ಬೆಚ್ಚಿಬಿದ್ದ ಉಡುಪಿ: ಒಂದೇ ದಿನದಲ್ಲಿ 150 ಜನರಿಗೆ ಕೊರೋನಾ…!

0
677

ಸನ್ಮಾರ್ಗ ವಾರ್ತೆ

ಉಡುಪಿ: ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಬೆಚ್ಚಿ ಬೀಳುವ ವರದಿಗಳು ಬರುತ್ತಿದೆ. ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಕೊರೋನಾ ಸೋಂಕಿತರ ಸಂಖ್ಯೆ ಇಂದು ಉಡುಪಿಯಲ್ಲಿ ದೃಢವಾಗಿದೆ. ಇಂದು ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 150 ಜನರಿಗೆ ಸೋಂಕು ದೃಢವಾಗಿದ್ದು,
ಇಂದೂ ಕೂಡ ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲೇ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಕುಂದಾಪುರ ತಾಲೂಕಿನಿಂದಲೇ 128 ಪ್ರಕರಣಗಳು ವರದಿಯಾಗಿದ್ದು, ಉಳಿದವು ಉಡುಪಿ ಮತ್ತು ಕಾರ್ಕಳ ತಾಲೂಕುಗಳಿಗೆ ಸೇರಿವೆ, ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂಬಂತೆ  500ರ ಗಡಿಯತ್ತ ಸಾಗಿದೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರ ಆಗಮನ ಹಾಗೂ ಜಿಲ್ಲೆಯಲ್ಲಿ ಹೆಚ್ಚು ಕೊರೋನಾ ಪರೀಕ್ಷೆ ನಡೆಸುತ್ತಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ ಕಂಡು ಬರುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ಕ್ವಾರಂಟೈನ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿರುವುದು ಕೂಡ ಇದಕ್ಕೆ ಕಾರಣವೆಂದು ಜನರು ಬೆಟ್ಟು ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 260 ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿತ್ತು. ಇಂದಿನ 150 ಹೊಸ ಪ್ರಕರಣದಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 410 ಕ್ಕೆ ಏರಿಕೆ ಕಂಡಿದೆ.

ಸದ್ಯ ಕಂಡು ಬರುತ್ತಿರುವ ಸೋಂಕಿತರ ಪೈಕಿ ಬಹಳಷ್ಟು ಮಂದಿ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹೋದವರಿಂದ ಪತ್ತೆಯಾಗಿದೆ. ಮನೆಗೆ ಬಂದವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಇವರ ಸಂಪರ್ಕಕ್ಕೆ ಬಂದ ಮನೆಯವರಿಗೆ, ನೆರೆ ಮನೆಯವರಿಗೆ ಸೋಂಕು ತಗಲುವ ಸಾಧ್ಯತೆ ಬಹುತೇಕ ಇರುವುದು ಖಚಿತವಾಗುತ್ತಿದೆ.

ಮಹಾರಾಷ್ಟ್ರದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನ ಗೃಹ ಕ್ವಾರಂಟೈನ್ ವಿಧಿಸಲು ಚಿಂತಿಸಲಾಗಿದೆ. ಉಳಿದ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಬಗ್ಗೆಯೂ ಚರ್ಚಿಸಲಾಗಿದ್ದು ಶೀಘ್ರವೇ ಮಾರ್ಗಸೂಚಿ ಹೊರಬೀಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.