ಮೋದಿ, ಅಮಿತ್ ಶಾರ ಗುಜರಾತಿಗಿಂತ ಕಾಶ್ಮೀರದ ಆರ್ಥಿಕ ಸೂಚಿ ಉತ್ತಮವಾಗಿದೆ- ಪ್ರಕಾಶ್ ಕಾರಟ್

0
701

ಮಂಜೇರಿ, ಸೆ.2: ಕಾಶ್ಮೀರದ ಪ್ರಜಾಪ್ರಭುತ್ವ ರಕ್ಷಣೆಗೆ ಎಡಪಂಥೀಯ ಜಾತ್ಯತೀತ ಪಕ್ಷಗಳು ರಾಷ್ಟ್ರಾದ್ಯಂತ ನಡೆಸುತ್ತಿರುವ ಹೋರಾಟಗಳಿಗೆ ಬೆಂಬಲದ ಅಗತ್ಯವಿದೆ ಎಂದು ಸಿಪಿಎಂ ಹಿರಿಯ ನಾಯಕ, ಪೊಲಿಟ್ ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ ಹೇಳಿದರು. “ಕಾಶ್ಮೀರ- ಪ್ರಜಾಪ್ರಭುತ್ವ ಅಪಾಯದಲ್ಲಿ” ಎಂಬ ವಿಷಯದಲ್ಲಿ ಇಎಂಎಸ್ ಅಧ್ಯಯನ ಕೇಂದ್ರ ಮಂಜೇರಿಯಲ್ಲಿ ಆಯೋಜಿಸಿದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ನಿರ್ಮೂಲನ ಗೊಳಿಸಲಾಗುತ್ತಿದೆ. ಭಾರತ ಒಕ್ಕೂಟದಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಆರೆಸ್ಸೆಸ್ ಸಹಿಸುವುದಿಲ್ಲ. ಆದ್ದರಿಂದ 370ನೆ ವಿಧಿ ರದ್ದುಪಡಿಸಲಾಯಿತು. ಆ ವಿಧಿ ಇದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್‍ ಶಾ ವಾದಿಸುತ್ತಿದ್ದಾರೆ. ಇದು ಆಧಾರಹಿತ ಎಂದು ಕಾರಟ್ ಹೇಳಿದರು.

ಮೋದಿ, ಅಮಿತ್ ಶಾರ ಗುಜರಾತಿಗಿಂತ ಕಾಶ್ಮೀರದ ಆರ್ಥಿಕ ಸೂಚಿ ಉತ್ತಮವಾಗಿದೆ. ಬಡತನ ಶೇ.10ರಷ್ಟು ಮಾತ್ರ ಇದೆ. ಕಾಶ್ಮೀರದಲ್ಲಿ ಭಿಕ್ಷುಕರು ಕಾಣಸಿಗುವುದಿಲ್ಲ. ಆಯಸ್ಸು ಕೂಡ ಇತರ ರಾಜ್ಯಗಳಲ್ಲಿ ಹೋಲಿಸಿದರೆ ಅಲ್ಲಿ ಹೆಚ್ಚಾಗಿದೆ. ಸಾಲ ಬಾಧ್ಯತೆ ಕೂಡ ಕಡಿಮೆ ಇದೆ. ಶಿಶುಗಳ ಸಾವು ಅನುಪಾತ ಕೂಡ ಕಡಿಮೆ ಇದೆ. ಕಾಂಗ್ರೆಸ್, ಆರೆಸ್ಸೆಸ್ ಕಾಶ್ಮೀರವನ್ನು ಸಂಕುಚಿತ ಉದ್ದೇಶಕ್ಕೆ ಉಪಯೋಗಿಸುತ್ತಿದೆ.

25 ವರ್ಷಗಳ ಕಾಲವೂ ಅಲ್ಲಿ ಸರಿಯಾದ ರೀತಿಯಲ್ಲಿ ಚುನಾವಣೆಯಾಗಿಲ್ಲ. ಇತರೆ ಕಡೆಗಳಿಂದ ಅಲ್ಲಿಗೆ ಜನರನ್ನು ತಂದು ಕೂರಿಸಿ ಅಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕೆಡಿಸಲು ಕೇಂದ್ರ ಸರಕಾರ ಮತ್ತು ಆರೆಸ್ಸೆಸ್ ಯತ್ನಿಸುತ್ತಿದೆ. ಭಾರತದಿಂದ ಸಿಕ್ಕಿದ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ ಎಂದು ಕಾಶ್ಮೀರಿಗಳು ಹೇಳುತ್ತಿದ್ದಾರೆ. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಟಿಕೆ.ಹಂಝ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕೆಟಿ. ಜಲೀಲ್, ಸಿಪಿಎಂನ ಇಎನ್ ಮೋಹನ್ ದಾಸ್, ಪ್ರೊ. ಎಪಿ ಅಬ್ದುಲ್ ವಹಾಬ್, ಪಿ ಮುಹಮ್ಮದ್‍ಕುಟ್ಟಿ, ಅಜಿತ್ ಕೊಲಾಡಿ ಮುಂತಾದವರು ಮಾತಾಡಿದರು.