್ತಿನ ಎಲ್ಲ ಮಸೀದಿಯ ಮಿನಾರಗಳಲ್ಲಿ, ಪ್ರತೀ ಆಝಾನ್ ನಲ್ಲಿ, ಪ್ರತೀ ನಮಾಝಿನಲ್ಲಿ ದಿನದ ಇಪ್ಪತ್ತನ್ನಾಲ್ಕು ಗಂಟೆಗಳಲ್ಲಿ ಮುಸಲ್ಮಾನರು ಅತ್ಯಧಿಕ ಸ್ಮರಿಸುವ ಏಕೈಕ ವ್ಯಕ್ತಿತ್ವ ಮುಹಮ್ಮದ್(ಸ)ರಾಗಿದ್ದಾರೆ.

ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರು ಎಂಬ ತಪ್ಪುಕಲ್ಪನೆಯಿದೆ. ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರಲ್ಲ ಭೋದಕರಾಗಿದ್ದರು.

ಒಮ್ಮೆಯೂ ಸುಳ್ಳು ಹೇಳದ ಕಾರಣ ಮಕ್ಕಾವಾಸಿಗಳು ಸತ್ಯಸಂಧ ಎಂಬ ಬಿರುದಿನಿಂದ ಕರೆಯುತ್ತಿದ್ದರು. ಯುವಕರಾಗಿದ್ದಾಗ ಶಾಂತಿಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಯುದ್ಧಪ್ರಿಯ ಅರಬರಿಂದ ಬೇಸತ್ತು ಹಿರಾ ಗುಹೆಯಲ್ಲಿ ಧ್ಯಾನಮಗ್ನರಾಗಿರುತ್ತಿದ್ದರು. ಕೆಟ್ಟು ಹೋದ ಸಮಾಜದ ಬಗ್ಗೆ ಚಿಂತಿತರಾಗಿದ್ದರು. ಹೀಗೆಯೇ ಒಂದು ದಿನ ದಿವ್ಯವಾಣಿ ಅವತೀರ್ಣವಾಗುತ್ತದೆ. ಭೂಮ್ಯಾಕಾಶಗಳ ಸೃಷ್ಟಿಕರ್ತನ ಪರಿಚಯವಾಗುತ್ತದೆ. ದೇವನ ಸಂದೇಶವನ್ನು ಜನರಿಗೆ ತಲುಪಿಸಬೇಕಾದ ಘನಜವಾಬ್ದಾರಿಯು ಲಭಿಸುತ್ತದೆ.”ಓದಿರಿ” ಎಂಬ ವಚನದಿಂದ ಆರಂಭವಾದ ದಿವ್ಯವಾಣಿ ಇಪ್ಪತ್ತಮೂರು ವರ್ಷಗಳಲ್ಲಿ ಕೊನೆಗೊಳ್ಳುತ್ತದೆ. ಇಪ್ಪತ್ತಮೂರು ವರ್ಷಗಳಲ್ಲಿ ಹದಿಮೂರು ವರ್ಷ ಮಕ್ಕದಲ್ಲಿ,ವಲಸೆಯ ಬಳಿಕ ಹತ್ತು ವರ್ಷ ಮದೀನದಲ್ಲಿ ಕಳೆಯುತ್ತಾರೆ. ಅರವತ್ತಮೂರು ಪ್ರಾಯದಲ್ಲಿ ನಿಧನರಾಗುತ್ತಾರೆ.

ಬಾಲ್ಯದಲ್ಲಿರುವಾಗ ಮುಹಮ್ಮದ(ಸ) ರ ಮುಖ ಲಕ್ಷಣಗಳನ್ನು ಗುರುತಿಸಿ “ಮುಹಮ್ಮದ್ ಈ ಬಾಲಕ ಪ್ರವಾದಿಯಾಗುತ್ತಾರೆ” ಎಂಬ ಸುವಾರ್ತೆ ನೀಡಿದವರು ಕ್ರೈಸ್ತ ಪಾದ್ರಿಯಾಗಿದ್ದರು. ಮುಹಮ್ಮದರು(ಸ) ಅವರ ತಾಯಿಯ ಮರಣದ ಬಳಿಕ ತಾತನ ಆಶ್ರಯದಲ್ಲಿ ಬೆಳೆದರು. ತಾತ ಅಬ್ದುಲ್ ಮುತ್ತಲಿಬ್ ಕುರೈಶ್ ಸರದಾರ ಬಹುದೇವಾರಾಧಕರಾಗಿದ್ದರು. ತಾತ ನಿಧನರಾದ ಬಳಿಕ ಅವರ ರಕ್ಷಕರಾಗಿ ಮರಣದ ವರೆಗೂ ಮುಹಮ್ಮದರನ್ನು ವಿರೋಧಿಗಳ ಕೈಗೆ ಕೊಡದೆ ಪ್ರೀತಿಸಿದ,ರಕ್ಷಿಸಿದ ಸಂದೇಶಪ್ರಚಾರಕ್ಕೆ ಸಂಪೂರ್ಣ ಬೆಂಬಲ ನೀಡಿದ ಅವರ ಚಿಕ್ಕಪ್ಪ ಅಬೂತಾಲಿಬ್ ಬಹುದೇವಾರಾಧಕರಾಗಿದ್ದರು. ಅಬೂತಾಲಿಬರ ಮರಣದ ಬಳಿಕ ವಿರೋಧಿಗಳು ಮುಹಮ್ಮದ್(ಸ) ರನ್ನು ಕೊಲ್ಲುವ ಸಂಚು ರೂಪಿಸಿದಾಗ ವಿರೋಧಿಗಳಿಂದ ರಕ್ಷಿಸಿ ಮಕ್ಕಾದಿಂದ ಮದೀನಾದ ಕಡೆಗೆ ವಲಸೆ ಹೋಗಲು ರಹಸ್ಯ ದಾರಿ ತೋರಿಸಿದ ಪ್ರವಾದಿಯ ಆಪ್ತ ಸಂಗಾತಿ ಅರೀಕತ್ ಬಹುದೇವಾರಾಧಕರಾಗಿದ್ದರು. ಆದ್ದರಿಂದ ಮುಹಮ್ಮದ್(ಸ)ರ ಮೇಲೆ ಮತಾಂತರದ ಆರೋಪ ಹೊರಿಸುವುದು,ಇಸ್ಲಾಮ್ ಧರ್ಮ ಖಡ್ಗದಿಂದ ಪಸರಿಸಿತು ಎಂಬ ಸುಳ್ಳುಪ್ರಚಾರ ಖಂಡಿತವಾಗಿಯೂ ಪಾಪವಾಗಿದೆ. ಮುಹಮ್ಮದರು ಶಾಂತಿಯ,ಸತ್ಯದ, ನ್ಯಾಯದ ವಾಹಕರಾಗಿದ್ದರು.

ಲೋಕದ ಅತ್ಯುತ್ತಮ ಸಂಪತ್ತು ಸಚ್ಚರಿತ ಹೆಣ್ಣು ಎಂಬ ಸಂದೇಶದೊಂದಿಗೆ ಜೀವಂತ ಹೂಳಲ್ಪಡುತ್ತಿದ್ದ ಹೆಣ್ಣುಮಗುವಿಗೆ ಬದುಕುವ ಹಕ್ಕು ನೀಡಿದರು.ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ವ್ಯಕ್ತಪಡಿಸುವ ವ್ಯಕ್ತಿಸ್ವಾತಂತ್ರ್ಯ ನೀಡಿ ವಿಧ್ವಾಂಸೆಯ ಸ್ಥಾನ ದೊರಕಿಸಿಕೊಟ್ಟರು. ಸಂಪಾದಿಸಿದ ಹಣದಿಂದ ಪರಿಸರದ ಮಕ್ಕಳಿಗೆ ಏನಾದರೂ ಹಂಚುತ್ತಿದ್ದರು. ವಿಧವೆಯರು, ನಿರ್ಗತಿಕರಿಗೆ ನೀಡುತ್ತಿದ್ದರು. ವೃದ್ಧರ ಭಾರವನ್ನು ಹೊರುತ್ತಿದ್ದರು. ಈ ಕಾರಣದಿಂದಲೇ ಮಕ್ಕಾದ ಬಹುದೇವಾರಾಧಕ ಮಹಿಳೆಯರಿರಲಿ, ಪುರುಷರಿರಲಿ, ಮಕ್ಕಳಿರಲಿ ಯಾರೂ ಅವರನ್ನು ವಿರೋಧಿಸಲಿಲ್ಲ ವಿರೋಧಿಗಳ ಕಿರುಕುಳ ಸಹಿಸಲಾರದೆ ಸ್ವಂತ ಊರಿನಿಂದ ವಲಸೆ ಹೋದ “ಪ್ರವಾದಿಯ ಅನುಚರರನ್ನು” ನೀವು ಊರು ಬಿಟ್ಟು ಹೋಗಬಾರದು ನಾವು ನಿಮಗೆ ಆಶ್ರಯ ನೀಡುತ್ತೇವೆ” ಎಂದು ಹೇಳಿದ ಗೋತ್ರದ ಸರದಾರ ಇಬ್ನುದುಗ್ನಾ ಬಹುದೇವಾರಾಧಕರಾಗಿದ್ದರು. ಆದುದರಿಂದ ಇತಿಹಾಸದುದ್ದಕ್ಕೂ ಪ್ರವಾದಿಗಳನ್ನು ಅವರು ತಂದ ಶಾಂತಿಯ ಸಂದೇಶಗಳನ್ನು ವಿರೋಧಿಸಿ ಶತ್ರುಗಳಾಗಿ ಮಾರ್ಪಟ್ಟವರು, ಅಪಪ್ರಚಾರ ಮಾಡಿದವರು, ಬೇರೆ ಯಾರೂ ಅಲ್ಲ ಸ್ವಪ್ರತಿಷ್ಠೆಗಾಗಿ,ಅಧಿಕಾರಕ್ಕಾಗಿ ಜನರನ್ನು ಕೊಲೆ ಮಾಡುವವರು,ಜನರನ್ನು ವಂಚಿಸುವವರು, ಸ್ತ್ರೀಯರನ್ನು ಗೌರವಿಸದವರು, ಮಕ್ಕಳನ್ನು ಪ್ರೀತಿಸದವರು, ಸ್ವೇಚ್ಛಾಚಾರಿಗಳು, ಕಠಿಣ ಹೃದಯಿಗಳು, ಜನರ ಹಕ್ಕುಚ್ಯುತಿ ಮಾಡುವವರು ಎಂಬುದೇ ಸತ್ಯವಾಗಿದೆ.