ಸೋಂಕು ಮುಕ್ತವಾದವರ ದೇಹದಲ್ಲೂ ಕೊರೋನಾ ವೈರಸ್ ಜೀವಂತ: ಭಾರತೀಯ ಸಂಜಾತ ಸಂಶೋಧಕ ತಂಡದಿಂದ ವರದಿ

0
1861

ಸನ್ಮಾರ್ಗ ವಾರ್ತೆ

ಬೀಜಿಂಗ್, ಮಾರ್ಚ್ 29- ಕೊರೋನಾ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಹೆಚ್ಚಿನ ಜನರ ದೇಹದಲ್ಲಿ ಕೊರೋನಾ ವೈರಸ್ ಜೀವಂತವಿರುವುದು ಪತ್ತೆಯಾಗಿದ್ದು, ಇದು ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ.

ರೋಗಲಕ್ಷಣಗಳಿಂದ ಸಂಪೂರ್ಣ ಮುಕ್ತರಾದ ಹೊರತಾಗಿಯೂ 8 ದಿವಸಗಳವರೆಗೆ ವ್ಯಕ್ತಿಯ ದೇಹದಲ್ಲಿ ಕೊರೋನಾ ವೈರಸ್ ಜೀವಂತವಿರುತ್ತದೆ ಅನ್ನುವುದು ಪತ್ತೆಯಾಗಿದೆ. ಆದ್ದರಿಂದ ವೈರಸ್ ಮುಕ್ತರಾದವರು ಕೂಡ 14 ದಿವಸಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚು ದಿನ ಐಸೋಲೇಶನ್ ನಲ್ಲಿ ಇರುವುದು ಅನಿವಾರ್ಯ ಎಂದು ಸಂಶೋಧಕರು ಹೇಳಿದ್ದಾರೆ.

ಜನವರಿ 28ರಿಂದ ಫೆಬ್ರವರಿ 9ರ ವರೆಗೆ ಚೀನಾದ ಸೇನೆಯ ಅಡಿಯಲ್ಲಿ ಚಿಕಿತ್ಸೆ ನೀಡಿದ ಆಸ್ಪತ್ರೆಗಳಲ್ಲಿ ಈ ಸಂಶೋಧನೆ ನಡೆದಿದೆ. ಈ ಸಂಶೋಧನೆಯನ್ನು ಭಾರತೀಯ ಸಂಜಾತ ಯೇಲ್ ವಿವಿಯ ಪ್ರೊಫೆಸರ್ ಲೋಕೇಶ್ ಒಳಗೊಂಡಂತೆ ಸಂಶೋಧಕರ ತಂಡವು ನಡೆಸಿದ್ದು, ಸೋಂಕಿನಿಂದ ಮುಕ್ತವಾದ ಮತ್ತು ಸೋಂಕು ತೀವ್ರ ರೂಪವನ್ನು ಪಡೆದಿಲ್ಲದ 35 ವಯಸ್ಸಿನ ಸುಮಾರು 16 ಜನರನ್ನು ಈ ಪರೀಕ್ಷೆಗೆ ಒಳಪಡಿಸಿದೆ.

ಯಾರಲ್ಲಿ ಸೋಂಕು ತೀವ್ರವಾಗಿರುತ್ತೋ ಅವರ ದೇಹದಿಂದ ವೈರಸ್ಸನ್ನು ಸಂಪೂರ್ಣವಾಗಿ ಸಾಯಿಸಲು ಸಮಯ ಬೇಕಾದೀತು ಎಂದು ಈ ಸಂಶೋಧಕರು ಹೇಳಿದ್ದಾರೆ. ಈ ಸಂಶೋಧನಾ ವರದಿಯನ್ನು ಅಮೆರಿಕದ ವಿಜ್ಞಾನ ಪತ್ರಿಕೆಯಾದ ರೆಸ್ಪಿರೇಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್ ನಲ್ಲಿ ಪ್ರಕಟಿಸಲಾಗಿದೆ.