ಗೂಡಿನ ಬಳಿಯ ಅಬ್ದುಲ್ ರಹ್ಮಾನ್ ಈಗ ಕೇರಳ ಮಾಧ್ಯಮದಲ್ಲೂ ಸುದ್ದಿ: ಮಕ್ಕಾಕ್ಕೆ ಹೋಗದಿದ್ದರೂ ಅವರು ಇನ್ನು ಮುಂದೆ ನನ್ನ ಪಾಲಿಗೆ ಹಾಜಿ ಎಂದ ಪೋಸ್ಟ್ ವೈರಲ್

0
1709

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಎ. 25: ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು ಈ ಸಮಯದಲ್ಲಿಯೂ ಒಳಿತಿನ ಬೆಳಕು ಹರಡುವ ಕೆಲವು ವ್ಯಕ್ತಿಗಳಿದ್ದಾರೆ. ಹಜ್‍ಗೆ ಹೋಗಲು ತೆಗೆದಿಟ್ಟ ಹಣವನ್ನು ಲಾಕ್‍ಡೌನ್ ವೇಳೆ ಕಷ್ಟಪಡುವವರಿಗೆ ಆಹಾರ ವಸ್ತು ವಿತರಿಸಲು ಖರ್ಚು ಮಾಡಿದ ದ ಕ ಜಿಲ್ಲೆಯ ಗೂಡಿನ ಬಳಿಯ ಅಬ್ದುಲ್ ರಹ್ಮಾನ್ ಈಗ ಕರುಣೆಯ ಹೊಸ ಮಾದರಿಯಾಗಿದ್ದಾರೆ ಎಂದು ಕೇರಳದ ಮಾಧ್ಯಮಂ ಪತ್ರಿಕೆ ವರದಿ ಮಾಡಿದೆ. ಸವಾದ್‍ ರಹ್ಮಾನ್ ಇಬ್ನು ಝುಹ್ರ ಎಂಬವರ ಫೇಸ್‍ಬುಕ್ ಪೋಸ್ಟ್ ನಿಂದ ಮಾಧ್ಯಮಂ ಈ ವರದಿಯನ್ನು ಎತ್ತಿಕೊಂಡಿದೆ.

ಇಬ್ನು ಝುಹ್ರ ಹೀಗೆ ಬರೆಯುತ್ತಾರೆ. “ಐದು ನಿಮಿಷದವರೆಗೆ ಈ ವ್ಯಕ್ತಿ ಅಪರಿಚಿತರಾಗಿದ್ದರು. ಈಗ ಈ ಚಿತ್ರ ನನಗೆ ಪ್ರೊಫೈಲ್ ಚಿತ್ರ ಮಾಡಬೇಕೆಂದು ಅನಿಸುತಿದೆ. ಮಂಗಳೂರಿನ ಬಂಟ್ವಾಳ ತಾಲೂಕಿನ ಇವರು ಕೂಲಿ ಕೆಲಸ ಮಾಡುತ್ತಾರೆ. ಹತ್ತಿರದಲ್ಲಿರುವ ಗೋಣಿ ತುಂಬ ಇರುವುದು ಇವರ ಸಂಪಾದನೆಯಾಗಿದೆ. ಈ ವ್ಯಕ್ತಿ ಇಷ್ಟರವರೆಗೆ ಒಂದು ಕನಸ್ಸಲ್ಲಿ ಬದುಕಿದರು. ಪವಿತ್ರ ಹಜ್ ನಿರ್ವಹಿಸಬೇಕೆಂಬ ಕನಸು ಅದು. ವಾಹನದಲ್ಲಿ ಪ್ರಯಾಣಿಸದೆ, ಕಾಫಿ ಕುಡಿದು, ಸಾಂಬಾರು ಇಲ್ಲದೆ ರೊಟ್ಟಿ ತಿಂದು ಹಜ್ ಯಾತ್ರೆಗೆ ದಾರಿ ವೆಚ್ಚವನ್ನು ಸಂಗ್ರಹಿಸಿದ್ದರು. ಆದರೆ ಹಜ್‍ಗಾಗಿ ಸಂಗ್ರಹಿಸಿದ ಎಲ್ಲ ಹಣವನ್ನು ಬಡವರಿಗೆ ಆಹಾರ ವಸ್ತು ಖರೀದಿಸಲು ವಿನಿಯೋಗಿಸಿದ್ದಾರೆ. ತನ್ನ ಸುತ್ತಲೂ ಆಹಾರ ಇಲ್ಲದೆ ಜನರು ಹಸಿದಿರುವ ಘಟ್ಟದಲ್ಲಿ ತನ್ನ ಕರ್ತವ್ಯ ಮುಗಿದಿಲ್ಲ ಎಂದು ಅವರು ಭಾವಿಸಿರಬಹುದು.

ದೇವನು ಅವರ ಜೀವನದ ಕನಸು ಈಡೇರಿಸಿ ಕೊಡಲಿ. ಇನ್ನು ಮಕ್ಕಕ್ಕೆ ಹೋಗದಿದ್ದರೂ ಗೂಡಿನಬಳಿಯ ಅಬ್ದುಲ್‍ರಹ್ಮಾನ್ ನನಗೆ ಇನ್ನು ಹಾಜಿಯಾಗಿದ್ದಾರೆ. ತಮ್ಮ ಮೇಲೆ ದೇವನ ಕರುಣೆ ಶಾಂತಿ ಇರಲಿ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.