ಸನ್ಮಾರ್ಗ ವಾರ್ತೆ
ಕೊರೋನಾ ವೈರಸ್ ಜಾಗತಿಕವಾಗಿ ಮಾರಣಹೋಮ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೆಲವು ಸಲಹೆಗಳ ಮೂಲಕ ಮುಂದೆ ಬಂದಿದೆ. ಮುಖ್ಯವಾಗಿ ಐದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅದು ಪಟ್ಟಿಮಾಡಿ ಹೇಳಿದೆ.
1. ಪೋಷಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಇದರಿಂದಾಗಿ ದೇಹದಲ್ಲಿರುವ ಪ್ರತಿರೋಧ ಶಕ್ತಿಯು ಬಲಗೊಳ್ಳುತ್ತದೆ.
2. ಯಾವ ಕಾರಣಕ್ಕೂ ಮದ್ಯವನ್ನು ಸೇವಿಸಬೇಡಿ. ಸಕ್ಕರೆ ಬಳಸಲಾಗಿರುವ ತಂಪು ಪಾನೀಯಗಳಿಂದ ದೂರವಿರಿ.
3. ಯಾವ ಕಾರಣಕ್ಕೂ ಧೂಮಪಾನಿಗಳಾಗಬೇಡಿ. ಧೂಮಪಾನಿಗಳನ್ನು ಕೊರೋನಾ ವೈರಸ್ಸು ಇತರರಿಗಿಂತ ಹೆಚ್ಚು ಕಾಡುತ್ತದೆ.
4. ವಯಸ್ಕರು ದಿನದಲ್ಲಿ ಅರ್ಧ ಗಂಟೆ ಮತ್ತು ಮಕ್ಕಳು ದಿನದಲ್ಲಿ ಒಂದು ಗಂಟೆಯಾದರೂ ವ್ಯಾಯಾಮ ಮಾಡಬೇಕು. ನಿಮಗೆ ಅನುಮತಿ ಇದೆಯೆಂದಾದರೆ ನಡಿಗೆ, ಓಟ, ಸೈಕ್ಲಿಂಗ್ ಮುಂತಾದವುಗಳನ್ನು ಮಾಡಬೇಕು. ಈ ಸಂದರ್ಭದಲ್ಲಿಯೂ ಅಂತರವನ್ನು ಕಾಯ್ದುಕೊಳ್ಳಬೇಕು. ಡ್ಯಾನ್ಸು, ಯೋಗ ಮುಂತಾದವುಗಳನ್ನು ಮಾಡಬಹುದು ಅಥವಾ ನಿಮ್ಮ ಮನೆಯ ಮೆಟ್ಟಿಲುಗಳನ್ನು ಏರಿ ಇಳಿಯುವ ಮೂಲಕ ಕೂಡ ವ್ಯಾಯಾಮ ಮಾಡಬಹುದು. ಮನೆಯಲ್ಲಿದ್ದು ಕೆಲಸ ಮಾಡುವವರಾದರೆ ದೀರ್ಘ ಸಮಯದಿಂದ ಒಂದೇ ರೀತಿಯಲ್ಲಿ ಕುಳಿತುಕೊಳ್ಳಬಾರದು. ಮೂವತ್ತು ನಿಮಿಷಗಳ ನಡುವೆ ಮೂರು ನಿಮಿಷಗಳ ವಿಶ್ರಾಂತಿಯನ್ನು ಪಡೆಯಬೇಕು.
5. ಲಾಕ್ ಡೌನ್ ನಿಂದಾಗಿ ಮಾನಸಿಕ ಸಮಸ್ಯೆಗಳು ಸಹಜ. ಸಕಾರಾತ್ಮಕ ಅಭಿಪ್ರಾಯ ಉಳ್ಳವರ ಜೊತೆ ಮಾತುಕತೆಯಲ್ಲಿ ಇರುವುದು ಉತ್ತಮ. ಸಮಾಜದ ಇತರರಿಗೆ ಮರುಗುವುದು, ಸಾಧ್ಯವಾದರೆ ಅವರಿಗೆ ನೆರವಾಗುವುದು, ಕುಟುಂಬಗಳ ಕ್ಷೇಮ ಸಮಾಚಾರವನ್ನು ವಿಚಾರಿಸುವುದು ಇತ್ಯಾದಿಗಳನ್ನು ಮಾಡುತ್ತಿರಿ. ಸಂಗೀತವನ್ನು ಆಲಿಸಿ, ಪುಸ್ತಕಗಳನ್ನು ಓದಿ, ಮನೆಯಲ್ಲಿದ್ದು ಆಟವಾಡಿ ಎಂದು ಸಂಸ್ಥೆ ಸಲಹೆಗಳನ್ನು ನೀಡಿದೆ.












