ಸನ್ಮಾರ್ಗ ವಾರ್ತೆ
ಕೇರಳ,ಅ.15: ರಾಜ್ಯದ ರೇಷನ್ ಕಾರ್ಡುಗಳು ಆಧಾರ್ಗೆ ಜೋಡಿಸುವ ಕ್ರಮ ಅಂತಿಮ ಹಂತದಲ್ಲಿದ್ದು ರೇಷನ್ ಕಾರ್ಡಿನ ಇ-ಪೇಸ್ ಸರ್ವರ್ ಮೂಲಕ ಕಾರ್ಡು ಹೊಂದಿದವರ ಆಧಾರ್ ವಿವರಗಳು ಸೋರಿಕೆಯಾಗುತ್ತಿದೆ ಎನ್ನುವ ಸಂಶಯಕ್ಕೆ ಎಡೆ ಮಾಡಿದೆ.
ಮಲಪ್ಪುರಂ ವ್ಯಕ್ತಿಯ ಬೆರಳಚ್ಚು ಉಪಯೋಗಿಸಿ ತಿರುವನಂತಪುರಂನಲ್ಲಿ ಉಚಿತ ರೇಷನ್ ವಸ್ತುಗಳನ್ನು ಪಡೆದು ಮೋಸ ಮಾಡಿರುವುದು ಬಹಿರಂಗವಾಗಿದ್ದು ನಂತರ ಈ ಸಂದೇಹ ಹೆಚ್ಚು ಬಲಪಡೆದುಕೊಂಡಿತು. ಈ ವಿಷಯದಲ್ಲಿ ತನಿಖೆ ವರದಿ ಸಲ್ಲಿಸಲು ನ್ಯಾಶನಲ್ ಇನ್ಫಾರ್ಮೆಷನ್ ಸೆಂಟರ್ಗೆ ಆಹಾರ ಸಾರ್ವಜನಿಕ ವಿತರಣೆ ಇಲಾಖೆ ಮನವಿ ಮಾಡಿದೆ.
ವಂಚನೆಗೆ ಸಂಬಂಧಿಸಿದ ದಾಖಲೆಗಳು ಸರಕಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ದೇಶದಲ್ಲಿಮೊದಲಬಾರಿ ಬಯೊಮೆಟ್ರಿಕ್ ವ್ಯವಸ್ಥೆಯಲ್ಲಿ ಬೆರಳಚ್ಚು ಉಪಯೋಗಿಸಿ ವಂಚನೆ ನಡೆದಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ತಿರುವನಂತಪುರಂ ಪನ್ನಮೂಡ್ ಎಂಬಲ್ಲಿನ ವ್ಯಕ್ತಿ ಮಲಪ್ಪುರಂ ತಿರೂರಂಗಾಡಿಯಲ್ಲಿ ವಾಸ್ತವ್ಯ ಹೊಂದಿರುವ ಅಸ್ಮಾ ನಸ್ರೀನ್(ವಿಆರ್ ನಿಶಾ)ರ ಬೆರಳಚ್ಚು ಉಪಯೋಗಿಸಿ ಇ-ಪೇಸ್ ಯಂತ್ರದ ಬಯೊಮೆಟ್ರಿಕ್ ವ್ಯವಸ್ಥೆಯ ಮೂಲಕ ರೇಷನ್ ಪಡೆದು ವಂಚಿಸಲಾಗಿದೆ.
ಏಆರ್ಡಿ 1103067 ಎಂಬ ರೇಷನ್ ಅಂಗಡಿ ಬಂದಾಗ ಅವರ ರೇಷನ್ ಪಡೆದಿರುವುದು ಖಚಿತವಾಗಿದೆ. ಅವರ ಮೊಬೈಲ್ ನಂಬರಿಗೆ ಈ ತಿಂಗಳು ಹನ್ನೊಂದು ತಾರೀಕಿಗೆ ನಿಮ್ಮ ರೇಷನ್ ಪಡೆಯಲಾಗಿದೆ ಎಂಬ ಸಂದೇಶ ಬಂದಿತ್ತು. ಆದರೆ, ಅವರು ಇದೇ ಅಂಗಡಿಯಿಂದ ಕಳೆದ ಒಂದು ವರ್ಷದಿಂದ ರೇಷನ್ ಪಡೆಯುತ್ತಿದ್ದರು.
ಈ ಕುರಿತು ಹೆಚ್ಚಿನ ತನಿಖೆಗೆ ಇಲಾಖಾ ಮಟ್ಟದಲ್ಲಿ ಆದೇಶ ನೀಡಲಾಗಿದೆ. ತನ್ನ ರೇಷನ್ ಇನ್ನೊಬ್ಬರು ಪಡೆದಿದ್ದಾರೆ ಎನ್ನುವ ದೂರನ್ನು ಆಹಾರ ಸಚಿವರು ಮತ್ತು ತಿರುವನಂತಪುರಂ ಜಿಲ್ಲಾಧಿಕಾರಿಗೆ, ತಾಲೂಕು ಪಡಿತರ ವಿತರಣಾ ಅದಿಕಾರಿಗಳು ಮತ್ತು ಪೊಲೀಸರಿಗೆ ಅಸ್ಮಾ ದೂರು ನೀಡಿದ್ದಾರೆ. ಈ ಘಟನೆಯ ನಂತರ ಆಹಾರ ಇಲಾಖೆ ಇಕ್ಕಟ್ಟಿಗೆ ಸಿಕ್ಕಿದೆ. ಆಧಾರ್ ನಂಬರ್ ಸೋರಿಕೆ ಹೇಗಾಯಿತು ಎನ್ನುವುದು ಇದೀಗ ತಲೆನೋವಾಗಿ ಪರಿಣಮಿಸಿದೆ.












