ಸನ್ಮಾರ್ಗ ವಾರ್ತೆ
ಮುಂಬೈ,ಆ. 20: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯೊಂದರಲ್ಲಿಯೇ ಎರಡು ವರ್ಷದೊಳಗೆ 800ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿವೆ ಎಂದು ಮಹಾರಾಷ್ಟ್ರ ಸರಕಾರ ವಿಧಾನಸಭೆಯಲ್ಲಿ ತಿಳಿಸಿದೆ. ಹಸಿವು, ಪೌಷ್ಟಿಕ ಆಹಾರದ ಕೊರತೆಯಿಂದ ರೋಗ ಬಾಧಿಸಿ ಮಕ್ಕಳ ಸಾವು ಸಂಭವಿಸಿದೆ ಎಂದು ಸದನದಲ್ಲಿ ವಿವರಿಸಲಾಗಿದೆ.
ಆದರೆ, ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳ ಸಾವು ಸಂಭವಿಸಿಲ್ಲ ಎಂದು ಮಹಿಳಾ-ಶಿಶು ಕಲ್ಯಾಣ ಸಚಿವೆ ಪಂಕಜ ಮುಂಡೆ ಹೇಳಿದ್ದಾರೆ. ಜಿಲ್ಲೆಯ ಬಹುತೇಕ ಗುಡ್ಡಗಾಡು ವಿಭಾಗದವರಲ್ಲಿ ಈ ಸಾವು ಸಂಭವಿಸಿದೆ. 2017- 2018ರಲ್ಲಿ ಆರು ವರ್ಷದವರೆಗಿನ 469 ಮಕ್ಕಳು ಮೃತಪಟ್ಟಿವೆ. 2018-19 ರ ಅವಧಿಯಲ್ಲಿ 348 ಮಕ್ಕಳ ಸಾವು ಸಂಭವಿಸಿದೆ. ಅಮರಾವತಿ ಜಿಲ್ಲೆಯ ಮೇಲ್ಘಾಟ್ನಲ್ಲಿ 2017ರಿಂದ 2019ರವರೆಗೆ 677 ಮಕ್ಕಳು ಮೃತಪಟ್ಟಿದ್ದಾರೆ.
ಅಕಾಲಿಕ ಹೆರಿಗೆ, ಹೃದಯಕ್ಕೆ ಸಂಬಂಧಿಸಿದ ರೋಗ, ಕಡಿಮೆ ತೂಕ ಇತ್ಯಾದಿ ಮಕ್ಕಳ ಸಾವಿಗೆ ಕಾರಣವೆಂದು ಸೂಚಿಸಲಾಗಿದ್ದು ನ್ಯೂಮೋನಿಯ, ಕ್ಷಯ ರೋಗವೂ ಕಾರಣವೆನ್ನಲಾಗಿದೆ. ಆದರೆ ಮೂಲ ಕಾರಣ ಹಸಿವು ಎಂದು ಮಾಜಿ ಶಾಸಕರೊಬ್ಬರು ತಿಳಿಸಿದರು. ಸರಕಾರದ ಅಧೀನದ ಟ್ರೈಬಲ್ ಡೆವಲಪ್ಮೆಂಟ್ ಕಮಿಟಿ ಅಧ್ಯಕ್ಷ ವಿವೇಕ್ ಪಂಡಿತ್ ಕೂಡ ಹೀಗೆ ಹೇಳಿದರು. ಪೌಷ್ಟಿಕ ಆಹಾರದ ಕೊರತೆಯಿಂದಾಗಿಯೇ ಮಕ್ಕಳಲ್ಲಿ ರೋಗಪ್ರತಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದುವೇ ಮಕ್ಕಳು ರೋಗಿಯಾಗುವುದಕ್ಕೆ ಕಾರಣವೆಂದು ಅವರು ಹೇಳಿದರು.












