ಬಹುತ್ವದ ಉಳಿವಿಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಏ ಕೆ ಸುಬ್ಬಯ್ಯ: ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ। ಬೆಳಗಾಮಿ ಮುಹಮ್ಮದ್ ಸಾದ್ ಸಂತಾಪ

0
738

ಬೆಂಗಳೂರು;ಆ. 27- ಜಾತ್ಯತೀತ ಮೌಲ್ಯಗಳ ಉಳಿವಿಗಾಗಿ ಬದುಕಿನ ಒಂದು ಬಹುದೀರ್ಘ ಭಾಗವನ್ನು ಮೀಸಲಿಟ್ಟ ಮತ್ತು ಸತ್ಯವನ್ನು ಎದೆಗುಂದದೇ ಹೇಳುವ ಛಾತಿಯನ್ನು ತೋರಿಸಿದ ಏ ಕೆ ಸುಬ್ಬಯ್ಯ ಅವರು ನಾಡಿನ ಬಹುತ್ವದ ರಾಯಭಾರಿಯಾಗಿ ಗುರುತಿಸಿಕೊಂಡಿದ್ದರು. ಮಾನವ ಪ್ರೇಮಿ ಸಿದ್ಧಾಂತವನ್ನು ಹುಡುಕುತ್ತಾ ಅವರು ಅಲೆದರು. ಈ ಅಲೆದಾಟದಲ್ಲಿ ಸರಿಯಾದ ಸಿದ್ಧಾಂತ ಯಾವುದು ಎಂಬುದನ್ನು ಸ್ಪಷ್ಟಪಡಿಸಿಕೊಂಡ ಬಳಿಕ ಅವರು ಅದನ್ನು ಹೇಳಲು ಹಿಂಜರಿಯಲಿಲ್ಲ. ಆ ಬಗ್ಗೆ ಪುಸ್ತಕವನ್ನೂ ಬರೆದರು. ಇಂಥ ಧೀಮಂತರು ಅಪರೂಪದಲ್ಲಿ ಅಪರೂಪ. ಅವರ ಮರಣವು ಈ ಕಾರಣಕ್ಕಾಗಿ ಅತ್ಯಂತ ದುಃಖದಾಯಕವಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ। ಬೆಳಗಾಮಿ ಮುಹಮ್ಮದ್ ಸಾದ್ ಹೇಳಿದ್ದಾರೆ.

ವೈಚಾರಿಕ ಸ್ಪಷ್ಟತೆ ಮತ್ತು ಬದ್ಧತೆಗೆ ಅವರು ಅನ್ವರ್ಥವಾಗಿ ಬದುಕಿದರು. ತಾನು ಕಂಡದ್ದನ್ನು ಕಂಡ ಹಾಗೆಯೇ ಹೇಳುವ ಧೈರ್ಯ ತೋರಿದರು. ತಪ್ಪನ್ನು ತಪ್ಪು ಅಂದರು. ಬಹುತ್ವದ ಉಳಿವೇ ಭಾರತದ ಉಳಿವು ಎಂದು ಖಚಿತವಾಗಿ ಹೇಳಿದರು. ಇಂಥವರು ಈ ದೇಶದ ಆಸ್ತಿ. ಅವರ ಅಗಲಿಕೆಯು ಬಹುತ್ವದ ಉಳಿವನ್ನು ಬಯಸುವ ಎಲ್ಲರನ್ನೂ ದುಃಖಕ್ಕೀಡುಮಾಡಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವನು ದಯಪಾಲಿಸಲಿ ಎಂದು ಡಾ। ಬೆಳಗಾಮಿ ಮುಹಮ್ಮದ್ ಸಾದ್ ಪ್ರಾರ್ಥಿಸಿದ್ದಾರೆ.