ಅನರ್ಹ ಶಾಸಕರ ಸ್ಥಿತಿ ಅಯೋಮಯ: ಅವರ ಮುಂದಿನ ನಡೆ ಏನಿದ್ದೀತು?

0
835

ಸನ್ಮಾರ್ಗ ವಾರ್ತೆ-

ಬೆಂಗಳೂರು; ಸೆ.21- ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಸಿಡಿದು, ಸ್ಪೀಕರ್ ಅವರಿಂದ ಅನರ್ಹರಾಗಿದ್ದ ಶಾಸಕರಿಗೆ ಭಾರೀ ಹಿನ್ನಡೆಯಾಗಿದ್ದು, ಇದೀಗ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಹರಿಯಾಣ, ಮಹಾರಾಷ್ಟ್ರ ವಿಧಾನ ಸಭೆಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಅವರು ಕರ್ನಾಟಕದ ಈ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದಿದ್ದಾರೆ.

ರಾಜ್ಯಗಳಲ್ಲಿ 15 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಸೆ.23 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಮಾಡಲು ಸೆ.30 ಅಂತಿಮ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 3 ಕಡೆಯ ದಿನಾಂಕವಾಗಿದೆ. ಅಕ್ಟೋಬರ್ 21 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅ. 24 ರಂದು ಫಲಿತಾಂಶ ಸಿಗಲಿದೆ. ಆದ್ದರಿಂದ ಅನರ್ಹರ ಪ್ರಕರಣವು ಸೆ.30ರ ಒಳಗಡೆ ಇತ್ಯರ್ಥವಾಗದಿದ್ದರೆ ಅನರ್ಹರು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಸ್ಪಷ್ಟ.

ವಿಧಾನಸಭಾ ಅವಧಿ ಪೂರ್ಣಗೊಳ್ಳುವವರೆಗೂ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ಸ್ಪೀಕರ್ ತೀರ್ಪು ನೀಡಿರುವುದರಿಂದ ಅನರ್ಹ ಶಾಸಕರು ಸೆ. 23ರ ಸೋಮವಾರದಂದು ನಡೆಯಲಿರುವ ವಿಚಾರಣೆ ವೇಳೆ ಸು. ಕೋರ್ಟಿನಲ್ಲಿ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ಕೇಳಬಹುದು ಅಥವಾ ವಿಚಾರಣೆ ಪೂರ್ಣಗೊಳ್ಳುವ ವರೆಗೆ ಚುನಾವಣೆ ನಡೆಸದಂತೆ ಆದೇಶಿಸಿ ಎಂದು ಮನವಿ ಮಾಡಿಕೊಳ್ಳಬಹುದು. ಸದ್ಯದ ಸ್ಥಿತಿ ನೋಡುವಾಗ ಅನರ್ಹರು ಅವಕಾಶ ಕಳಕೊಳ್ಳುವ ಸಾಧ್ಯತೆಯೇ ಹೆಚ್ಚು. ಒಂದುವೇಳೆ, ಅನರ್ಹರ ಪ್ರಕರಣ ಇತ್ಯರ್ಥವಾಗದೇ ಹೋದರೆ ಮತ್ತು ಚುನಾವಣೆಯಲ್ಲಿ ಆ ಕಾರಣದಿಂದ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ಅವರ ಮುಂದಿನ ನಡೆ ಕುತೂಹಲಕಾರಿಯಾಗಲಿದೆ.