ಅಸ್ಸಾಂ ಪೌರತ್ವ ಪಟ್ಟಿ: ಹಕ್ಕುಗಳನ್ನು ನಿಷೇಧಿಸುವುದಿಲ್ಲ; ಜೈಲಿಗೆ ಹಾಕುವುದಿಲ್ಲ- ಕೇಂದ್ರ ಸರಕಾರ

0
1167

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.2: ಅಸ್ಸಾಂ ನಾಗರಿಕ ಪಟ್ಟಿಯಿಂದ ಹತ್ತೊಂಬತ್ತು ಲಕ್ಷ ಮಂದಿ ಹೊರಗಿರುವುದರ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿದೇಶ ಸಚಿವಾಲಯ ಸ್ಪಷ್ಟೀಕರಣ ನೀಡಿದೆ. ಇನ್ನೂ  ಕಾನೂನಾತ್ಮಕ  ಅವಕಾಶಗಳು ಉಳಿದಿದೆ ಎಂದಿದ್ದು, ಅದುವರೆಗೆ ಜೈಲಿಗೆ ಹಾಕುವುದಿಲ್ಲ. ವಿದೇಶಿಗಳೆಂದು ಘೋಷಿಸಲಾಗುವುದಿಲ್ಲ ಎಂದು ಈಗ ಸೂಚನೆಗಳು ಲಭಿಸುತ್ತಿವೆ. ಪೌರತ್ವ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ದೇಶವೇ ಇಲ್ಲದಾಗುವ ಪರಿಸ್ಥಿತಿ ಎದುರಾಗುವುದಿಲ್ಲ ಎನ್ನಲಾಗುತ್ತಿದೆ.

ಟ್ರಿಬ್ಯೂನಲ್‍ನಲ್ಲಿ ದೂರು ನೀಡಲು 120 ದಿನಗಳ ಅವಕಾಶವಿದೆ. ಟ್ರಿಬ್ಯೂನಲ್ ತೀರ್ಪು ವಿರುದ್ಧ ಬಂದರೂ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬಹುದು. ತದನಂತರ ಸುಪ್ರೀಂಕೋರ್ಟಿನ ಮೊರೆ ಹೋಗಬಹುದು. ಬಡವರಿಗೆ ಉಚಿತ ಕಾನೂನು ಸಹಾಯವನ್ನು ಅಸ್ಸಾಂ ಸರಕಾರ ಒದಗಿಸಲಿದೆ. ಪ್ರಕ್ರಿಯೆಯನ್ನು ಶೀಘ್ರಗೊಳಿಸಲು ಈಗಿರುವ ನೂರು ಟ್ರಿಬ್ಯೂನಲ್‌ಗಳಲ್ಲೇ ಇನ್ನೂ ಇನ್ನೂರು ಟ್ರಿಬ್ಯೂನಲ್‍ಗಳು ಡಿಸೆಂಬರ್‍‌ನಲ್ಲಿ ಆರಂಭವಾಗಲಿದೆ. ಬ್ಲಾಕ್ ಮಟ್ಟದಲ್ಲಿ ಟ್ರಿಬ್ಯೂನಲ್ ಸೇವೆಯನ್ನು ಲಭ್ಯಗೊಳಿಸಲಾಗುವುದು. ಪೌರತ್ವ ಪಟ್ಟಿ ದೀರ್ಘಕಾಲಿಕ ಪ್ರಕ್ರಿಯೆಯ ಭಾಗವಾಗಿದ್ದು ಸುಪ್ರೀಕೋರ್ಟಿನ ಮೇಲ್ನೋಟದಲ್ಲಿ ಪಟ್ಟಿ ತಯಾರಾಗಿದೆ. ಕೋರ್ಟು ಸೂಚನೆ ಪ್ರಕಾರ ಸರಕಾರ ಕಾರ್ಯವೆಸಗುತ್ತಿದೆ ಎಂದು ಕೇಂದ್ರ ಹೇಳಿದೆ.