ಸನ್ಮಾರ್ಗ ವಾರ್ತೆ
ಬಿಜಾಪುರ, ಎ. 21: ಲಾಕ್ ಡೌನ್ನಿಂದಾಗಿ ಮನೆಗೆ ತಲುಪಲು 150 ಕಿಲೋ ಮೀಟರ್ ವರೆಗೆ ನಡೆದ ಹನ್ನೆರಡು ವರ್ಷದ ಬಾಲಕಿ ಇನ್ನೇನು ಮನೆಗೆ ತಲುಪಲು ಬರೇ ಹದಿನಾಲ್ಕು ಕಿಲೋಮೀಟರ್ ಮಾತ್ರ ಇರುವಾಗ ಕುಸಿದು ಮೃತಪಟ್ಟಿದ್ದಾಳೆ.
ತೆಲಂಗಾಣದಿಂದ ಛತ್ತೀಸ್ ಗಡದ ಬಿಜಾಪುರ ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಹನ್ನೆರಡು ವರ್ಷದ ಬಾಲಕಿ ಜಮ್ಲೋ ಮಗ್ದಂ ಎಂಬ ಹೆಸರಿನ ದಾರಿ ಮಧ್ಯೆ ಮೃತಪಟ್ಟಳು. ಎರಡು ತಿಂಗಳಿನಿಂದ ತೆಲಂಗಾಣದ ಮೆಣಸಿನ ಗದ್ದೆಯಲ್ಲಿ ಬಾಲಕಿ ಕೆಲಸ ಮಾಡುತ್ತಿದ್ದಳು. ಅವಳ ಜೊತೆ ಕೆಲಸ ಮಾಡುತ್ತಿದ್ದ ಇತರ ಹನ್ನೊಂದು ಮಂದಿಯ ಜೊತೆ ಎಪ್ರಿಲ್ 15ರಂದು ಬಾಲಕಿ ತನ್ನ ಗ್ರಾಮಕ್ಕೆ ಹೊರಟಿದ್ದಳು. ಮನೆ ತಲುಪಲು 14 ಕಿಲೋಮೀಟರ್ ಇರುವಂತೆ ಶನಿವಾರ ಹೊಟ್ಟೆನೋವು ವಾಂತಿಯಾಗಿ ಬಾಲಕಿ ಮೃತಪಟ್ಟಿದ್ದಾಳೆ.
ಬಳಿಕ ಬಾಲಕಿಯ ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಮನೆಗೆ ತಲುಪಿಸಲಾಗಿದೆ. ಬಾಲಕಿಯ ದೇಹದಲ್ಲಿ ಜಲದಂಶ ಕಡಿಮೆಯಾಗಿದ್ದು ಸಾವು ಸಂಭವಿಸಲು ಇದು ಕಾರಣ. ಜೊತೆಗೆ ಪೋಷಕಾಹಾರದ ಕೊರತೆಯೂ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕಿಗೆ ಕೊರೊನಾ ಸೋಂಕಿರಲಿಲ್ಲ. ಬಾಲಕಿಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ. ಕೆಲಸ ಮತ್ತು ಉಳಿದುಕೊಳ್ಳಲು ಸ್ಥಳವಿಲ್ಲದೆ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ನಡೆದು ಹೋಗುತ್ತಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












