ಸಾಧುಗಳನ್ನು ಹತ್ಯೆಗೈದವರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ: ಬಂಧಿತ 101 ಮಂದಿಯ ಹೆಸರು ಬಿಡುಗಡೆಗೊಳಿಸಿ ಸಡ್ಡು ಹೊಡೆದ ಮಹಾರಾಷ್ಟ್ರ ಗೃಹ ಸಚಿವ

0
77433

ಸನ್ಮಾರ್ಗ ವಾರ್ತೆ

ಮುಂಬೈಎಪ್ರಿಲ್ 23- ಇಲ್ಲಿನ ಪಾಲ್ ಘಾರ್ ನಲ್ಲಿ ಇಬ್ಬರು ಸಾಧುಗಳೂ ಸೇರಿದಂತೆ ಮೂವರನ್ನು ಥಳಿಸಿ ಕೊಂದ ಘಟನೆಗೆ ಕೋಮು ಬಣ್ಣ ಹಚ್ಚುತ್ತಿರುವ ವಿಪಕ್ಷದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರು ಆ ಪ್ರಕರಣದಲ್ಲಿ ಬಂಧಿಸಲಾದ 101 ಆರೋಪಿಗಳ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಇಲ್ಲ ಎಂದು ಹೇಳಿದ್ದಾರೆ.

ಬಂದಿತರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಆರೋಪಿ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ರಾಜಕೀಯವನ್ನು ನಡೆಸುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ಬಂದಿತ 101 ಮಂದಿಯ ಹೆಸರನ್ನು ಬಹಿರಂಗಗೊಳಿಸಿದ ದೇಶಮುಖ್ ಅವರು, ಯಾರು ಈ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚುತ್ತಾರೋ ಅವರು ಈ ಬಂದಿತರ ಪಟ್ಟಿಯನ್ನೊಮ್ಮೆ ನೋಡಲಿ ಎಂದು ಟ್ವೀಟ್ ಮಾಡಿದ್ದಾರೆ. ಇದು ರಾಜಕೀಯ ಕೆಸರೆರಚಾಟದ ಸಮಯವಲ್ಲ, ನಾವು ಒಟ್ಟಾಗಿ ಕೊರೋನಾದ ವಿರುದ್ಧ ಹೋರಾಡಬೇಕಾಗಿದೆ ಎಂದು ದೇಶಮುಖ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಂಗಳವಾರದಂದು ಮಹಾರಾಷ್ಟ್ರದ ಪೊಲೀಸರು ಒಂಬತ್ತು ಅಪ್ರಾಪ್ತರು ಸೇರಿದಂತೆ 101 ಮಂದಿಯನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಿದ್ದರು.

ಆದಿತ್ಯವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ಒಂದರಲ್ಲಿ ಸಂತ್ರಸ್ತರನ್ನು ಪೊಲೀಸ್ ವಾಹನದಿಂದ ಹೊರಗೆಳೆದು ದೊಣ್ಣೆ ಮತ್ತು ಕಲ್ಲಿನಿಂದ ಗುಂಪೊಂದು ಹಲ್ಲೆ ನಡೆಸಿರುವುದು ಕಾಣಿಸಿತ್ತು. ಅದರಲ್ಲಿ ಓರ್ವ ಸಂತ್ರಸ್ತರು ರಕ್ಷಣೆಗಾಗಿ ಪೊಲೀಸರ ಕೈ ಹಿಡಿದಿರುವುದು ಮತ್ತು ಪೊಲೀಸರು ಕೈ ಕೊಡವಿಕೊಂಡು ಪೊಲೀಸ್ ವಾಹನದತ್ತ ನಡೆದಿರುವುದು ಕೂಡ ವಿಡಿಯೋದಲ್ಲಿ ಕಾಣಿಸಿತ್ತು

ಸಾವಿಗೀಡಾದ ಇಬ್ಬರು ಸಾಧುಗಳು ಕೇಸರಿ ಕುರ್ತಾ ಮತ್ತು ದೋತಿಯನ್ನು ಧರಿಸಿದ್ದು ಅವರನ್ನು ಕಲ್ ಪ್ರುಕ್ಷ್ ಗಿರಿ ಮತ್ತು ಚಿಂಕೆ ಮಹಾರಾಜ್ ಎಂದು ಗುರುತಿಸಲಾಗಿದೆ. ಇವರು ಗಾಂಡಿವಿಲಿ ಆಶ್ರಮದವರಾಗಿದ್ದು, ಚಾಲಕ ನೀಲೇಶ್ ತೆಲಗಾಂದೆ ಜೊತೆ ವಾಹನದಲ್ಲಿ ಒಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವುದಕ್ಕಾಗಿ ಸೂರತ್ ಗೆ ಪ್ರಯಾಣಿಸುತ್ತಿದ್ದರು. ಆದರೆ, ಇವರು ಮಕ್ಕಳ ಕಳ್ಳರೆಂದು ಮತ್ತು ಅಂಗಾಂಗಗಳನ್ನು ಮಾರಾಟ ಮಾಡುವವರೆಂದು ತಪ್ಪು ತಿಳಿದುಕೊಂಡ ಪಾಲ್ ಘಾರ್ ನ ಬುಡಕಟ್ಟುಗಳೇ ಇರುವ ಪ್ರದೇಶದ ಮಂದಿ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.