ದಿಸ್ಪುರ್,ಸೆ.2: ಸಹೋದ್ಯೋಗಿಯ ಸಾವು ಸಂಭವಿಸಿದ ಘಟನೆಯಿಂದಾಗಿ ರೊಚ್ಚಿಗೆದ್ದ ತೋಟ ಕಾರ್ಮಿಕರು ವೈದ್ಯರನ್ನು ಹೊಡೆದು ಕೊಂದ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ. ಅಸ್ಸಾಂನ ದಿಸ್ಪುರದಲ್ಲಿ 73 ವರ್ಷದ ಎಸ್ಟೇಟ್ ಆಸ್ಪತ್ರೆಯ ವೈದ್ಯ ದೇಬನ್ ಗುಪ್ತರನ್ನು ದಾರುಣವಾಗಿ ಹೊಡೆದು ಕೊಲೆ ಮಾಡಲಾಗಿತ್ತು.
ಸೋಮಿ ಮಾಜಿ ಎಂಬಾತ ಎಸ್ಟೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದ. ಸಾಯುವ ಸಂದರ್ಭದಲ್ಲಿ ಅಲ್ಲಿ ವೈದ್ಯರು ಇರಲಿಲ್ಲ. ಆಸ್ಪತ್ರೆಗೆ ಬಂದ ವೈದ್ಯರನ್ನು ಕೋಣೆಯಲ್ಲಿ ಕೂಡಿ ಹಾಕಿ ಕಾರ್ಮಿಕರು ಹೊಡೆದಿದ್ದರು. ಇದೇ ವೇಳೇ ವೈದ್ಯರಿಗೆ ಕಲ್ಲೆಸಯಲಾಗಿತ್ತು. ತೀವ್ರ ಗಾಯಗೊಂಡಿದ್ದ ವೈದ್ಯರನ್ನು ಜೊರ್ಹಟ್ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ. ಪೊಲೀಸರು ಮತ್ತು ಸಿಆರ್ಪಿಎಫ್ ಸ್ಥಳಕ್ಕಾಗಮಿಸಿ ಕಾರ್ಮಿಕರನ್ನು ಚದುರಿಸಿದ್ದರು. ಕೊಲೆಗೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದಾರೆ.












