ಸನ್ಮಾರ್ಗ ವಾರ್ತೆ-
ಬೆಂಗಳೂರು; ಆ.21- ಪ್ರವಾಹದಿಂದ ಸಂತ್ರಸ್ಥರಾದವರು ಮಾಧ್ಯಮ ಮುಖಪುಟದಿಂದ ಮತ್ತು ಟಿವಿ ಚಾನೆಲ್ ಗಳ ಪ್ರೈಮ್ ಟೈಮ್ ನಿಂದ ನಿಧಾನಕ್ಕೆ ಮರೆಯಾಗುತ್ತಿದ್ದು, ಇದರಿಂದಾಗಿ ಸಂತ್ರಸ್ತರ ಬಗೆಗಿನ ಸಾರ್ವಜನಿಕ ಗಮನ ಬೇರೆಡೆ ತಿರುಗುತ್ತಿದೆ. ಆದರೆ, ಸಂತ್ರಸ್ತರ ಗೋಳಾಟ ನಿಂತಿಲ್ಲ. ಅವರ ಕಡೆಗೆ ದೀರ್ಘ ಕಾಲೀನ ಗಮನದ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜಮಾಅತ್ ನ ಕಾರ್ಯಕರ್ತರು ಮತ್ತು ಇದರ ಅಂಗ ಸಂಸ್ಥೆಯಾದ HRS ನ ಕಾರ್ಯಕರ್ತರು ಜೊತೆಗೂಡಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರ ವಿವರಗಳು ಈ ಕೆಳಗಿವೆ.
ಕೊಡಗು- ಸಿದ್ಧಾಪುರ
ಜಲಪ್ರಳಯದ ಅನಾಹುತಗಳಿಗೆ ತಕ್ಷಣ ಸ್ಪಂದಿಸಿದ ಸಿದ್ಧಾಪುರದ ಜಮಾಅತ್ ಹಾಗೂ ಎಚ್.ಆರ್.ಎಸ್. ಕಾರ್ಯಕರ್ತರು ಆಹೋರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ರಿಲೀಫ್ ಸೆಲ್ ಆರಂಭಿಸಲಾಗಿದ್ದು, ಇದನ್ನು ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಇದು ದಿನಪೂರ್ತಿ ಸೇವಾ ಕಾರ್ಯದಲ್ಲಿದೆ. ಸಂತ್ರಸ್ತರು ತಂಡೋಪತಂಡವಾಗಿ ರಿಲೀಫ್ ಸೆಲ್ಗೆ ಭೇಟಿ ನೀಡುತ್ತಿದ್ದಾರೆ.
ಹಿರಾ ಮಸೀದಿಯಲ್ಲಿ ಸೂಪರ್ ಮಾರ್ಕೆಟ್!
ರಿಲೀಫ್ ಸೆಲ್ನ ವತಿಯಿಂದ ಇಲ್ಲಿನ ಹಿರಾ ಮಸೀದಿಯ ಕೆಳ ಅಂತಸ್ತಿನಲ್ಲಿ ದಾನಿಗಳಿಂದ ಸಂಗ್ರಹಿಸಿದ ದಿನಬಳಕೆ ವಸ್ತುಗಳ ಸೂಪರ್ ಮಾರ್ಕೆಟ್ ತೆರೆಯಲಾಗಿದ್ದು, ಜಾತಿ-ಮತ-ಲಿಂಗ ಬೇಧವಿಲ್ಲದೇ ನೆರೆ ಸಂತ್ರಸ್ತರು ತಮ್ಮ ಅಗತ್ಯದ ವಸ್ತುಗಳನ್ನು ಉಚಿತವಾಗಿ ಪಡಕೊಂಡು ತಮ್ಮ ಕೇಂದ್ರಗಳಿಗೆ ಮರಳುತ್ತಿದ್ದಾರೆ.
ಜಲ ಪ್ರಳಯದ ವೇಳೆ ಮನೆಮಾರು ಕಳಕೊಂಡವರಿಗೆ ವಿವಿಧ ಭಾಗಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ನೆಲ್ಯಹುದಿಕೇರಿಯಲ್ಲಿ ಒಂದೇ ಗೋಡೆಯ ಅಂತರದಲ್ಲಿದ್ದ ಮಸೀದಿ ಮತ್ತು ಮಂದಿರದಲ್ಲೂ ಪರಿಹಾರ ಕೇಂದ್ರವನ್ನು ಆರಂಭಿಸಲಾಗಿತ್ತು. ಮಸೀದಿಯ ಮದರಸದಲ್ಲಿ ಹೆಚ್ಚು ಸೌಕರ್ಯವಿದ್ದುದರಿಂದ ಜಾತಿ-ಮತ ಬೇಧವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರು ಆಶ್ರಯ ಪಡಕೊಂಡಿದ್ದರು. ಆದರೆ ಶೌಚಾಲಯದ ಕೊರತೆ ತಲೆದೋರಿತು. ಇದನ್ನು ಮನಗಂಡ ಮಂದಿರದ ಹೊಣೆಗಾರರು ತಮ್ಮ ದೇವಸ್ಥಾನದ ಆವರಣ ಗೋಡೆಯ ಒಂದು ಭಾಗವನ್ನು ಕೆಡವಿ ಸಂತ್ರಸ್ತರಿಗೆ ಶೌಚಾಲಯವನ್ನು ಉಪಯೋಗಿಸಲು ಅನುವು ಮಾಡಿಕೊಟ್ಟರು.

ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ
ಪ್ರಕೃತಿ ವಿಕೋಪದಿಂದ ತತ್ತರಿಸಿದ ಜನತೆಗೆ ನೆರೆಯ ಜಿಲ್ಲೆಗಳಿಂದ ಹಾಗೂ ಕೇರಳದ ಸಮೀಪ ಜಿಲ್ಲೆಗಳಿಂದಲೂ ವಿವಿಧ ರೀತಿಯ ಸಹಾಯಗಳ ಮಹಾಪೂರ ಹರಿದು ಬರುತ್ತಿದೆ. ನೆರೆ ಪೀಡಿತರಿಗೆ ಸುಮಾರು ಮೂರು ಲಕ್ಷಗಳ ದಿನಬಳಕೆಯ ಸಾಮಗ್ರಿಗಳನ್ನು ಮತ್ತು ಸುಮಾರು ಒಂದೂವರೆ ಲಕ್ಷ ಮೊತ್ತವನ್ನು ಉಳ್ಳಾಲ ಜಮಾಅತ್, ಸಾಲಿಡಾರಿಟಿ ಹಾಗೂ ವೆಲ್ಫೇರ್ ಪಾರ್ಟಿಯ ಸದಸ್ಯರು ರಿಲೀಫ್ ಹೊಣೆಗಾರರಿಗೆ ಹಸ್ತಾಂತರಿಸಿದರು. ಇಬ್ಬರ ಸಂತ್ರಸ್ತರ ಸ್ವೋದ್ಯೋಗಕ್ಕಾಗಿ ತಳ್ಳುಗಾಡಿ, ಡ್ರಿಲ್ಲಿಂಗ್ ಮಿಶಿನ್ ಇತ್ಯಾದಿ ಸಲಕರಣೆಗಳ ಪ್ರಾಯೋಜಕತ್ವವನ್ನು ವಹಿಸಿಕೊಂಡು ರಿಲೀಫ್ ಕೆಲಸಗಳಿಗೆ ಇವರು ಪ್ರೇರಣೆ ನೀಡಿದರು.
ಗೋಕಾಕ್
ಪ್ರವಾಹದಿಂದ ಗೋಕಾಕ್, ಹಿಕ್ಕೇರಿ, ರಾಮ್ ದುರ್ಗ, ಕಾನಾಪುರ ಪ್ರದೇಶಗಳಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಗೋಕಾಕ್ ನಲ್ಲಿ 4000 ಮನೆಗಳು ಹಾಳಾಗಿದೆ. ಜಾನುವಾರುಗಳು ಸತ್ತಿವೆ. ಜಮಾಅತ್ ನ ಕಾರ್ಯಕರ್ತರು ಈಗಾಗಲೇ 200 ಕಂಬಳಿ, ಆಹಾರದ ಪೊಟ್ಟಣಗಳು ಮತ್ತು ಕುಡಿಯುವ ನೀರು ಒದಗಿಸಿದ್ದಾರೆ, ಮತ್ತು ಸೇವಾ ನಿರತರಾಗಿದ್ದಾರೆ.
ಅದೇವೇಳೆ, ರಾಮ್ ದುರ್ಗಾದಲ್ಲಿ 200 ಕಂಬಳಿ, 150 ಆಹಾರ ಕಿಟ್, 100 ಮಂದಿಗೆ ಬಟ್ಟೆ ಗಳನ್ನು ನೀಡಲಾಗಿದ್ದು, ಜೊತೆಗೆ, ಮೆಡಿಕಲ್ ಕ್ಯಾಂಪ್ ನಡೆಸಲಾಗಿ, ಅನಾರೋಗ್ಯಪೀಡಿತರಿಗೆ ಚಿಕಿತ್ಸೆ ಸೌಲಭ್ಯವನ್ನು ಒದಗಿಸಲಾಗಿದೆ. ಇದರಿಂದ ದೊಡ್ಡ ಸಂಖ್ಯೆಯ ಪೀಡಿತರು ಪ್ರಯೋಜನ ಪಡೆದಿದ್ದಾರೆ.
ಬೆಳಗಾಂ

ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿಯನ್ನು ಕಳೆಯಲು ಬೆಳಕಿನ ವ್ಯವಸ್ಥೆ ಇಲ್ಲದ್ದನ್ನು ಗಮನಿಸಿ, 250 ಕ್ಯಾಂಡಲ್, ನೀರಿನ ಬಾಟಲಿ ಮುಂತಾದವುಗಳನ್ನು ಒದಗಿಸಲಾಗಿದೆ. ಈಗಾಗಲೇ, 250 ಆಹಾರ ಸಾಮಗ್ರಿಗಳ ಕಿಟ್, 500 ಕಂಬಳಿಗಳನ್ನು ವಿತರಿಸಲಾಗಿದೆ. ಇದು ಆರಂಭಿಕ ಕಾರ್ಯಗಳಾಗಿದ್ದು, ಮಾಡಬೇಕಾದ ಕೆಲಸಗಳು ಬಹಳಷ್ಟಿವೆ.
ಈಗಾಗಲೇ ಸ್ವಚ್ಚತಾ ಕಾರ್ಯ ಪ್ರಾರಂಭವಾಗಿದೆ. ಇದಕ್ಕಾಗಿ ರಾಮದುರ್ಗಕ್ಕೆ ಕ್ಕೆ ಇತರ ಪ್ರದೇಶಗಳ ಕಾರ್ಯಕರ್ತರು ಈಗಾಗಲೇ ಬಂದು ಕೆಲಸದಲ್ಲಿ ಮಗ್ನರಾಗಿದ್ದಾರೆ. ಇಲ್ಲಿ ರಿಲೀಪ್ ಸೆಲ್ ಸ್ಥಾಪಿಸಲಾಗಿದೆ. ಜೊತೆಗೆ, ಪ್ರದೇಶದ ಸಂತ್ರಸ್ತರ ಭಾವನೆಗಳಿಗೆ ಸ್ಪಂದಿಸುವಂತೆ ಸರಕಾರದ ಮೇಲೆ ಹಾಕಲು ಸೂಕ್ತ ಏರ್ಪಾಡುಗಳನ್ನು ಮಾಡಲಾಗುತ್ತಿದೆ.
ಬಾದಾಮಿ:
ಇಲ್ಲಿ ಸುಮಾರು 1500 ಮನೆಗಳು ಹಾಳಾಗಿರುವುದು ಸಮೀಕ್ಷೆಯಿಂದ ಗೊತ್ತಾಗಿದ್ದು, ಶಿಬಿರಗಳಲ್ಲಿ ಜಾಗವಿಲ್ಲದೆ ಸಂತ್ರಸ್ತರು ರಸ್ತೆ ಬದಿಯಲ್ಲಿ ಇರುವಂತಾಗಿದೆ. ಆದ್ದರಿಂದ ಹೆಚ್.ಅರ್.ಎಸ್ ವತಿಯಿಂದ ಸುಮಾರು 2.5 ರೂಪಾಯಿ ಖರ್ಚು ಮಾಡಿ ತಾತ್ಕಾಲಿಕ ಶಿಬಿರಗಳ ಸ್ಥಾಪನೆ ಮಾಡಲಾಗುತ್ತಿದೆ.
ಶಿವಮೊಗ್ಗ
ಇಲ್ಲಿನ ಸುಮಾರು 100 ಮಂದಿ ನೀರು ತುಂಬಿದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದನ್ನು ಗಮನಿಸಿದ ಹೆಚ್.ಅರ್.ಎಸ್, ಎಸ್.ಐ.ಓ. ಮತ್ತು ಜಮಾಅತ್ ಕಾರ್ಯಕರ್ತರು ರಾತ್ರಿಯನ್ನು ಲೆಕ್ಕಿಸದೆ ಪಾರು ಯಶಸ್ವಿಯಾದರು. ಅಲ್ಲದೆ, ತುರ್ತಾಗಿ ಆಹಾರ ಪೊಟ್ಟಣಗಳನ್ನು ಕಂಬಳಿ, ಬಟ್ಟೆ ಬರೆಗಳನ್ನು ಒದಗಿಸಲಾಯಿತು. ಅದೇವೇಳೆ, ಇಲ್ಲಿನ ವಾದಿಹುದಾದಲ್ಲಿರುವ ಜಮಾಅತೆ ಇಸ್ಲಾಮಿ ಹಿಂದ್ ಶಾಲೆಯಲ್ಲಿ 60 ಜನರನ್ನು 4 ದಿವಸಗಳ ತನಕ ಆಶ್ರಯ ಒದಗಿಸಿ, ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಬಳಿಕ ಗಂಜಿ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಅಲ್ಲದೆ, ಸುಮಾರು 1000 ಜನರಿಗೆ ಆಹಾರ ನೀಡಲಾಯಿತು.

ಬಾಗಲಕೋಟ
ಜಿಲ್ಲೆಯಾದ್ಯಂತ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ನೆರೆಹಾವಳಿ ಉಂಟಾಗಿದ್ದು, ಸಂತ್ರಸ್ಥರ ನೆರವಿಗಾಗಿ ಜಮಾಅತೆ ಇಸ್ಲಾಮಿ ಹಿಂದ್ ನ ವತಿಯಿಂದ ಇಲ್ಲಿನ ರೈಲ್ವೆ ನಿಲ್ದಾಣದ ಹತ್ತಿರ ಇರುವ ಇಸ್ಲಾಹ್ ಮಸೀದಿ ಬಳಿ ರಿಲೀಫ್ ಸೆಲ್ ಸ್ಥಾಪಿಸಲಾಯಿತು. ಜನರ ಅಗತ್ಯ ವಸ್ತುಗಳಾದ ಬ್ಲ್ಯಾಂಕೆಟ್, ಬೆಡ್ ಶೀಟ್, ಮಕ್ಕಳ ಹಾಗೂ ಮಹಿಳೆಯರ ಉಡುಪು, ಸಾಬೂನು, ಟೂತ್ಪೇಸ್ಟ್, ಬ್ಯಾಟರಿ ಮುಂತಾದವುಗಳನ್ನು ಇಡಲಾಗಿದ್ದು, ಸಂತ್ರಸ್ತರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಈಗಾಗಲೇ ಕಮತಗಿ, ರಾಮತಾಳ, ಚೊಳಚಗುಡ್ಡ, ನಾಗರಾಳ, ಕಲಾದಗಿ, ಮುಧೋಳ, ರಬಕವಿ-ಬನ್ನಟ್ಟಿ ನಗರಗಳ ಸರ್ವೇ ಕಾರ್ಯಗಳನ್ನು ನಡೆಸಲಾಗಿದ್ದು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳಲಾಗಿದೆ.












