ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ. 19: ಬಾಬರಿ ಮಸೀದಿ- ರಾಮಮಂದಿರ ಜಮೀನು ತನಗೆ ಸೇರಿದ್ದು ಎಂಬ ವಾದದೊಂದಿಗೆ ಕೊನೆಯ ಮೊಗಲ್ ದೊರೆ ಬಹಾದೂರ್ ಶಾ ಝಫರ್ ರ ಪೀಳಿಗೆಯವರೆಂದು ಹೇಳಲಾಗುವ ಹಬೀಬುದ್ದೀನ್ ತುಸಿ ರಂಗಪ್ರವೇಶಿಸಿದ್ದು ಬಾಬರಿ ಜಮೀನಿನ ನೈಜ ಹಕ್ಕುದಾರ ತಾನು ಎಂದು ಹೇಳುತ್ತಿದ್ದಾರೆ. ವಿವಾದಿತ ಜಮೀನನ್ನು ತನಗೆ ಹಸ್ತಾಂತರಿಸಬೇಕು. ಸುಪ್ರೀಂಕೋರ್ಟು ತನಗೆ ಹಸ್ತಾಂತರಿಸಿದರೆ ರಾಮಮಂದಿರಕ್ಕೆ ಎಲ್ಲ ಜಮೀನನ್ನು ಕೊಡುವೆ. ಮಸೀದಿ ಇರುವ ಸ್ಥಳದಲ್ಲಿ ದೇವಸ್ಥಾನ ಇತ್ತೆಂಬುದು ತನ್ನ ನಂಬಿಕೆಯಾಗಿದೆ ಎಂದು ಅವರು ಹೇಳಿದರು.
ಮೊಗಲ್ ದೊರೆ ಬಾಬರ್ 1529ರಲ್ಲಿ ಅಯೋಧ್ಯೆಯಲ್ಲಿ ಮಸೀದಿ ಕಟ್ಟಿಸಿದ್ದನು. ಅದಕ್ಕಿಂತ ಮೊದಲು ಅಲ್ಲಿ ದೇವಸ್ಥಾನ ಇತ್ತು. ರಾಮಮಂದಿರ ಪುನಃ ಕಟ್ಟುವಾಗ ಚಿನ್ನದ ಒಂದು ಕಲ್ಲನ್ನು ತಾನು ಕೊಡುಗೆ ನೀಡುವೆ ಎಂದು ಹಬೀಬುದ್ದೀನ್ ತೂಸಿ ಹೇಳಿದರು. ವಿವಾದಿತ ಜಮೀನು ಮೊಗಲ್ ವಂಶಕ್ಕೆ ಸೇರಿದ್ದು ಎಂದು ಸಾಬೀತುಪಡಿಸುವುದಕ್ಕೆ ಅಗತ್ಯವಾದ ದಾಖಲೆಗಳನ್ನು ಸುಪ್ರೀಂಕೋರ್ಟಿಗೆ ನೀಡಿರುವೆನು. ತನ್ನ ಅರ್ಜಿಯ ವಾದ ಆಲಿಸುವುದಾಗಿ ಸುಪ್ರೀಂಕೋರ್ಟು ತಿಳಿಸಿದೆ ಎಂದು ಅವರು ಹೇಳಿದರು.
ಹಬೀಬುದ್ದೀನ್ ತುಸಿ ಮೂರು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದರು. ದೇವಸ್ಥಾನ ಇತ್ತು ಎಂದು ಹೇಳಲಾಗುವ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು ರಾಮಮಂದಿರ ಕೆಡವಿದ್ದಕ್ಕಾಗಿ ಹಿಂದೂಗಳ ಕ್ಷಮೆಯಾಚಿಸಿದ್ದರು.












