ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.16: ಅಸ್ಸಾಮ್ ಅಂತಿಮ ಪೌರತ್ವ ಪಟ್ಟಿಯಲ್ಲಿ ಹೆಸರಿರುವರೆಲ್ಲ ಪೌರತ್ವವನ್ನು ಹೊಂದಿದ್ದಾರೆಂದು ಅರ್ಥವಲ್ಲ, ದೂರಿನ ಆಧಾರದಲ್ಲಿ ಆ ಪಟ್ಟಿಯಿಂದ ಯಾರನ್ನೂ ಹೊರಗಿಡಬಹುದು ಎಂದು ಎನ್ಆರ್ಸಿ ಅಧಿಕಾರಿಗಳು ಹೇಳಿದ್ದಾರೆ. ಅಂತಿಮ ಪೌರತ್ವ ಪಟ್ಟಿಯ ಕುರಿತಂತೆ ಮನವಿ ಸಲ್ಲಿಸಿದ್ದ 3.30 ಕೋಟಿ ಜನರ ಕುಟುಂಬ ವಿವರ ಇರುವ ಸಂಪೂರ್ಣ ಪಟ್ಟಿ ಪ್ರಕಟಿಸಿದ್ದರೂ ಇನ್ನೂ ಈ ಪಟ್ಟಿಯಿಂದ ಪುನಃ ಜನರನ್ನು ಹೊರಗಿಡಲಾಗುವುದು ಎಂದು ಎನ್ಆರ್ಸಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಬಿಜೆಪಿ ವಕ್ತಾರ ಹೇಳಿದ್ದನ್ನೇ ಅಧಿಕಾರಿಗಳು ಹೇಳತೊಡಗಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಹುದೆಂಬ ಆತಂಕ ಇದೀಗ ಪಟ್ಟಿಯಲ್ಲಿದ್ದವರನ್ನೂ ಕಾಡುತ್ತಿದೆ. ಪೌರತ್ವ ಪಟ್ಟಿಯಲ್ಲಿ ಹೆಸರು ಸೇರಿಸಲು ಸಲ್ಲಿಸಿದ 3,30,27,661 ಅರ್ಜಿಯಲ್ಲಿ 3,11,21004 ಮಂದಿ ಪೌರತ್ವ ಪಟ್ಟಿಯಲ್ಲಿ ಜಾಗ ಪಡೆದಿದ್ದಾರೆ. ಈಗ ಹೆಸರು ಸಲ್ಲಿಸಿರುವವರ ವಿವರಗಳು ದಾಖಲೆಗಳು ಸರಿಯಿಲ್ಲ ಎಂದು ಅಧಿಕಾರಿಗಳಿಗೆ ಮನವರಿಕೆಯಾದರೆ ಅವರನ್ನು ಪಟ್ಟಿಯಿಂದ ಹೊರಗಿಡಲಾಗುವುದು ಎಂದು ಎನ್ಆರ್ಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಪಟ್ಟಿಯಲ್ಲಿ ಸೇರಲು ಅನರ್ಹ ಎಂದು ಯಾವ ಹಂತದಲ್ಲಿ ಕಂಡು ಬಂದರೂ ಹೆಸರನ್ನು ತೆಗೆದು ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ವಿದೇಶಿ ಟ್ರಿಬ್ಯೂನಲ್ ‘ವಿದೇಶಿ’ಗಳೆಂದು ಘೋಷಿಸಿದವರು ಮತ್ತು ಅವರ ಕುಟುಂಬ ಶಂಕಿತ ಮತದಾರರೆಂದು ಆಯೋಗ ಹೇಳಿರುವುದರಿಂದ ಟ್ರಿಬ್ಯೂನಲ್ನಲ್ಲಿ ಹೋರಾಡುವವರು ಮತ್ತು ಅವರ ಕುಟುಂಬ ಪೌರತ್ವ ಪಟ್ಟಿಯಿಂದ ಹೊರಗಾಗಿದ್ದಾರೆ ಎಂದು ಈ ಹಿಂದೆಯೇ ತಿಳಿಸಲಾಗಿತ್ತು. ಅಂತಹ ವ್ಯಕ್ತಿಗಳು ಯಾರಾದರೂ ಕಂಡು ಬಂದರೆ ಅವರನ್ನು ಪಟ್ಟಿಯಿಂದ ಹೊರಗಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೌರತ್ವ ವಿಷಯದಲ್ಲಿ ಅಂತಿಮ ತೀರ್ಮಾನ ಟ್ರಿಬ್ಯೂನಲ್ನದ್ದೆಂದು ಸುಪ್ರೀಂಕೋರ್ಟು ಕೂಡ ಹೇಳಿದೆ. ಪಟ್ಟಿಯಲ್ಲಿ ಇರುವವರನ್ನು ಹೊರಗಿಡಲು ಟ್ರಿಬ್ಯೂನಲ್ಗಳಿಂದ ಪ್ರಯೋಜನ ಪಡೆಯುವ ಯತ್ನವನ್ನು ಬಿಜೆಪಿ ಸರಕಾರ ನಡೆಸುತ್ತಿದೆ.
ಬಂಗಾಳಿ ಮುಸ್ಲಿಮರು ವಾಸಿಸುವ ಗಡಿ ಪ್ರದೇಶಗಳಲ್ಲಿ ಮರು ಪರಿಶೀಲನೆ ನಡೆಸಬೇಕೆನ್ನುವ ಆಗ್ರಹವನ್ನು ಸುಪ್ರೀಂಕೋರ್ಟು ತಳ್ಳಿಹಾಕಿದ್ದರಿಂದ ತಮ್ಮ ನಿಯಂತ್ರಣದಲ್ಲಿರುವ ಗಡಿ ಪೊಲೀಸರಿಂದ ಮೊದಲ ಪಟ್ಟಿಯಲ್ಲಿರುವವರ ವಿರುದ್ಧ ದೂರು ದಾಖಲಿಸಲಾಗುವುದು. ಆ ದೂರು ವಿದೇಶಿ ಟ್ರಿಬ್ಯೂನಲ್ಗೆ ಸಲ್ಲಿಸಿ ಅವರ ವಿರುದ್ಧ ತೀರ್ಪು ಹೊರಡಿಸಬಹುದು ಎಂದು ಬಿಜೆಪಿ ಲೆಕ್ಕಾಚಾರವಾಗಿದೆ. ಗಡಿ ಪೊಲೀಸರು ಶೋಧ ಆರಂಭಿಸಿದ್ದಾರೆ ಎಂದು ಅಸ್ಸಾಮ್ ಸಚಿವ ಹೇಮಂತ್ ಬಿಶ್ವ ಶರ್ಮ ಹೇಳಿದರು.












