ಸಿಸಿ ವಿರುದ್ಧ ಈಜಿಪ್ಟ್ ನಲ್ಲಿ ಭಾರೀ ಪ್ರತಿಭಟನೆ; 2011ರ ಬಳಿಕ ಮತ್ತೆ ಬೀದಿಗಿಳಿದ ಯುವಜನತೆ: ಪ್ರತಿಭಟನೆಗೆ ಕರೆ ನೀಡಿದ್ದ ಮೊಹಮ್ಮದ್ ಅಲಿ, ವೀಡಿಯೊ

0
981

ಸನ್ಮಾರ್ಗ ವಾರ್ತೆ-

ಕೈರೋ; ಸೆ.21- ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿಯ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರು ಈಜಿಪ್ಟ್‌ನಾದ್ಯಂತ ನಗರಗಳಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. “ಎದ್ದೇಳಿ, ಭಯಪಡಬೇಡಿ, ಸಿಸಿ ಹೋಗಬೇಕು” ಮತ್ತು “ಜನರು ಆಡಳಿತದ ಪತನವನ್ನು ಬಯಸುತ್ತಾರೆ” ಎಂದು ಮುಂತಾಗಿ ಪ್ರತಿಭಟನಾಕಾರರು ಕೂಗುತ್ತಿರುವ ವೀಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದೆ. ಈಜಿಪ್ಟ್ ನ ಎರಡನೇ ದೊಡ್ಡ ನಗರವಾದ ಅಲೆಕ್ಸಾಂಡ್ರಿಯಾ ಮತ್ತು ಸೂಯೆಜ್‌ನಲ್ಲಿ ಹಾಗೂ ರಾಜಧಾನಿ ಕೈರೋದಲ್ಲಿ ಪ್ರತಿಭಟನೆಗಳು ನಡೆದ ವರದಿಗಳಿವೆ.

ನಾಗರಿಕ ಸಮವಸ್ತ್ರದಲ್ಲಿರುವ ಅಧಿಕಾರಿಗಳು ಕೈರೋದ ತಹ್ರಿರ್ ಚೌಕವನ್ನು ಸಮೀಪಿಸಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ತಡೆದರು. ಅಲ್ಲಿ 2011 ರಲ್ಲಿ ಸಾಮೂಹಿಕ ಪ್ರತಿಭಟನೆಗಳು ಪ್ರಾರಂಭವಾಗಿದ್ದುವು ಮತ್ತು ಅದು ಅಂತಿಮವಾಗಿ ಹೊಸ್ನಿ ಮುಬಾರಕ್ ಅವರನ್ನು ಉರುಳಿಸಿತ್ತು.

ಈಜಿಪ್ಟ್ ನಿಂದ ಹೊರಹೋಗಿರುವ ಉದ್ಯಮಿ ಮತ್ತು ನಟ ಮೊಹಮ್ಮದ್ ಅಲಿ ಅವರು ಇತ್ತೀಚೆಗೆ ಅಧ್ಯಕ್ಷ ಅಲ್-ಸಿಸಿ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿರುವುದು ಮತ್ತು ಸಿಸಿ ವಿರುದ್ಧ ಬೀದಿಗಿಳಿಯುವಂತೆ ಜನರನ್ನು ಒತ್ತಾಯಿಸಿದ ನಂತರ ಈ ಪ್ರತಿಭಟನೆಗಳು ನಡೆದಿವೆ. ಆದರೆ, ಅಲ್-ಸಿಸಿ ಈ ಆರೋಪಗಳನ್ನು “ಸುಳ್ಳು” ಎಂದು ತಳ್ಳಿಹಾಕಿದ್ದಾರೆ.

“ಅಲ್-ಸಿಸಿ ಗುರುವಾರದೊಳಗೆ ರಾಜೀನಾಮೆ ಘೋಷಿಸದಿದ್ದರೆ, ಶುಕ್ರವಾರ ಈಜಿಪ್ಟ್ ಜನರು ಪ್ರತಿಭಟನೆ ಮಾಡುತ್ತಾರೆ” ಎಂದು ಅಲಿ ಮಂಗಳವಾರ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದರು.

ಶುಕ್ರವಾರದ ಪ್ರತಿಭಟನೆಯು ದೇಶದಲ್ಲಿ ಭಿನ್ನಮತವನ್ನು ಪ್ರದರ್ಶಿಸುವ ಅಪರೂಪದ ಪ್ರದರ್ಶನವಾಗಿತ್ತು. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಧ್ಯಕ್ಷ ಮೊಹಮ್ಮದ್ ಮೊರ್ಸಿಯನ್ನು ಉರುಳಿಸಿದ ನಂತರ ಅಲ್ ಸಿಸಿ 2013ರಲ್ಲಿ ಅಧಿಕಾರ ವಹಿಸಿಕೊಂಡರಲ್ಲದೆ, ಆ ಬಳಿಕ ಈಜಿಪ್ಟ್ ನಲ್ಲಿ ಎಲ್ಲಾ ಅನಧಿಕೃತ ಪ್ರತಿಭಟನೆಗಳನ್ನೂ ನಿಷೇಧಿಸಿದ್ದರು.

ಲಾಂಗ್ ಐಲ್ಯಾಂಡ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ವಾಷಿಂಗ್ಟನ್ ಡಿ.ಸಿ ಯ ಸೆಂಟರ್ ಫಾರ್ ಗ್ಲೋಬಲ್ ಪಾಲಿಸಿಯ ಹಿರಿಯ ಸಹೋದ್ಯೋಗಿ ಡಾಲಿಯಾ ಫಾಹ್ಮಿ, ಶುಕ್ರವಾರದ ಪ್ರತಿಭಟನೆಗಳು 2011 ರಲ್ಲಿ ನಡೆದ ಪ್ರತಿಭಟನೆಗಿಂತ ಬಹಳ ಭಿನ್ನವಾಗಿವೆ ಎಂದು ಹೇಳಿದ್ದಾರೆ.

ಜನರು ಭಯದ ತಡೆಗೋಡೆ ಮುರಿಯುವುದನ್ನು ನೋಡುವುದೇ ಸೊಗಸು ಎಂದು ಫಾಹ್ಮಿ ಹೇಳಿದ್ದಾರೆ. “ಈಜಿಪ್ಟ್ ನ ನೂರು ಮಿಲಿಯನ್ ಜನರಲ್ಲಿ ಸರಾಸರಿ ವಯಸ್ಸು 23. 2011ರಲ್ಲಿ ಮೊದಲ ಕ್ರಾಂತಿಕಾರಿ ಪ್ರತಿಭಟನೆಯಲ್ಲಿ ಈ ಮಂದಿ ಭಾಗವಹಿಸಿದ್ದರು. ಅಂದರೆ, ಇಂದಿಗೆ ಎಂಟು ವರ್ಷಗಳ ಮೊದಲು. ಇದರರ್ಥ ಆಗ ಅವರ ಸರಾಸರಿ ವಯಸ್ಸು 15 ಆಗಿತ್ತು” ಎಂದು ಅವರು ಹೇಳಿದ್ದಾರೆ.