ಸನ್ಮಾರ್ಗ ವಾರ್ತೆ-
ಬೆಂಗಳೂರು: ಅ.1- ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದನಿ ಎತ್ತುವ ಧೈರ್ಯವನ್ನು ರಾಜ್ಯ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ನಿಧಾನಕ್ಕೆ ತೋರ್ಪಡಿಸುತ್ತಿದ್ದಾರೆ. ಚಕ್ರವರ್ತಿ ಸೂಲಿಬೆಲೆಯ ಬಳಿಕ ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆ ಪಟ್ಟಿಗೆ ಸೇರಿದ್ದಾರೆ.
ಬಿಜೆಪಿಯಿಂದ 25 ಸಂಸದರು ಆಯ್ಕೆ ಆಗಿದ್ದಾರೆ. ರಾಜ್ಯದ ಪರ ಧ್ವನಿ ಎತ್ತೋದು ಅವರ ಕರ್ತವ್ಯ. ಸಂಸದರು ಪ್ರಧಾನಿ ಬಳಿ ನಮ್ಮನ್ನ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು. ಪ್ರಧಾನಿಗಳು ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿ ಆಶ್ಚರ್ಯ ಹುಟ್ಟಿಸಿದರು.
ಕೇಂದ್ರದ ಈ ವರ್ತನೆಯಿಂದ ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ನಾವು ಯಾವ ಮುಖ ಇಟ್ಟುಕೊಂಡು ಉತ್ತರ ಕರ್ನಾಟಕದ ಜನರಿಗೆ ಉತ್ತರ ಹೇಳಬೇಕು? ಉತ್ತರ ಕರ್ನಾಟಕ ಜನ ಈಗ ಬಿಜೆಪಿ ಶಾಸಕರು, ಸಂಸದರು ಅಂದರೆ ಹೊಡೆಯೋಕೆ ಬರುತ್ತಾರೆ ಎಂದು ಹೇಳಿದರು.
ಕರ್ನಾಟಕಜನರ ಭಾವನೆಗೆ ಪ್ರಧಾನಿಗಳು ಸ್ಪಂದಿಸಬೇಕು. ಇಷ್ಟೆಲ್ಲ ಆದರೂ ನಮಗೆ ಟ್ವೀಟ್ ಮಾಡದೇ ಬಿಹಾರದವರಿಗೆ ಟ್ವೀಟ್ ಮಾಡ್ತಾರೆ ಎಂದರೆ ಹೇಗೆ? ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡ್ತಿದ್ದಾರೆ. ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದರು.












